Site icon Vistara News

Congress Karnataka : ಡಿಕೆಶಿ ಸಿಎಂ ಆಗೋದರಲ್ಲಿ ಅನುಮಾನವೇ ಇಲ್ಲ ಎಂದ ಮತ್ತೊಬ್ಬ ಶಾಸಕ! ಹೈಕಮಾಂಡ್‌ ಮಾತಿಗೆ ಇಲ್ಲ ಬೆಲೆ

Kadalur Uday

ಮಂಡ್ಯ: ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕಾಂಗ್ರೆಸ್‌ ಶಾಸಕ ಕದಲೂರು ಉದಯ್ (MLA Kadalur Uday) ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ (Congress High Command) ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಸೂಚನೆಯನ್ನು ಮೀರಿ ಪುನಃ “ಸಿಎಂ ಗಾದಿ” ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಈ ಹೇಳಿಕೆಯನ್ನು ಈಗ ಹೇಗೆ ಪರಿಗಣಿಸಲಾಗುತ್ತದೆ ಎಂಬುದು ಮುಖ್ಯವಾಗಿದೆ.

ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕದಲೂರು ಉದಯ್, ಮುಖ್ಯಮಂತ್ರಿ ಸ್ಥಾನಕ್ಕೇರಲು ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲ ರೀತಿಯ ಅರ್ಹತೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಡಿ.ಕೆ. ಶಿವಕುಮಾರ್‌ ಬಹಳಷ್ಟು ಶ್ರಮಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಗೆ ಸಾಕಷ್ಟು ದುಡಿದಿದ್ದಾರೆ. ರಾಜ್ಯದಲ್ಲಿ 135 ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಅವರಿಗೂ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂಬುದು ನನ್ನ ಆಸೆಯಾಗಿದೆ ಎಂದು ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡಿದಾಗಿನಿಂದಲೂ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದಾರೆ. ಸಾತನೂರು, ಕನಕಪುರಗಳಂತ ಪ್ರಬಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಘಟಾನುಘಟಿ ಅಭ್ಯರ್ಥಿಯಾಗಿದ್ದಂತಹ ಪಿಜಿಆರ್ ಸಿಂಧ್ಯಾ ಅವರನ್ನು ಸೋಲಿಸಿದ್ದಾರೆ. ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅಪಾರ ಪ್ರೀತಿ ಇದೆ. ಪಕ್ಷವನ್ನು ಉಳಿಸಿ ಬೆಳೆಸಬೇಕೆಂಬ ಸಾಕಷ್ಟು ಇಚ್ಚಾಶಕ್ತಿ ಅವರಿಗೆ ಇದೆ. ಪಕ್ಷ ಸಂಘಟನೆಗಾಗಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಗಟ್ಟಿಯಾಗಿ ಬೇರೂರುತ್ತದೆ ಎಂದು ಶಾಸಕ ಕದಲೂರು ಉದಯ್ ಹೇಳಿದರು.

ಶಾಸಕರು, ಸಚಿವರಿಗೆ ವಾರ್ನಿಂಗ್ ನೀಡಿದ್ದ ಡಿಕೆಶಿ!

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಗಾದಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಚಿವರು ಮತ್ತು ಶಾಸಕರ ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗೆ ಬ್ರೇಕ್‌ ಹಾಕಲು ಕೆಪಿಸಿಸಿ ಅಧ್ಯಕ್ಷ, ಡಿ.ಕೆ. ಶಿವಕುಮಾರ್‌ (DCM DK Shivakumar) ಬ್ರೇಕ್‌ ಹಾಕಲು ಮುಂದಾಗಿದ್ದಾರೆ. ಯಾರೂ ರಾಜಕೀಯ ಭವಿಷ್ಯವನ್ನು (Political Future) ಹಾಳು ಮಾಡಿಕೊಳ್ಳಲು ಹೋಗಬೇಡಿ. ಜತೆಗೆ ಪಕ್ಷದ ಭವಿಷ್ಯವನ್ನು ಸಹ ಹಾಳು ಮಾಡಬಾರದು ಎಂದು ಬೆಂಗಳೂರಿನಲ್ಲಿ ಶನಿವಾರ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: Karnataka Politics : ಇನ್ನೂ 5 ತಿಂಗಳು ಟೈಂ ಕೊಡ್ತೀನಿ, ಕಾಂಗ್ರೆಸ್‌ನಿಂದ 50 ಶಾಸಕರನ್ನು ಸೆಳೆಯಿರಿ: ಪ್ರಿಯಾಂಕ್‌ ಖರ್ಗೆ

ಸಿಎಂ ನಿವಾಸದಲ್ಲಿ ನಡೆದ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ನಲ್ಲಿ (Breakfast meeting) ಈ ರೀತಿಯಾಗಿ ಸೂಚನೆ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಇನ್ನು ಸಿಎಂ ಸಿದ್ದರಾಮಯ್ಯ ಸಹ ಮುಂದೆ ಯಾರೂ ಸಹ ಸಿಎಂ ಗಾದಿ ಬಗ್ಗೆ ಪ್ರಸ್ತಾಪ ಮಾಡಬಾರದು ಎಂದು ಸೂಚನೆ ನೀಡಿದ್ದರು. ಇದರ ಹೊರತಾಗಿಯೂ ಮತ್ತೆ ಮತ್ತೆ ಶಾಸಕರು ಮಾತನಾಡುತ್ತಲೇ ಇದ್ದಾರೆ.

Exit mobile version