Site icon Vistara News

Cauvery Dispute : ಕಾವೇರಿಗಾಗಿ ವಾಟಾಳ್‌ ನೇತೃತ್ವದಲ್ಲಿ ಮಂಡ್ಯಕ್ಕೆ ಬೃಹತ್‌ ರ‍್ಯಾಲಿ ; KRS ಮುತ್ತಿಗೆ ಯತ್ನ ವಿಫಲ

Vatal Nagaraj arrested at KRS

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಪ್ರತಿಭಟಿಸಿ (Cauvery Dispute) ವಾಟಾಳ್ ನಾಗರಾಜ್‌ (Vatal Nagaraj) ನೇತೃತ್ವದಲ್ಲಿ ಗುರುವಾರ (ಅ. 5) ಬೆಂಗಳೂರಿನಿಂದ ಮಂಡ್ಯಕ್ಕೆ ಬೃಹತ್‌ ವಾಹನ ರ‍್ಯಾಲಿ (Vehicle rally) ನಡೆಯಿತು. ಆದರೆ, ಕೆಆರ್‌ಎಸ್‌ಗೆ ಮುತ್ತಿಗೆ ಹಾಕುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.

ಬೆಂಗಳೂರಿನ ಮೈಸೂರು ಬ್ಯಾಂಕ್‌ ಸರ್ಕಲ್‌ನಿಂದ ನೂರಾಗು ಬೈಕ್‌, ಕಾರು ಮತ್ತು ಇತರ ವಾಹನಗಳ ರ‍್ಯಾಲಿಯಲ್ಲಿ ಹೊರಟ ಕನ್ನಡ ಪರ ಹೋರಾಟಗಾರರು ರಾಮನಗರ, ಮಂಡ್ಯ ದಾಟಿ ಕೆಆರ್‌ಎಸ್‌ ಅಣೆಕಟ್ಟಿನ ಕಡೆಗೆ ಹೋದರು. ನಡುವೆ ಮಂಡ್ಯದಲ್ಲಿ ರೈತ ಹಿತರಕ್ಷಣಾ ವೇದಿಕೆ ನಡೆಸಿದ ಹೋರಾಟದಲ್ಲಿ ಅವರು ಪಾಲ್ಗೊಂಡರು.

ಕೆಆರ್‌ಎಸ್‌ನಲ್ಲಿ ವಾಟಾಳ್‌ ಹೈಡ್ರಾಮಾ

ವಾಟಾಳ್ ನೇತೃತ್ವದಲ್ಲಿ ಕೆ.ಆರ್.ಎಸ್. ಡ್ಯಾಂ‌ ಮುತ್ತಿಗೆ ಹಾಕಲು ಬರುತ್ತಿರುವ ಸುದ್ದಿ ತಿಳಿದಿದ್ದರಿಂದ ಡ್ಯಾಂ ಬಳಿ ಪೊಲೀಸರು ಅಲರ್ಟ್‌ ಆಗಿದ್ದರು. ಡ್ಯಾಂನಿಂದ 300 ಮೀಟರ್ ದೂರದಲ್ಲೇ ಹೋರಾಟಗಾರರನ್ನು ತಡೆಯಲಾಯಿತು. ಈ ವೇಳೆ ವಾಟಾಳ್‌ ನಾಗರಾಜ್‌, ಕನ್ನಡ ಹೋರಾಟಗಾರರು ಮತ್ತು ಪೊಲೀಸರ ನಡುವೆ ನೂಕಾಟ ನಡೆಯಿತು. ಅಂತಿಮವಾಗಿ ಅವರನ್ನು ಬಂಧಿಸಿ ವ್ಯಾನ್ ನಲ್ಲಿ ಕರೆದೊಯ್ಯಲಾಯಿತು.

ಪೊಲೀಸರಿಗೆ ಕಾವೇರಿ ಪಾಠ ಮಾಡಿದ ವಾಟಾಳ್‌

ತಮ್ಮನ್ನು ತಡೆದ ಪೊಲೀಸರಿಗೆ ವಾಟಾಳ್‌ ನಾಗರಾಜ್‌ ಅವರು ಕಾವೇರಿ ನೀರಿನ ಪಾಠ ಮಾಡಿದರು. ʻʻಕೆಆರ್‌ಎಸ್ ಜಲಾಶಯ ಪವಿತ್ರವಾದದ್ದು. ಬೆಂಗಳೂರಿಗೆ ಕುಡಿಯುವ ನೀರಿಗೆ ಪ್ರಮುಖವಾದದ್ದು ಎಂದು ಹೇಳಿದ ವಾಟಾಳ್‌ ಹೋರಾಟಗಾರರನ್ನು ಎಳೆದಾಡಬೇಡಿ ಎಂದು ತಾಕೀತು ಮಾಡಿದರು.

