Site icon Vistara News

Cauvery Dispute : CWRCಗೆ ತಲೆ ಸರಿ ಇದೆಯಾ? KRSನಲ್ಲಿ ಈಗ ಇರುವ ನೀರಿನ ಪ್ರಮಾಣ ನೋಡಿ ನೀವೇ Decide ಮಾಡಿ

Cauvery Back water

ಮಂಡ್ಯ: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನವೂ 5000 ಕ್ಯೂಸೆಕ್‌ (5000 Cusec/per day for 15 days) ನೀರನ್ನು ಬಿಡತಕ್ಕದ್ದು. ಕರ್ನಾಟಕ ತನ್ನ ಆದೇಶವನ್ನು (Order to Karnataka) ಪಾಲಿಸಲೇಬೇಕು; ಹೀಗೊಂದು ಆದೇಶವನ್ನು ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿಗೆ (Cauvery water regulation Committee) ತಲೆ ಸರಿ ಇದೆಯಾ ಎಂದು ಮಂಡ್ಯ ಜನರು ಕೇಳುತ್ತಿದ್ದಾರೆ.

ಇಡೀ ರಾಜ್ಯದಲ್ಲಿ ಬರ ಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯೇ ಬಿದ್ದಿಲ್ಲ. ಕೆಆರ್‌ಎಸ್‌ ಜಲಾಶಯದಲ್ಲಿ ನೀರಿಲ್ಲ. ಒಳಹರಿವು ತೀರಾ ಕಡಿಮೆಯಾಗಿದೆ. ನೀವು ಆದೇಶ ಮಾಡಿದ್ದೀರಿ ಎಂಬ ಒಂದೇ ಕಾರಣಕ್ಕಾಗಿ ನಮ್ಮ ರಾಜ್ಯ ರೈತರಿಗೂ ನೀರು ಹರಿಸದೆ ತಮಿಳುನಾಡಿಗೆ ಕಳೆದ 15 ದಿನದಿಂದ ದಿನವೂ 5000 ಕ್ಯೂಸೆಕ್‌ ನೀರು ಹರಿಸಿದ್ದೇವೆ. ಈಗಲಾದರೂ ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ.. ಈ ಆದೇಶಗಳನ್ನು ನಿಲ್ಲಿಸಿ ಎಂದು ಕರ್ನಾಟಕ ರಾಜ್ಯದ ಅಧಿಕಾರಿಗಳು ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಪರಿಪರಿಯಾಗಿ ವಿನಂತಿ ಮಾಡಿಕೊಂಡಿದ್ದರು.

ಆದರೆ, ತಮಿಳುನಾಡು ಸರ್ಕಾರ ಹಿಂದಿನ ಬಾಕಿ 6500 ಕ್ಯೂಸೆಕ್‌ನ್ನೂ ಸೇರಿಸಿ ಪ್ರತಿದಿನವೂ 12500 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶ ನೀಡಬೇಕು ಎಂದು ವಾದ ಮಾಡಿತು. ಅಂತಿಮವಾಗಿ ನೀರು ನಿಯಂತ್ರಣ ಸಮಿತಿ ತಾನೇನೋ ದೊಡ್ಡ ಉಪಕಾರ ಮಾಡುತ್ತಿದ್ದೇನೆ ಎಂಬರ್ಥದಲ್ಲಿ ಬುಧವಾರ (ಸೆಪ್ಟೆಂಬರ್‌ 13) ಬೆಳಗ್ಗೆಯಿಂದ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್‌ ನೀರು ಬಿಡಲೇಬೇಕು ಎಂದು ಸೂಚನೆ ನೀಡಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಎಂದರೆ ಅದು ಕರ್ನಾಟಕ ಮತ್ತು ತಮಿಳುನಾಡಿನ ಜಲಾಶಯಗಳಲ್ಲಿ ನೀರಿನ ಮಟ್ಟವನ್ನು ಆಧರಿಸಿ ನೀರು ಬಿಡುಗಡೆಗೆ ಸೂಚನೆ ನೀಡುವ, ಹಿಂದಿನ ಆದೇಶಗಳು ಪಾಲನೆಯಾಗುವಂತೆ ನೋಡಿಕೊಳ್ಳುವ ಸಮಿತಿ. ಆದರೆ, ಅದು ಕೇವಲ ತಮಿಳುನಾಡಿನ ಜಲಾಶಯ ಮಟ್ಟವನ್ನು ಮಾತ್ರ ನೋಡುತ್ತಿದೆಯೇ ಎಂಬ ಸಂಶಯವಿದೆ ಎಂದು ಕಾವೇರಿ ಜಲಾನಯನ ಪ್ರದೇಶದ ರೈತರು ಹೇಳಿದ್ದಾರೆ.

