Site icon Vistara News

Cauvery Dispute : ರಾಜ್ಯಕ್ಕೆ ಮತ್ತೆ ಕಾವೇರಿ ಜಲಾಘಾತ; ಇನ್ನು 20 ದಿನ ನಿರಂತರ ನೀರು ಹರಿಸಲು ಪ್ರಾಧಿಕಾರ ಸೂಚನೆ

Cauvery dispute KRS Dam

ನವದೆಹಲಿ: ಕಾವೇರಿ ಜಲ ವಿವಾದದಲ್ಲಿ (Cauvery Dispute) ರಾಜ್ಯಕ್ಕೆ ಮತ್ತೆ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ನೀರಿಗೆ ಹಾಹಾಕಾರ ಕಾಣಿಸಿಕೊಂಡಿರುವ ನಡುವೆಯೇ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ 2600 ಕ್ಯೂಸೆಕ್ ನೀರು ಬಿಡಲು ಶಿಫಾರಸು ಮಾಡಿರುವ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ಎತ್ತಿ ಹಿಡಿದಿದೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲು ಸೂಚನೆ ನೀಡಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ನವೆಂಬರ್ 1 ರಿಂದ 23ರ ವರೆಗೂ ನಿತ್ಯ 2600 ಕ್ಯೂಸೆಕ್ ಹರಿಸಲು ಸೂಚನೆ ನೀಡಲಾಗಿದೆ. ಈ‌ ಮೊದಲು ನವೆಂಬರ್ 1 ರಿಂದ 15 ವರೆಗೂ 2600 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿಯು ಸೂಚಿಸಿತ್ತು.

ಸೋಮವಾರ (ಅ. 30) ನವ ದೆಹಲಿಯಲ್ಲಿ ನಡೆದಿದ್ದ ವರ್ಚ್ಯುವಲ್‌ ಸಭೆಯಲ್ಲಿ ಸಾಕಷ್ಟು ಚರ್ಚೆಗಳ ಬಳಿಕ ನವೆಂಬರ್ 1 ರಿಂದ 15 ವರೆಗೂ 2600 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿಯು ಸೂಚಿಸಿತ್ತು. ಪ್ರತಿ ಬಾರಿ ಸಿಡಬ್ಲ್ಯುಆರ್‌ಸಿ ಸಭೆ ನಡೆದಾಗಲೂ ನೀರು ಬಿಡುಗಡೆ ಮಾಡುವಂತೆ ರಾಜ್ಯಕ್ಕೆ ಆದೇಶ ನೀಡುವುದು ಈಗ ಕಾಯಂ ಆಗಿದೆ. ಈ ಬಾರಿ ನೀರಿನ ಪ್ರಮಾಣವನ್ನು 2600 ಕ್ಯೂಸೆಕ್‌ಗೆ ಇಳಿಸಿರುವುದಷ್ಟೇ ಸಮಾಧಾನ.

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ಕಾವೇರಿ ನೀರು ನಿಯಂತ್ರಣ ಸಮಿತಿ ನಡೆಸಿದ 89ನೇ ಸಭೆ ಇದಾಗಿತ್ತು. ಕಳೆದ ಐದೂ ಸಭೆಗಳಲ್ಲಿ ಸಮಿತಿಯು ನಿರಂತರವಾಗಿ ಕರ್ನಾಟಕಕ್ಕೆ 15 ದಿನಗಳ ಕಾಲ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂದು ಸೂಚಿಸುತ್ತಲೇ ಬಂದಿತ್ತು. ತಮಿಳುನಾಡು ಪ್ರತಿ ಬಾರಿಯೂ ಪ್ರತಿದಿನ 12500 ಕ್ಯೂಸೆಕ್‌ ನೀರಿಗೆ ಬೇಡಿಕೆ ಇಡುವುದು, ಕರ್ನಾಟಕ ಸರ್ಕಾರ ಬರದ ಕಾರಣ ನೀಡಿ ನಿರಾಕರಿಸುವುದು, ಬಳಿಕ ಸಿಡಬ್ಲ್ಯೂಆರ್‌ಸಿ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಸೂಚಿಸುವುದು ಸಾಮಾನ್ಯ ಪ್ರಕ್ರಿಯೆ ಎಂಬಂತಾಗಿದೆ.

ಇದನ್ನೂ ಓದಿ: Karnataka Drought : 324 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಆಗಸ್ಟ್‌ 26ರಿಂದ ನಿರಂತರ ಆದೇಶ

ಕಾವೇರಿ ನೀರು ನಿಯಂತ್ರಣ ಸಮಿತಿಯು ಆಗಸ್ಟ್‌ 26ರಂದು ನೀಡಿದ ಅದೇಶದಲ್ಲಿ ಆಗಸ್ಟ್‌ 29ರಿಂದ 15 ದಿನಗಳ ಕಾಲ 5000 ಕ್ಯೂಸೆಕ್‌ ನೀರು ಬಿಡಲು ಸೂಚಿಸಿತ್ತು. ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್‌ ನೀರು ಬಿಡಲು ಸೂಚಿಸಿತ್ತು. ಸೆಪ್ಟೆಂಬರ್‌ 26ರಂದು ಇದೇ ಆದೇಶವನ್ನು ರಿಪೀಟ್‌ ಮಾಡಿತ್ತು. ಅಕ್ಟೋಬರ್‌ 12ರಂದು ನೀಡಿದ ಆದೇಶದಲ್ಲಿ ಈ ಪ್ರಮಾಣವನ್ನು 3000ಕ್ಕೆ ಇಳಿಸಿತ್ತು. ಐದನೇ ಮೀಟಿಂಗ್‌ನಲ್ಲಿ ಹರಿಸಬೇಕಾದ ನೀರಿನ ಪ್ರಮಾಣವನ್ನು 2600 ಕ್ಯೂಸೆಕ್‌ಗೆ ಇಳಿಸಿತ್ತು. ಈಗ ಇದೇ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿರುವುದು ವಿಪರ್ಯಾಸ.

Exit mobile version