Site icon Vistara News

Fire Accident : ಮಂಡ್ಯದಲ್ಲಿ ಪಟಾಕಿ ಸ್ಫೋಟ; ಕಾರ್ಮಿಕ ಸಾವು, ಮತ್ತಿಬ್ಬರು ಗಂಭೀರ

Fire Accident Firecrackers

ಮಂಡ್ಯ : ಮಂಡ್ಯದಲ್ಲಿ ಪಟಾಕಿ (Firecrackers) ಸ್ಫೋಟಗೊಂಡು (Fire Accident) ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ. ಮಂಡ್ಯ ತಾಲೂಕಿನ ಜಿ.ಕೆಬ್ಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ತಮಿಳುನಾಡು ಮೂಲದ ರಮೇಶ್ (67) ಮೃತ ದುರ್ದೈವಿ.

ನಾಗಲಿಂಗ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಬ್ಬಳ್ಳಿ ಗ್ರಾಮದಲ್ಲಿ ಕಾಲಭೈರವೇಶ್ವರ ಹಬ್ಬಕ್ಕೆಂದು ಪಟಾಕಿ ಸಿಡಿಸಲು ತಮಿಳುನಾಡಿನಿಂದ ನಾಲ್ವರು ಆಗಮಿಸಿದ್ದರು. ನಿನ್ನೆ ಭಾನುವಾರ ರಾತ್ರಿ ಗ್ರಾಮದಲ್ಲಿ ಅದ್ಧೂರಿಯಾಗಿ ಹಬ್ಬ ನೆರವೇರಿತ್ತು. ಬಳಿಕ ಗ್ರಾಮದ ಆಲೆಮನೆಯೊಂದರಲ್ಲಿ ನಾಲ್ವರು ತಂಗಿದ್ದರು.

ಇಂದು ಸೋಮವಾರ ಬೇರೊಂದು ಗ್ರಾಮಕ್ಕೆ ಹೋಗಲು ಪಟಾಕಿಗಳನ್ನು ತುಂಬುವಾಗ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಹೆಂಚುಗಳು ಹಾರಿಹೋಗಿ ಜತೆಗೆ ಆಲೆಮನೆಯು ಹೊತ್ತಿಉರಿದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ.

ಸ್ಥಳಕ್ಕೆ ಡಿಸಿ ಡಾ ಕುಮಾರ್, ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರ್ಮಿಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆರೆಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Self Harming : ಪತಿಯ ಅಗಲಿಕೆಯಿಂದ ಮನನೊಂದು ಪತ್ನಿ ಆತ್ಮಹತ್ಯೆ; ಸಾವಿನಲ್ಲಿ ಒಂದಾದ ಮಗಳು

ಕಣ್ಣೆದುರೇ ಹೊತ್ತಿ ಉರಿದ ಬೆಳೆ, ನಂದಿಸಲು ಹೋಗಿ ತಾನೇ ಆಹುತಿಯಾದ ರೈತ ಮಹಿಳೆ

ಹಾಸನ: ತನ್ನ ಕಣ್ಣೆದುರೇ ಜಮೀನಿನ ಬೆಳೆ (Agriculture field) ಬೆಂಕಿಗೆ ಆಹುತಿಯಾಗಿ (Fire Accident) ಹೊತ್ತಿ ಉರಿಯುತ್ತಿದ್ದುದನ್ನು ಕಂಡು ಏನು ಮಾಡುವುದೆಂದು ತಿಳಿಯದೆ ರೈತ ಮಹಿಳೆ (Woman Farmer) ಬೆಂಕಿಯನ್ನು ನಂದಿಸಲು ಮುನ್ನುಗ್ಗಿ ತಾನೇ ಬೆಂಕಿಗೆ ಆಹುತಿಯಾಗಿದ್ದಾರೆ.

ಹಾಸನ ಜಿಲ್ಲೆ (Hasana News) ಆಲೂರು ತಾಲ್ಲೂಕಿನ ಹಾಚಗೋಡನಹಳ್ಳಿ ಗ್ರಾಮದಲ್ಲಿ ಬೆಂಕಿ ಆರಿಸಲು ಹೋದ ರೈತ ಮಹಿಳೆಯೇ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ರತ್ನಮ್ಮ (63) ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ ರೈತ ಮಹಿಳೆ.

