Site icon Vistara News

Hanuman Flag: ಯಾರ‍್ರೀ ಹಿಂದು? ನಾವೆಲ್ಲರೂ ಭಾರತೀಯರು ಅನ್ನೋದು ತಿಳಿಯಿರಿ; ಬಿಜೆಪಿಗೆ ಡಿಕೆಶಿ ಕಿವಿಮಾತು

DK Shivakumar

ಬೆಂಗಳೂರು: ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜಕ್ಕೆ (Hanuman Flag) ಸಂಬಂಧಪಟ್ಟಂತೆ ಭಾರಿ ಗಲಾಟೆ ನಡೆಯುತ್ತಿದೆ. ಪ್ರತಿಪಕ್ಷಗಳಾದ ಜೆಡಿಎಸ್‌- ಬಿಜೆಪಿ ಜಂಟಿ ಹೋರಾಟ ನಡೆಸುತ್ತಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಈಗ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಪ್ರತಿಕ್ರಿಯೆ ನೀಡಿದ್ದು,ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲದ ಬಿಜೆಪಿಯು ಅಸ್ಥಿತ್ವ ಕಂಡುಕೊಳ್ಳಲು ಜನರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಯಾರ‍್ರೀ ಹಿಂದು? ನಾವೆಲ್ಲರೂ ಭಾರತೀಯರು ಅನ್ನೋದು ತಿಳಿಯಬೇಕು ಎಂದು ಬಿಜೆಪಿಗೆ ಕಿವಿಮಾತು ಹೇಳಿದ್ದಾರೆ.

ಮಂಡ್ಯದಲ್ಲಿ ಹನುಮಧ್ವಜ ವಿಚಾರವಾಗಿ ಎದ್ದಿರುವ ವಿವಾದದ ಕುರಿತು ಮಾಧ್ಯಮದವರು ಸೋಮವಾರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ದೇಶದ ಕಾನೂನಿಗೆ ನಾವು ಗೌರವ ನೀಡಬೇಕು. ಬಿಜೆಪಿ ಅಭ್ಯರ್ಥಿಗಳು ಅನೇಕ ಕಡೆಗಳಲ್ಲಿ ಠೇವಣಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಮಂಡ್ಯದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಇಂತಹ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಮಂಡ್ಯದ ಜನರು ಬಹಳ ಸಹಿಷ್ಣುತೆಯುಳ್ಳವರು, ಜಾತ್ಯತೀತರಾಗಿದ್ದಾರೆ. ಅವರು ಇಂತಹ ವಿಚಾರಗಳಿಗೆ ಮಾರುಹೋಗುವುದಿಲ್ಲ. ನಮಗೆ ನಮ್ಮದೇ ಆದ ಸಂವಿಧಾನವಿದೆ. ಈ ಭಾಗವನ್ನು ನಮ್ಮ ಮಹಾರಾಜರು ಹೇಗೆ ಆಳ್ವಿಕೆ ನಡೆಸಿದ್ದಾರೆ ಎಂಬ ಇತಿಹಾಸವಿದೆ. ಈ ಎಲ್ಲ ಗೊಂದಲಗಳು ಬಿಜೆಪಿಯ ಸೃಷ್ಟಿ. ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವುದು ನಮ್ಮ ಆದ್ಯತೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರ ಎಂಬ ಬಿಜೆಪಿ ನಾಯಕರ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಯಾರು ಹಿಂದೂ ವಿರೋಧಿ? ನಾವೆಲ್ಲರೂ ಮೊದಲು ಭಾರತೀಯರು. ಅಲ್ಲಿ ದಲಿತ ಸಂಘರ್ಷ ಸಮಿತಿ, ಕೆಂಪೇಗೌಡ ಸಮಿತಿ ಸೇರಿದಂತೆ ಅನೇಕರು ನಾವು ಬಾವುಟ ಹಾಕುತ್ತೇವೆ ಎಂದು ಕೇಳುತ್ತಿದ್ದಾರೆ. ನಾವೆಲ್ಲರೂ ಹಿಂದುಗಳಲ್ಲವೇ? ನಮ್ಮ ಹಳ್ಳಿಯಲ್ಲಿರುವ ಜನ ಹಿಂದುಗಳಲ್ಲವೇ? ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಈ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಏನಿದು ಮಂಡ್ಯದ ಹನುಮಧ್ವಜ ಕೇಸ್?‌

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಗ್ರಾಮದ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದರು. ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನೆಪಾಗಿ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು. ಧ್ವಜ ಹಾರಿಸಲು ನಿಶ್ಚಯಿಸಿದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದರಿಂದ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೆ, ಗ್ರಾಮ ಪಂಚಾಯಿತಿ “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲವೆಂದು ಅನುಮತಿಯನ್ನು ನಿರಾಕರಣೆ ಮಾಡಿತ್ತು.

ಆದರೂ ಗ್ರಾಮಸ್ಥರು ಮತ್ತು ಹಿಂದು ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದರು. ಇದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಈ ವಿಚಾರ ಮತ್ತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದೆ. ಅಲ್ಲಿ 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್​ ಸದಸ್ಯರು ನಡಾವಳಿ ರಚಿಸಿ, ವಿವಾದವನ್ನು ಇತ್ಯರ್ಥ ಪಡಿಸಿದ್ದರು. ಆದರೆ, ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಮೌಖಿಕ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ತೆರವುಗೊಳಿಸಲು ಮುಂದಾದರು. ಇದಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿ ಪ್ರತಿಭಟಿಸಿದ್ದರು. ಹೀಗಾಗಿ ಅಲ್ಲಿಂದ ನಿರ್ಗಮಿಸಿದ್ದ ಅಧಿಕಾರಿಗಳು ಶನಿವಾರ (ಜ.27) ರಾತ್ರಿ ಪುನಃ ಬಂದು ಹನುಮ ತೆರವಿಗೆ ಮುಂದಾದರು. ಮುಂಜಾನೆ 3 ಗಂಟೆ ಹೊತ್ತಿಗೆ ಮಂಡ್ಯ ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ತೆರವಿಗೆ ಮುಂದಾಗುತ್ತಿದ್ದಂತೆ ಗ್ರಾಮಸ್ಥರಿಗೆ ವಿಷಯ ತಿಳಿದು ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಸಹ ಸ್ಥಳದಲ್ಲಿದ್ದರು. ಪ್ರತಿಭಟನೆಯನ್ನೂ ಮಾಡಲಾಯಿತು. ಹೀಗಾಗಿ ಪುನಃ ವಾಪಸ್‌ ತೆರಳಲಾಯಿತು.

ಇದನ್ನೂ ಓದಿ: Hanuman Flag: ಮಂಡ್ಯ ಹನುಮ ಧ್ವಜ ಪ್ರಕರಣ; ತ್ರಿವರ್ಣ ಧ್ವಜ ಬಿಟ್ಟು ಭಗವಾಧ್ವಜ ಹಾರಿಸಿದ್ದು ಸರಿಯಲ್ಲ: ಸಿದ್ದರಾಮಯ್ಯ

ಕೊನೆಗೆ ಈಗ ಭಾನುವಾರ ಎಷ್ಟೇ ವಿರೋಧ ಹಾಗೂ ಪ್ರತಿಭಟನೆ ಇದ್ದರೂ ಅದರ ನಡುವೆ ಹನುಮಾನ್‌ ಧ್ವಜವನ್ನು ಇಳಿಸಿ, ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್​ ಅನ್ನು ಸಹ ಮಾಡಲಾಗಿದೆ.

Exit mobile version