ಮಂಡ್ಯ: ಜಯದೇವ ಹೃದ್ರೋಗ ಆಸ್ಪತ್ರೆಯನ್ನು (Jayadeva Heart Hospital) ದೇಶದ ನಂಬರ್ ಸಂಸ್ಥೆಯಾಗಿ ರೂಪಿಸಿದ ಕೀರ್ತಿಯೊಂದಿಗೆ ನಿವೃತ್ತರಾಗಿರುವ ಡಾ. ಸಿ.ಎನ್. ಮಂಜುನಾಥ್ (Dr. CN Manjunath) ಅವರು ಲೋಕಸಭಾ ಚುನಾವಣೆಯಲ್ಲಿ (Parliament Elections 2024) ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಡುತ್ತಿದೆ. ಅವರು ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ (BJP-JDS Coaliton) ಹುರಿಯಾಳಾಗಿ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸುತ್ತಾರಂತೆ, ಮಂಡ್ಯದಿಂದ ಕಣಕ್ಕಿಳಿಯುತ್ತಾರಂತೆ ಎಂಬ ಸುದ್ದಿಗೆ ಇದೀಗ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿಲ್ಲ, ಆಲೋಚನೆಯಲ್ಲಿ ಇದ್ದೇನೆ ಎಂದು ಅವರು ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಜನರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತಾಡುತ್ತಾ ಇದ್ದಾರೆ. ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ಬರಬೇಕಾ, ಲೋಕಸಭೆಗೆ ನಿಲ್ಲಬೇಕಾ ಎಂದು ನಿರ್ಧಾರ ಮಾಡಿಲ್ಲ ಎಂದು ಹೇಳಿದರು.
ʻʻಹಲವು ಕಡೆ ಜನರು ಒತ್ತಡ ಹಾಕುತ್ತಾ ಇದ್ದಾರೆ. ರಾಜ್ಯ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಾ. ಇದೇ ರೀತಿ ರಾಷ್ಟ್ರ ಮಟ್ಟದಲ್ಲೂ ಈ ರೀತಿಯ ಸುಧಾರಣೆ ಯಾಕೆ ತರಬಾರದು ಎಂದು ಹೇಳ್ತಾ ಇದ್ದಾರೆ. ಆದರೆ, ನಾನು ಇನ್ನೂ ನಿರ್ಧಾರ ಮಾಡಿಲ್ಲ. ಮುಂದೆ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದ್ರೆ ಹೇಳ್ತೀನಿʼʼ ಎಂದು ಅವರು ಹೇಳಿದರು.
ʻʻನಾನು ಈಗಲೂ ಆಲೋಚನೆಯಲ್ಲಿಯೇ ಇದ್ದೇನೆ. ಲೋಕಸಭೆ ಪ್ರವೇಶ ಕೇವಲ ರಾಜಕೀಯ ಮೂಲಕವೇ ಅಲ್ಲ. ಲೋಕಸಭೆನೇ ಬೇರೆ ರಾಜಕೀಯವೇ ಬೇರೆ ಎನ್ನುವುದು ನನ್ನ ಅರ್ಥ. ಸದ್ಯ ಆಲೋಚನೆಯಲ್ಲಿ ಇದ್ದೇನೆ. ಮುಂದೆ ಈ ಬಗ್ಗೆ ಸ್ಪಷ್ಟ ನಿಲುವು ಹೇಳ್ತೀನಿʼʼ ಎಂದು ಅವರು ನುಡಿದರು.
