ಮಂಡ್ಯ: ಕಾವೇರಿ ನದಿಯಲ್ಲಿ (Cauvery River) ಮುಳುಗಿ ಬಾಲಕರಿಬ್ಬರು (Drowned in water) ದುರ್ಮರಣ ಹೊಂದಿದ್ದಾರೆ. ಮೈಸೂರಿನ ಶ್ರೀರಂಗಪಟ್ಟಣದ ಗಂಜಾಮ್ ಸಮೀಪದ ನಿಮಿಷಾಂಭ ದೇಗುಲ (Nimishamba Temple) ಬಳಿ ಘಟನೆ ನಡೆದಿದೆ. ವಿಶಾಲ್ (19), ರೋಹಣ್ (17) ಮೃತ ದುರ್ದೈವಿಗಳು.
ಕಾವೇರಿ ನದಿಯಲ್ಲಿ ವಿಶಾಲ್ ಹಾಗೂ ರೋಹಣ್ ಈಜಲು ಹೋದ ಈ ದುರ್ಘಟನೆ ನಡೆದಿದೆ. ಬೆಂಗಳೂರು ಮತ್ತು ತಮಿಳುನಾಡು ಮೂಲದ ಯುವಕರು ಮೈಸೂರಿನ ಅಜ್ಜಿ ಮನೆಗೆ ಬಂದಿದ್ದರು. ಕುಟುಂಬಸ್ಥರ ಜತೆ ನಿಮಿಷಾಂಭ ದೇಗುಲಕ್ಕೆ ಬಂದಿದ್ದರು.
ಈ ವೇಳೆ ಈಜಲು ಬಾರದೆ ಇದ್ದರೂ ನೀರಿಗೆ ಇಳಿದಿದ್ದಾರೆ. ಆದರೆ ಕಳೆದೊಂದು ವಾರದಿಂದ ಸುರಿದ ಮಳೆಗೆ ನೀರಿನ ಪ್ರಮಾಣ ಹೆಚ್ಚಾಗಿತ್ತು. ನೀರಿನ ರಭಸಕ್ಕೆ ಯುವಕರಿಬ್ಬರು ಕೊಚ್ಚಿ ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಸ್ಥಳೀಯ ಈಜುಗಾರರ ನೆರವಿನಿಂದ ಶವಗಳನ್ನು ಮೇಲೆಕ್ಕೆತ್ತಿಸಿದ್ದಾರೆ.
ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಜ್ಜಿ ಮನೆಗೆಂದು ಬಂದವರು ವಾಪಸ್ ಹೆಣವಾಗಿ ಹೋಗಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Karnataka Rain : ಮಳೆ ಅವಾಂತರ: ತರಗತಿ ನಡೆಯುವಾಗಲೇ ಮಕ್ಕಳ ಮೇಲೆ ಕುಸಿದು ಬಿದ್ದ ಚಾವಣಿ
ಕಾರು ಡಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಸವಾರ ಸಾವು
ಕೋಲಾರದ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಗ್ರಾಮದ ಬಳಿ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲ್ಲೂರು ಗ್ರಾಮದ ನಾಗರಾಜ (50) ಮೃತ ದುರ್ದೈವಿ.
ಚವರ್ಲೈಟ್ ಕಾರು ಹಾಗೂ ಸೂಪರ್ ಎಕ್ಸ್ ಎಲ್ ಸ್ಕೂಟರ್ ನಡುವೆ ಅಪಘಾತ ನಡೆದಿದೆ. ನಾಗರಾಜ ಅವರು ಸ್ಕೂಟರ್‌ನಲ್ಲಿ ಮನೆಯಿಂದ ತೋಟದ ಕಡೆಗೆ ಹೊರಟಿದ್ದರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಾಗರಾಜ ರಸ್ತೆ ಬದಿಯ ಡಿವೈಡರ್ ಹಾರಿ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಕಾರಿಗೆ ಬೈಕ್ ಡಿಕ್ಕಿ; ಹಾರಿ ಬಿದ್ದ ಸವಾರರು
ಶಿವಮೊಗ್ಗ ತಾಲೂಕಿನ ಯಡೆಹಳ್ಳಿ ಗ್ರಾಮದ ಬಳಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗದ ಕಡೆಯಿಂದ ಹೋಗುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ.
ಹೊಳೆ ಬೈರನಹಳ್ಳಿ ಗ್ರಾಮದ ಮೂವರು ಯುವಕರು ಒಂದೇ ಬೈಕ್ ಹೊರಡುವಾಗ ನಿಯಂತ್ರಣ ತಪ್ಪಿ ಕಾರಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಮೂವರು ಹಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು. ಕೈ-ಕಾಲುಗಳಿಗೆ ಗಾಯವಾಗಿದ್ದು, ಮೂವರನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕಾರು ರಿವರ್ಸ್ ತೆಗೆಯುವಾಗ ಸ್ಕೂಟಿಗೆ ಡಿಕ್ಕಿ
ಕಾರು ರಿವರ್ಸ್ ತೆಗೆಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಸ್ಕೂಟಿಗೆ ಡಿಕ್ಕಿಯಾಗಿದೆ. ಸ್ಕೂಟಿಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಸಂಡೇ ಮಾರ್ಕೆಟ್ ಬಳಿ ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ.
ಸ್ಕೂಟಿಯಲ್ಲಿದ್ದ ಎಲಿಜಬೆತ್ ಕಲ್ವಕುರಿ, ಯೇಸುದಾಸ್ ಕಲ್ವಕುರಿ ಎಂಬುವವರಿಗೆ ಗಂಭೀರ ಗಾಯವಾಗಿದೆ. ಮಹಿಳೆಯೊಬ್ಬರು ತಮ್ಮ ಕಾರನ್ನು ರಿವರ್ಸ್ ತೆಗೆಯುವಾಗ ಈ ಅವಘಡ ನಡೆದಿದೆ. ಗಾಯಾಳುಗಳು ಧಾರವಾಡ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