ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡುವಿನಲ್ಲಿ ನಡೆದ ಹನುಮ ಧ್ವಜ (Hanuman flag) ವಿವಾದಕ್ಕೆ ಸಂಬಂಧಿಸಿ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ ನಡೆಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ಕೃಷಿ ಮಂತ್ರಿ ಚಲುವರಾಯ ಸ್ವಾಮಿ ಗುಟುರು ಹಾಕಿದ್ದಾರೆ. ಮಂಗಳವಾರ ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಲುವರಾಯ ಸ್ವಾಮಿ (Minister Chaluvaraya Swamy) ಅವರು ತಣ್ಣಗಿನ ಧ್ವನಿಯಲ್ಲೇ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬೆಂಕಿ ಉಗುಳಿದರು. ಮಂಡ್ಯಕ್ಕೆ ಬೆಂಕಿ ಹಚ್ಚಲು ಯತ್ನಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆ ಕೂಡಾ ನೀಡಿದರು.
ನೀವು ಸೋತಿದ್ದೀರಿ ಎಂಬ ಕಾರಣಕ್ಕೆ ವಿಪರೀತ ಆಡಬೇಡಿ. ನಿಮಗೆ ತಾಳ್ಮೆ ಇರಲಿ. ನಾವು ಐದು ವರ್ಷ ತಾಳ್ಮೆಯಿಂದ ಕಾದು ಕುಳಿತೇ ಅಧಿಕಾರಕ್ಕೆ ಬಂದಿದ್ದೇವೆ. ನೀವು ಕಾವೇರಿ ನೀರು ಸಮಸ್ಯೆ ಪರಿಹರಿಸಲಿಲ್ಲ., ರಾಷ್ಟ್ರಿಯ ಹೆದ್ದಾರಿ ಸಮಸ್ಯೆ ಸರಿಪಡಿಸಲಿಲ್ಲ, ಕೇಂದ್ರದಿಂದ ಬರ ಪರಿಹಾರ ಕೊಡಿಸಲಿಲ್ಲ, ಫ್ಯಾಕ್ಟರಿ ಅಭಿವೃದ್ಧಿ ಮಾಡಲಿಲ್ಲ. ಈಗ ಮಂಡ್ಯಕ್ಕೆ ಬೆಂಕಿ ಹಚ್ಚಲು ಬಂದಿದ್ದೀರಾ? ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಚಲುವರಾಯ ಸ್ವಾಮಿ ಹೇಳಿದರು.
ʻʻಜನ ನಮಗಿಂತ ನಿಮ್ಮನ್ನ ಹೆಚ್ಚು ಪ್ರೀತಿಸಿದ್ದಾರೆ. ಆದರೆ, ನೀವು ಜಾತ್ಯತೀತ ಟವಲ್ ಬಿಟ್ಟಾಯ್ತು. ಕೇಸರಿ ಟವೆಲ್ ಹಾಕಿದ ಮೇಲೆ ಮುಗೀತು, ನೀವು ಬಿಜೆಪಿಗೆ ಸೇರಿಬಿಡಿ ಎಂದು ಹೇಳಿದ ಅವರು, ಲೋಕಸಭೆ ಸೇರಿದಂತೆ ಯಾವುದೇ ಚುನಾವಣೆ ನಡೆದರೂ ಜನ ಯಾವುದೇ ನಿರ್ಧಾರ ಕೈಗೊಂಡರೂ ನಾವು ಸ್ವಾಗತ ಮಾಡ್ತೀವಿ. ಆದರೆ, ಕೆರಗೋಡು ವಿಚಾರದಲ್ಲಿ ರಾಜಕೀಯ ಮಾಡಿ ಬೆಂಕಿ ಹಚ್ಚಲು ಯತ್ನಿಸಿದರೆ ಅದರ ಪರಿಣಾಮ ನೀವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿಮ್ಮ ಬೇಡಿಕೆ ಏನು? ರಾಷ್ಟ್ರ ಧ್ವಜ ಕೆಳಗಿಳಿಸಬೇಕಾ?
ʻʻನೀವು ಒಳ್ಳೇದನ್ನ ಮಾಡದಿದ್ದರೂ ಪರವಾಗಿಲ್ಲ ಆದ್ರೆ ಈ ರೀತಿಯ ಕೆಲಸಕ್ಕೆ ಕೈ ಹಾಕಬೇಡಿ. ನಿಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ನಿಮ್ಮ ರಾಜಕೀಯ ಶಕ್ತಿಗಾಗಿ ಜಯ ಪ್ರಕಾಶ್ ನಾರಾಯಣರ ಹೋರಾಟಕ್ಕೆ ತಿಲಾಂಜಲಿ ನೀಡಿದ್ದೀರಿ. ಹಸಿರು ಟವಲ್ ಹಾಕಿಕೊಂಡು ಹೋರಾಟ ಮಾಡುತ್ತಿದ್ದ ನೀವು ಇಂದು ರಾಷ್ಟ್ರಧ್ವಜದ ವಿರುದ್ಧ ನಿಂತಿದ್ದಿರಾ.? ನಿಮ್ಮ ಬೇಡಿಕೆ ಏನು ರಾಷ್ಟ್ರಧ್ವಜವನ್ನು ಕೆಳಗಿಳಿಸಬೇಕಾ? ನಿಮ್ಮ ಹೋರಾಟ ಯಾಕಾಗಿ ಮಾಡ್ತಿದ್ದೀರಾ ಎಂಬುದು ಸ್ಪಷ್ಟಪಡಿಸಬೇಕುʼʼ ಎಂದು ಚಲುವರಾಯ ಸ್ವಾಮಿ ಪ್ರಶ್ನೆ ಮಾಡಿದರು.