ʻʻಹಿಂದೆಯೂ ನಮ್ಮ ಹೋರಾಟ ವಿಫಲವಾಗಿಲ್ಲ. ಯಾವ ಪೊಲೀಸರು ಏನೂ ಮಾಡೋಕೆ ಆಗಲ್ಲ. ನೀವು ಮೇಲೆ ಬೀಳೋದು, ಎಳೆದಾಡೋದು ನಿಲ್ಲಿಸಬೇಕು. ಕಾವೇರಿ, ಕಬಿನಿ, ಹೇಮಾವತಿ ನೀರು ನಮ್ಮ ಬಳಕೆಗೆ ಇದೆ. ನಾವು ಡ್ಯಾಂ ಒಳಗೆ ಹೋಗಬೇಕು, ಬಿಡಿ. ಕೆಳಗೆ ಹೋಗಿ ತಾಯಿಗೆ ಕೈ ಮುಗಿದು ಬರುತ್ತೇವೆʼʼ ಎಂದು ಹೇಳಿದರು. ಆದರೆ, ಪೊಲೀಸರು ಬಿಡಲಿಲ್ಲ.

ಆಗ ವಾಟಾಳ್‌ ಅವರು ಮೂರು ದಿನದ ಹಿಂದೆ ಪ್ರಮೋದಾದೇವಿ ಒಡೆಯರ್ ಅವರನ್ನು ಹೇಗೆ ಬಿಟ್ಟಿರಿ ಎಂದು ಪ್ರಶ್ನಿಸಿದರು. ʻʻನೀವು ಕದ್ದುಮುಚ್ಚಿ ನೀರು ಬಿಡುತ್ತಿದ್ದೀರಿ. ಅದು ಗೊತ್ತಾಗುತ್ತದೆ ಅಂತಲೇ ನೀವು ನಮ್ಮನ್ನು ಬಿಡುತ್ತಿಲ್ಲ ʼʼ ಎಂದರು. ಕೊನೆಗೆ ಅವರನ್ನು ಮನವೊಲಿಸಿ ಬಂಧಿಸಲಾಯಿತು.

ಮಂಡ್ಯದಲ್ಲಿ ರೈತ ಹಿತರಕ್ಷಣಾ ವೇದಿಕೆ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡಿದ ವಾಟಾಳ್‌ ಅವರು, ʻʻನೀವು ಯಾವುದೇ ನಿರ್ಧಾರ ಕೈಗೊಂಡ್ರೂ ನಾನು ಮಂಡ್ಯದ ಜನರ ಪರವಾಗಿ ನಿಲ್ಲುತ್ತೇನೆ. ನಿಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ಕರ್ನಾಟಕ ಬಂದ್ ಮಾಡಲಾಯ್ತು.. ಮಂಡ್ಯ ಬಂದ್ ಗೆ ಬೆಂಬಲ ಕೊಡಲಾಯ್ತು.ʼʼ ಎಂದು ನೆನಪಿಸಿದರು.

ಸಿದ್ದರಾಮಯ್ಯನವರೇ ಮೌನ ವಹಿಸಬೇಡಿ ಎಂದ ವಾಟಾಳ್‌

ಮಂಡ್ಯದಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್‌ ಅವರು, ʻʻಸಿಎಂ ಸಿದ್ದರಾಮಯ್ಯನವರೇ ನಿಮಗೆ ಅದ್ಬುತ ಚಿಂತನೆ ಇದೆ, ನೀವೆ ಕೊನೆಯ ಕೊಂಡಿ. ಮುಂದಿನ ದಿನಗಳಲ್ಲಿ ಈ ರಾಜ್ಯ ರೌಡಿಗಳ ಕೈಗೆ ಹೋಗುತ್ತೆ. ರೌಡಿಗಳು ಚುನಾವಣೆಗೆ ನಿಲ್ತಾರೆ. ಅವರ ಗುರುತು ಲಾಂಗ್ ಗುರುತು. ರೌಡಿಗಳೆ ಮುಖ್ಯಮಂತ್ರಿಗಳು ಅಗ್ತಾರೆ. ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಅಟ್ಟಹಾಸ ನಡೆಸುತ್ತಾರೆ. 20 ವರ್ಷದ ಹಿಂದೆಯೇ ನಾನು ಅಸೆಂಬ್ಲಿಯಲ್ಲಿ ಹೇಳಿದ್ದೆ. ಕರ್ನಾಟಕ ಉಳಿಸಿ ರೈತರಿಗೆ ಬೆಂಬಲ ಕೊಡಿ. ನಾನು ರೈತರಿಗೆ ಬೆಂಬಲ ಕೊಡ್ತೇನೆ. ಕಾವೇರಿ ಅಂತ್ಯ ಹೋರಾಟ ನಡೆಯಲೇ ಬೇಕು.ʼʼ ಎಂದರು.

ಇದನ್ನೂ ಓದಿ: Cauvery Water Dispute : ಕಾವೇರಿ ನೀರಿಗಾಗಿ ಬೆಂಗಳೂರು- ಮೈಸೂರು ವಾಟಾಳ್‌ ರ‍್ಯಾಲಿ

Exit mobile version