ಯಾಕೆಂದರೆ, ಈಗಾಗಲೇ ತಳಹತ್ತಿರುವ ಕೆಆರ್‌ಎಸ್‌ನಿಂದ ಮುಂದಿನ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್‌ ನೀರು ಬಿಟ್ಟರೆ ಪರಿಸ್ಥಿತಿ ಏನಾಗಬಹುದು ಎನ್ನುವುದರ ಸಣ್ಣ ಪರಿವೆಯೂ ಇಲ್ಲದೆ ಅದು ಆದೇಶ ಮಾಡಿದೆ ಎಂದರೆ ಅದರಲ್ಲಿರುವ ವ್ಯಕ್ತಿಗಳ ಬಗ್ಗೆ ಸಂಶಯ ಮೂಡುತ್ತದೆ ಎಂದು ಆಕ್ರೋಶದಿಂದ ಹೇಳುತ್ತಾರೆ ಜನರು.

ಇದನ್ನೂ ಓದಿ: Cauvery dispute: ಇದೆಂಥಾ ಅನ್ಯಾಯ, ಮತ್ತೆ 15 ದಿನ 5000 ಕ್ಯೂಸೆಕ್‌ ನೀರು ಬಿಡಲು CWRC ಆದೇಶ; ಹೇಳೋರು ಕೇಳೋರು ಯಾರೂ ಇಲ್ವ?

ಹಾಗಿದ್ದರೆ ನಿಜಕ್ಕೂ ಕೆಆರ್‌ಎಸ್‌ನ ಪರಿಸ್ಥಿತಿ ಹೇಗಿದೆ.. ನೀವೂ ನೋಡಿ!

ತಮಿಳುನಾಡಿಗೆ ಹದಿನೈದು ದಿನಗಳ ವರೆಗೆ ಪ್ರತೀ ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿಯಿಂದ ಸೂಚನೆ ನೀಡಿದೆ. ಒಂದು ವೇಳೆ ಸಮಿತಿಯ ಸೂಚನೆಯಂತೆ ನೀರು ಹರಿಸಿದ್ದೇ ಆದರೆ ಹದಿನೈದು ದಿನದಲ್ಲಿ ಕೆಆರ್‌ಎಸ್‌ನಲ್ಲಿರುವ ನೀರಿನ ಪ್ರಮಾಣದಲ್ಲಿ 6.25 ಟಿಎಂಸಿ ಕುಸಿಯುತ್ತದೆ.

ಕೃಷ್ಣರಾಜ ಸಾಗರ ಜಲಾಶಯದ ಗರಿಷ್ಠ ಮಟ್ಟ: 124.80 ಅಡಿ
ಈಗ ನೀರು ಇರುವ ಮಟ್ಟ: ಕೇವಲ 97.96 ಅಡಿ
ಟಿಎಂಸಿ ಲೆಕ್ಕಾಚಾರದಲ್ಲಿ ಡ್ಯಾಂನ ಗರಿಷ್ಠ ಮಿತಿ: 49.452 ಟಿಎಂಸಿ
ಈಗ ಇರುವ ನೀರಿನ ಪ್ರಮಾಣ: ಕೇವಲ 21.252 ಟಿಎಂಸಿ
ಕೆಆರ್‌ಎಸ್‌ ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ: 3502 ಕ್ಯುಸೆಕ್‌
ಜಲಾಶಯದಿಂದ ಹೊರ ಹೋಗುತ್ತಿರುವ ಪ್ರಮಾಣ: 4253 ಕ್ಯುಸೆಕ್

ಈಗ ಇರುವ ನೀರಿನ ಪ್ರಮಾಣವಾದ 21.252 ಟಿಎಂಸಿಯಲ್ಲಿ ಸುಮಾರು 4 ರಿಂದ 5 tmc ನೀರು ಡೆಡ್ ಸ್ಟೋರೇಜ್‌. ಅಂದರೆ ಅದರನ್ನು ಬಳಸಲು ಆಗುವುದಿಲ್ಲ ಹಾಗಿದ್ದರೆ ಬಳಕೆಗೆ ಯೋಗ್ಯ ಇರೋದು ಕೇವಲ 16 ಟಿಎಂಸಿ ಮಾತ್ರ.
ಈ 16 ಟಿಎಂಸಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಹೇಳಿದಂತೆ ತಮಿಳುನಾಡಿಗೆ ಹದಿನೈದು ದಿನದಲ್ಲಿ 6 ಟಿಎಂಸಿ ನೀರು ಬಿಟ್ಟಿದ್ದೇ ಆದರೆ ಉಳಿಯುವುದು ಕೇವಲ 10 ಟಿಎಂಸಿ ನೀರು ಮಾತ್ರ

ಈ 10 ಟಿಎಂಸಿ ನೀರನ್ನು ಬೆಂಗಳೂರು, ಮೈಸೂರು ಮಂಡ್ಯ ನಗರಗಳಿಗೆ ಕುಡಿಯುವುದಕ್ಕೆ ಬಳಸಿಕೊಳ್ಳಬೇಕಾದ ಅನಿರ್ವಾಯತೆ ರಾಜ್ಯ ಸರ್ಕಾರದ ಮೇಲಿದೆ. ಮಂಡಳಿ ಇದನ್ಯಾವುದನ್ನೂ ಪರಿಗಣಿಸದೆ ನೀರು ಬಿಡಿ ನೀರು ಬಿಡಿ ಎಂದು ಆದೇಶ ನೀಡಿದ್ದರ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.

Exit mobile version