Site icon Vistara News

ಮಂಡ್ಯ ಪೊಲೀಸರನ್ನು ಪೂರ್ತಿ ಹೈರಾಣಾಗಿಸಿದ ಅರ್ಧ ದೇಹ: ಊರೂರು ಅಲೆಯುತ್ತಿರುವ ಖಾಕಿ ಪಡೆ

ಮಹಿಳೆಯರ ಸುಳಿವು

ಮಂಡ್ಯ: ಅದೊಂದು ಮೃತದೇಹ ಮಂಡ್ಯ ಪೊಲೀಸ್‌ ನಿದ್ದೆಗೆಡಿಸಿದೆ. ದೊಡ್ಡ ದೊಡ್ಡ ಕೊಲೆ, ಅಪರಾಧ ಪ್ರಕರಣಗಳನ್ನು ಭೇದಿಸಿದ ಮಂಡ್ಯ ಪೊಲೀಸರ ಕಾರ್ಯಕ್ಷಮತೆಗೇ ಸವಾಲೊಡ್ಡುವಂತೆ ಕಳೆದ ೧೫ ದಿನದ ಹಿಂದೆ ಪತ್ತೆಯಾದ ಎರಡು ಅರ್ಧ ದೇಹಗಳ ಕುರಿತು ಯಾವುದೇ ಸುಳಿವು ಸಿಗದೆ ಪೊಲೀಸರು ಒದ್ದಾಡುತ್ತಿದ್ದಾರೆ. ಕೊನೆಗೆ, ಈ ದೇಹಗಳ ಕುರಿತು ಸುಳಿವು ನೀಡಿದವರಿಗೆ ₹೧ ಲಕ್ಷ ಬಹುಮಾನ ಕೊಡುತ್ತೇವೆ ಎಂದು ಘೋಷಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಜೂನ್‌ ೭ರಂದು ಪಾಂಡವಪುರ ತಾಲೂಕು ಬೇಬಿ ಗ್ರಾಮದ ನಾಲೆಯಲ್ಲಿ ಒಂದು ಶವ ಪತ್ತೆಯಾದರೆ, ಮತ್ತೊಂದು ಶವ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಭತ್ತದ ಗದ್ದೆಯಲ್ಲಿ ಪತ್ತೆಯಾಗಿತ್ತು. ಎರಡೂ ದೇಹ ಮಹಿಳೆಯರದ್ದು. ಪಾಂಡವಪುರದಲ್ಲಿ ದೊರೆದ ಶವ ಸುಮಾರು ೩೦-೩೨ ವರ್ಷ, ಅರಕೆರೆಯಲ್ಲಿ ಪತ್ತೆಯಾದ ಶವ ಸುಮಾರು ೪೦-೪೫ ವರ್ಷದ ಮಹಿಳೆಯದ್ದು ಎನ್ನುವುದನ್ನು ಬಿಟ್ಟರೆ ಮತ್ತಾವುದೇ ಮಾಹಿತಿ ಇರಲಿಲ್ಲ.

ಇದನ್ನೂ ಓದಿ | Rain In Bangalore | ಮಿಥುನ್‌ ಮೃತದೇಹ ಹುಡುಕಲು ಬೋಟ್‌ ಬಳಕೆ, ಹೇಗೆ ನಡೀತಿದೆ ಕಾರ್ಯಾಚರಣೆ?

ಮಂಡ್ಯ ಪೊಲೀಸರು ಪ್ರಕಟಿಸಿರುವ ಪೋಸ್ಟರ್‌

ದೇಹದ ಸುಳಿವು ಸಿಗದಂತೆ ದೇಹವನ್ನು ಸೊಂಟದ ಭಾಗಕ್ಕೆ ಸರಿಯಾಗಿ ತುಂಡರಿಸಿ ದುಷ್ಕರ್ಮಿಗಳು ಎಸೆದಿದ್ದರು. ಎರಡೂ ದೇಹದ ಕಾಳುಗಳನ್ನು ಕಟ್ಟಲಾಗಿತ್ತು. ಈ ಸ್ಥಿತಿಯಲ್ಲಿ ಎರಡೂ ಮೃತದೇಹದ ಕೆಳಭಾಗ ಮಾತ್ರ ಪತ್ತೆಯಾಗಿತ್ತು. ಆದರೆ ಇಲ್ಲಿವರೆಗೆ ದೇಹದ ಮೇಲ್ಭಾಗಕ್ಕಾಗಿ ಶೋಧ ಕಾರ್ಯ ಮುಂದುವರಿದೇ ಇದೆ.

ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಇರುವುದರಿಂದ, ಸಾಕ್ಷ್ಯನಾಶದ ಉದ್ದೇಶಕ್ಕಾಗಿ ಹೀಗೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. 15 ದಿನ ಕಳೆದರೂ ಮೃತದೇಹದ ಪತ್ತೆ ಸಿಗದೆ ಮಂಡ್ಯ ಪೊಲೀಸ್‌ ಹೈರಾಣಾಗಿದ್ದಾರೆ. ಈ ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿದ್ದು, ಆದಷ್ಟು ಬೇಗನೆ ಪ್ರಕರಣ ಬೇಧಿಸುವಂತೆ ಮೇಲಧಿಕಾರಿಗಳಿಂದಲೂ ಒತ್ತಡ ಇದೆ. ಈ ಕಾರಣಕ್ಕೆ ಪೊಲೀಸರು ಮಾಹಿತಿಗಾಗಿ ಊರೂರು ಸುತ್ತುತ್ತಿದ್ದಾರೆ. ಮೃತದೇಹಗಳ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೇಳುತ್ತಿದ್ದಾರೆ. ಗ್ರಾಮಗಳಲ್ಲಿ ಪೋಸ್ಟರ್‌ ಅಂಟಿಸಿ, ಮಾಹಿತಿ ನೀಡಿದವರಿಗೆ ₹೧ ಲಕ್ಷ ಬಹುಮಾನ ಘೋಷಿಸಿ, ಎಲ್ಲೆಡೆ ಕರಪತ್ರ ಹಂಚುತ್ತಿದ್ದಾರೆ.

ಇದನ್ನೂ ಓದಿ | ತುಮಕೂರಿನ ದಲಿತ ಮುಖಂಡನ ಕೊಲೆ; ಗುಬ್ಬಿಯಲ್ಲಿ ಟೀ ಕುಡಿಯುತ್ತಿದ್ದಾಗ ಕೊಚ್ಚಿ ಕೊಂದರು!

Exit mobile version