ʻʻಆರೋಗ್ಯ ಕ್ಷೇತ್ರದಲ್ಲಿ ಜನಸೇವೆ ಮಾಡಿದ್ದೀರಿ ರಾಷ್ಟ್ರ ಮಟ್ಟದಲ್ಲಿ ಜನಸೇವೆಗೆ ಅವಕಾಶವಿದೆ ಹೋಗಿ ಎನ್ನುತ್ತಿದ್ದಾರೆ. ಒಂದು ಜಿಲ್ಲೆಗೆ ಹೋದಾಗ ಆ ಜಿಲ್ಲೆಯವರು ಹೇಳ್ತಾರೆ. ನಾಳೆ ಮೈಸೂರಿಗೆ ಹೋಗ್ತಾ ಇದೀನಿ. ಹೋದಲ್ಲಿ ಎಲ್ಲಾ ಅಲ್ಲಿ ನಿಲ್ಲುತ್ತೀರಾ ಅಂತಾರೆ ಜನರು. ನಾನು ರಾಜಕೀಯ ಕ್ಷೇತ್ರಕ್ಕೆ ಹೋಗಬೇಕಾ ಬೇಡ್ವಾ ಎನ್ನೋ ನಿರ್ಧಾರವೇ ಮಾಡಿಲ್ಲʼʼ ಎಂದು ಡಾ. ಮಂಜುನಾಥ್ ನುಡಿದರು.
ಇದನ್ನೂ ಓದಿ : CM Siddaramaiah : ಎಲ್ಲ ಸರ್ಕಾರಿ ಆಸ್ಪತ್ರೆಗಳು ಜಯದೇವದಂತೆ ಇರಲು ಯಾಕೆ ಸಾಧ್ಯವಿಲ್ಲ: ಸಿಎಂ ಪ್ರಶ್ನೆ
ಜಯದೇವ ಸಂಸ್ಥೆ ಬಗ್ಗೆ ತನಿಖೆ ಯಾಕೆ ಎಂಬ ಬಗ್ಗೆ ಗೊತ್ತಿಲ್ಲ
ಜಯದೇವ ಸಂಸ್ಥೆಯ ಬೇರೆ ಆಸ್ಪತ್ರೆಗಳಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಸರ್ಕಾರದಿಂದ ತನಿಖೆಗೆ ಚಿಂತನೆ ನಡೆದಿದೆ ಎಂಬ ಸುದ್ದಿಗಳ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯೆ ನೀಡಿದ ಮಂಜುನಾಥ್ ಅವರು, ಯಾವ ಕಾರಣಕ್ಕೆ ತನಿಖೆ ಮಾಡಬೇಕು ಎಂದುಕೊಂಡಿದ್ದಾರೋ ಗೊತ್ತಿಲ್ಲ ಎಂದರು.
ʻʻಜಯದೇವ ಸಂಸ್ಥೆಯನ್ನು ಇಡೀ ರಾಷ್ಟ್ರದಲ್ಲಿ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಗೊಳಿಸಿದ್ದೇವೆ. ಈ ಸರ್ಕಾರ ಹಾಗೂ ಹಿಂದಿನ ಸರ್ಕಾರ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಯಾವ ಕಾರಣಕ್ಕೆ ತನಿಖೆ ಮಾಡಬೇಕು ಅಂದುಕೊಂಡಿದ್ದಾರೋ ಗೊತ್ತಿಲ್ಲʼʼ ಎಂದು ಹೇಳಿದರು.
ʻʻಕೇಂದ್ರ ಆರೋಗ್ಯ ಸ್ಥಾಯಿ ಸಮಿತಿ ನಮ್ಮ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಕಾರ್ಯವೈಖರಿ, ನಿರ್ವಹಣೆ ನೋಡಿ ಇದರ ಮಾಲೀಕರು ಯಾರು ಎಂದು ಕೇಳಿದ್ದರು. ನಿಜವೆಂದರೆ, ಸರ್ಕಾರಕ್ಕೆ ಇದು ಸಾಧನೆಯ ಶೋಕೇಸ್ ಸಂಸ್ಥೆಯಾಗಿದೆ. ಜಯದೇವ ರೀತಿ ಸರ್ಕಾರಿ ಸಂಸ್ಥೆಗಳನ್ನು ಯಾಕೆ ಅಭಿವೃದ್ಧಿ ಮಾಡಬಾರದು ಎಂದು ಸರ್ಕಾರವೇ ಕೇಳಿದೆʼʼ ಎಂದು ನೆನಪಿಸಿದರು.