Site icon Vistara News

Murder Attempt : JDS ಮುಖಂಡನ ಕೊಲೆಗೆ ಪ್ರಾಣ ಸ್ನೇಹಿತನಿಂದಲೇ ಸುಪಾರಿ! ಬೆಂಗಳೂರಿಂದ ಬಂದಿದ್ದರು KILLERS

Murder attempt case

ಮಂಡ್ಯ: ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ (Madddur Hole Anjaneya Temple) ದೇವಾಲಯದ ಆವರಣದಲ್ಲಿ ನಡೆದ ಜೆಡಿಎಸ್‌ ನಾಯಕ ಅಪ್ಪು ಗೌಡ (JDS Leader Appu gowda) ಅವರ ಕೊಲೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಈ ಕೊಲೆ ಯತ್ನದಲ್ಲಿ ಭಾಗಿಯಾದ ಎಲ್ಲ ಆರು ಮಂದಿ ಆರೋಪಿಗಳನ್ನು ಮದ್ದೂರು ಠಾಣೆಯ ಕಾನ್‌ಸ್ಟೇಬಲ್‌ ಕುಮಾರ್‌ (Constable kumar) ಅವರ ಸಾಹಸದಿಂದ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ. ಅಚ್ಚರಿ ಎಂದರೆ, ಇದೊಂದು ಸುಪಾರಿ ಕೊಲೆ ಯತ್ನವಾಗಿದ್ದು (Murder attempt) ಇದಕ್ಕೆ ಸುಪಾರಿ ಕೊಟ್ಟಿದ್ದು ಅಪ್ಪು ಗೌಡ ಅವರ ಹಳೆಯ ಸ್ನೇಹಿತ ಮಧು ಎನ್ನುವುದು ಈಗ ಬಯಲಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರಿನ ಲೀಲಾವತಿ ಬಡಾವಣೆ ನಿವಾಸಿಯಾಗಿರುವ ಅಪ್ಪು ಗೌಡ ಇತ್ತೀಚಿನವರೆಗೂ ಕಾಂಗ್ರೆಸ್‌ನಲ್ಲಿದ್ದು ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ಗೆ ಬಂದಿದ್ದರು. ಅವರು ಶನಿವಾರ ಮುಂಜಾನೆ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದಾಗ ಅವರ ಮೇಲೆ ಅಟ್ಯಾಕ್‌ ಆಗಿತ್ತು. ಈ ಹಂತದಲ್ಲಿ ಅಪ್ಪು ಗೌಡ ಅವರ ಜತೆಗಿದ್ದ ಗೆಳೆಯರು ಹಾಗೂ ಅಲ್ಲೇ ಇದ್ದ ಕಾನ್‌ಸ್ಟೇಬಲ್‌ ಕುಮಾರ್‌ ಅವರ ಸಾಹಸಿಕತೆಯಿಂದ ಆರೋಪಗಳಿಗೆ ಹೆಚ್ಚು ದಾಳಿ ನಡೆಸಲು ಸಾಧ್ಯವಾಗಲಿಲ್ಲ. ಅವರು ಹೆದರಿ ಓಡಿದ್ದರು. ಟಾಟಾ ಸುಮೋದಲ್ಲಿ ಪರಾರಿಯಾದ ಇವರನ್ನು ಕುಮಾರ್‌ ಅವರು ಬೈಕ್‌ನಲ್ಲಿ ಬೆನ್ನಟ್ಟಿದ್ದಲ್ಲದೆ ಠಾಣೆಗೆ ವಿಷಯ ತಿಳಿಸಿ ಹಲಗೂರು ಬಳಿ ಟಾಟಾ ಸುಮೋ ಅಡ್ಡ ಹಾಕಿ ಆರೋಪಿಗಳನ್ನು ವಶಕ್ಕೆ ಪಡೆಯಲು ಸಾಧ್ಯವಾಯಿತು.

Attempt to murder JDS leader

ಕೊಲೆಗೆ ಸುಪಾರಿ ಕೊಟ್ಟಿದ್ದು ಸ್ನೇಹಿತ ಮಧು!

ಟಾಟಾ ಸುಮೋದಲ್ಲಿ ಪರಾರಿಯಾಗುತ್ತಿದ್ದ ಆರು ಮಂದಿಯನ್ನು ಹಿಡಿದು ವಿಚಾರಿಸಿದಾಗ ತಿಳಿದು ಬಂದ ಸಂಗತಿಯೇನೆಂದರೆ, ಈ ಯುವಕರೆಲ್ಲರೂ ಬೆಂಗಳೂರಿನ ಸುಪಾರಿ ಕಿಲ್ಲರ್‌ಗಳು. ಅವರಿಗೆ ಸುಪಾರಿ ಕೊಟ್ಟಿದ್ದು ಮಧು.