ಮಾರ್ಚ್‌ 24ರ ಭಾನುವಾರ ರಾತ್ರಿ ರತ್ನಮ್ಮ ಅವರು ತಮ್ಮ ಜಮೀನಿಗೆ ಬೆಂಕಿ ಬಿದ್ದ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದರು. ಕಣ್ಣೆದುರೇ ಬೆಳೆ ನಾಶವಾಗುತ್ತಿತ್ತು. ಏನು ಮಾಡುವುದೆಂದು ತಿಳಿಯದಾದ ರತ್ನಮ್ಮ ತಾವೇ ಮುನ್ನುಗ್ಗಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಅದು ಅವರ ಕೈ ಮೀರಿದ ಬೆಂಕಿಯಾಗಿತ್ತು. ಜೋರಾಗಿ ಉರಿಯುತ್ತಿದ್ದ ಬೆಂಕಿಗೆ ಸಿಲುಕಿದ ರತ್ನಮ್ಮ ಬೆಂಕಿಯಿಂದ ಹೊರಬರಲಾರದೆ ಸ್ಥಳದಲ್ಲೇ ಮೃತಪಟ್ಟರು.

ಸ್ಥಳೀಯರು ಅವರನ್ನು ರಕ್ಷಿಸಲು ಯತ್ನಿಸಿದರೂ ಫಲ ಸಿಗಲಿಲ್ಲ. ರತ್ನಮ್ಮ ಅವರ ಮೃತದೇಹವನ್ನು ಆಲೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಇದಾಗಿದೆ. ಇದೇ ಠಾಣೆ ವ್ಯಾಪ್ತಿಯಲ್ಲಿ ವಾರದ ಹಿಂದೆ ಮತ್ತೊಬ್ಬರು ಬೆಂಕಿ ಆರಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ : Fire Accident: ದೇಗುಲದಲ್ಲಿ ಅಗ್ನಿ ದುರಂತ; 13 ಜನಕ್ಕೆ ಗಾಯ, ಸಿಎಂ ಸ್ವಲ್ಪದರಲ್ಲೇ ಪಾರು!

ರಸ್ತೆಯಲ್ಲಿ ಉರುಳಿ ಬಿದ್ದು ಹೊತ್ತ ಉರಿದ ಸ್ಪಿರಿಟ್‌ ಟ್ಯಾಂಕರ್‌

ವಿಜಯಪುರ: ಸ್ಪಿರಿಟ್‌ ಹೊತ್ತೊಯ್ಯುತ್ತಿದ್ದ ಟ್ಯಾಂಕರ್‌ ಒಂದು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದು ಬೆಂಕಿಯಲ್ಲಿ ಸುಟ್ಟು ಹೋದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೊರಭಾಗದ ಕಲಬುರಗಿ ಬೈ ಪಾಸ್ ಬಳಿ ಘಟನೆ ನಡೆದಿದೆ.

Fire Accident spirit TankerFire Accident spirit Tanker

ರಸ್ತೆಯಲ್ಲಿ ಸಾಗುತ್ತಿದ್ದ ಸ್ಪಿರಿಟ್‌ ‌ಟ್ಯಾಂಕರ್‌ ಒಮ್ಮಿಂದೊಮ್ಮೆಗೇ ಚಾಲಕನ‌ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ರಸ್ತೆ ಪಕ್ಕದಲ್ಲಿ ಬೀಳುತ್ತಲೇ ಬೆಂಕಿ ಹೊತ್ತಿಕೊಂಡಿದೆ.

ಈ ನಡುವೆ, ಟ್ಯಾಂಕರ್ ಉರುಳಿ ಬೀಳುತ್ತಲೇ ಚಾಲಕ ಮತ್ತು ಕ್ಲೀನರ್ ವಾಹನದಿಂದ ಜಿಗಿದು ತಪ್ಪಿಸಿಕೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಇದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version