ಮದ್ದೂರು ತಾಲೂಕಿನ ಕೋಣಸಾಲೆ ನಿವಾಸಿಯಾಗಿರುವ ಮಧು ಕೂಡಾ ಜೆಡಿಎಸ್‌ ನಾಯಕನಾಗಿದ್ದು ಅಪ್ಪು ಗೌಡನೊಂದಿಗೆ ಹಲವು ವರ್ಷಗಳ ಸ್ನೇಹ ಹೊಂದಿದ್ದಾನೆ. ಮಧು ಹಾಗೂ ಅಪ್ಪುಗೌಡ ಹಿಂದಿನಿಂದಲೂ ಜತೆಯಾಗಿಯೇ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿದ್ದರು.

ಈ ನಡುವೆ ಅವರಿಬ್ಬರ ನಡುವೆ ಎರಡು ಕೋಟಿ ವ್ಯವಹಾರ ವಿಚಾರವಾಗಿ ಗಲಾಟೆ ನಡೆದಿತ್ತು. ಹಲವು ಬಾರಿ ಅಪ್ಪುಗೌಡರಿಂದ ಹಣ ಪಡೆದಿದ್ದ ಮಧು ಇತ್ತೀಚೆಗೆ ವ್ಯವಹಾರದಲ್ಲಿ ತಪ್ಪಾಗಿ ನಡೆದುಕೊಂಡಿದ್ದ. ಹೀಗಾಗಿ ಅಪ್ಪು ಗೌಡ ಅವನ ವಿರುದ್ಧ ಚೆಕ್ ಬೌನ್ಸ್ ‌ಕೇಸ್ ದಾಖಲಿಸಿದ್ದ. ಇದೇ ಜಿದ್ದಿನಲ್ಲಿ ಮಧು ಅಪ್ಪು ಗೌಡನ ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ.

ಇದನ್ನೂ ಓದಿ Murder Attempt: JDS ನಾಯಕನ ಹತ್ಯೆ ತಡೆದಿದ್ದು ಒಬ್ಬ ಪೊಲೀಸ್ ಕಾನ್‌ಸ್ಟೆಬಲ್‌! ದುಷ್ಕರ್ಮಿಗಳನ್ನು ಬೆನ್ನಟ್ಟಿ ಹಿಡಿದ ಸಾಹಸಿ!

ಕೊಲೆ ಯತ್ನ ನಡೆದ ಜಾಗ

ಮೂರು ದಿನಗಳಿಂದ ಹೊಂಚು ಹಾಕಿದ್ದ ಆರೋಪಿಗಳು

ಮಧುವಿನಿಂದ ಲಕ್ಷಾಂತರ ರೂಪಾಯಿ ಸುಪಾರಿ ಪಡೆದ ಈ ಕಿರಾತಕರು ಕಳೆದ ನಾಲ್ಕು ದಿನಗಳಿಂದ ಅಪ್ಪು ಗೌಡನ ಹಿಂದೆ ಮುಂದೆ ಸುತ್ತುತ್ತಿದ್ದಾರೆ ಎಂದು ಹೇಳಲಾಗಿದೆ. ಶುಕ್ರವಾರ ಮದ್ದೂರಮ್ಮನ ದೇವಾಲಯದ ಬಳಿ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಆರೋಪಿಗಳು ಅಲ್ಲಿ ಜನ ಜಾಸ್ತಿ ಇದ್ದ ಹಿನ್ನೆಲೆಯಲ್ಲಿ ಶನಿವಾರ ದಾಳಿ ನಡೆಸಿದರು ಎನ್ನಲಾಗಿದೆ.

ಅಪ್ಪುಗೌಡ ಪ್ರತೀ ಶನಿವಾರ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಬರುತ್ತಿದ್ದ. ಈ ವಿಚಾರವನ್ನು ಸುಪಾರಿ ಹಂತಕರಿಗೆ ಮೊದಲೇ ತಿಳಿಸಲಾಗಿತ್ತು ಎಂದು ತಿಳಿದುಬಂದಿದೆ. ಆರು ಮಂದಿಯಲ್ಲಿ ಇಬ್ಬರು ಡ್ಯಾಗರ್‌ ಮತ್ತು ಲಾಂಗ್‌ನೊಂದಿಗೆ ದಾಳಿ ನಡೆಸಿದ್ದರೂ ಪೊಲೀಸ್‌ ಕಾನ್ಸ್‌ಟೆಬಲ್‌ ಕುಮಾರ್‌ ಅವರ ಸಾಹಸಿಕ ಹೋರಾಟದಿಂದ ಕೊಲೆ ತಪ್ಪಿದೆ. ಅಪಾಯದಿಂದ ಪಾರಾಗಿರುವ ಅಪ್ಪು ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇತ್ತ ಮಧು ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.

Exit mobile version