ಕೆರಗೋಡಿನಲ್ಲಿ ರಾಷ್ಟ್ರಧ್ವಜವನ್ನು ಹಾಕಿರುವುದೇ ತಪ್ಪು ಅನ್ನೋ ನಿರ್ಧಾರಕ್ಕೆ ನೀವು ಬಂದಿದ್ದೀರಿ. ಬಿಜೆಪಿ ಜೊತೆಗೆ ಸೇರಿದ್ದರಿಂದಲೇ ಕುಮಾರಸ್ವಾಮಿ ರಾಷ್ಟ್ರಧ್ವಜದ ವಿರುದ್ಧ ನಿಂತಿದ್ದಾರೆ ಎಂಬ ಅಭಿಪ್ರಾಯ ಮೂಡಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Hanuman Flag: ಧ್ವಜಸ್ತಂಭ ನಿರ್ಮಿಸಲು ಅನುಮತಿ; ಕೆರಗೋಡು ಪಿಡಿಒ ಸಸ್ಪೆಂಡ್
ನಮ್ಮ ಜಿಲ್ಲೆಯ ನೆಮ್ಮದಿ ಕೆಡಿಸಲು ಬರಬೇಡಿ
ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಸಿಟಿ ರವಿ ಅವರು ಹೋರಾಟದ ಹೆಸರಿನಲ್ಲಿ ನಮ್ಮ ಊರಿಗೆ ಬಂದಿದ್ದಾರೆ. ಆದರೆ, ಅವರು ಆಡುತ್ತಿರುವುದು ಸಂವಿಧಾನ, ಪ್ರಜಾಪ್ರಭುತ್ವದ ವಿರುದ್ಧದ ಆಟ. ಆ ಆಟಗಳೆಲ್ಲ ಬೇಡ. ಎಂದೂ
ಇಂತಹ ಕೆಲಸಕ್ಕೆ ಕೈ ಹಾಕದ ಅನೇಕ ಯುವಕರು ಇಂದು ಆ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದ ಚಲುವರಾಯ ಸ್ವಾಮಿ ಅವರು, ʻʻನೀವು ಯಾವ ಉದ್ದೇಶದಿಂದ ನಿನ್ನೆ ಮೊನ್ನೆ ಮಂಡ್ಯಗೆ ಬಂದಿದ್ರಿ? ನಾವು ಸೋತಾಗಲೂ ಹೀಗೇ ಆಡ್ತಿದ್ವಾ.? ನಾವು ಗೆದ್ದು ಆರೇಳು ತಿಂಗಳಾಗಿದ್ದು ಅಷ್ಟೆ. ಅದನ್ನೇ ತಡೆಯಲು ಆಗ್ತಿಲ್ವಾ ನಿಮಗೆ.? ನಾವು 5 ವರ್ಷ ಸೋತು ಸುಮ್ಮನಿರಲಿಲ್ಲವಾ?ʼ ಎಂದು ಕೇಳಿದ್ದಾರೆ.
ನಾನು ಮುನಿಯೂ ಅಲ್ಲ, ದೇವರೂ ಅಲ್ಲ
ಹನುಮನನನ್ನು ಎದುರು ಹಾಕಿಕೊಂಡ ಈ ಸರ್ಕಾರ ಲಂಕೆಯಂತೆ ಸುಟ್ಟು ಹೋಗಲಿದೆ ಎಂಬ ಸಿ.ಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಚಲುವರಾಯ ಸ್ವಾಮಿ ಅವರು, ನಿಮಗೆ ಶಾಪ ಕೊಡಲು ನಾನು ಮುನಿಯೂ ಅಲ್ಲ ದೇವರೂ ಅಲ್ಲ. ಸಾಧ್ಯವಾದ್ರೆ ಐದು ವರ್ಷ ತಾಳ್ಮೆಯಿಂದ ಇರಿ. ನಾವು ಐದು ವರ್ಷದಲ್ಲಿ ಜಿಲ್ಲೆಯ ಜನರ ಪರವಾಗಿ ಕೆಲಸ ಮಾಡದಿದ್ದರೆ ನಮಗೂ ನಿಮ್ಮದೇ ಸ್ಥಿತಿ ಬರಲಿದೆ. ಜಿಲ್ಲೆಯ ಜನ ಬುದ್ಧಿವಂತರಿದ್ದಾರೆ. ಒಂದೊಂದು ಹೆಜ್ಜೆನೂ ನಾವು ಯೋಚಿಸಿ ಇಡ್ತಿದ್ದೀವಿ ಎಂದು ಹೇಳಿದರು.
ʻʻಈ ದೇಶದ ಮಾಜಿ ಪ್ರಧಾನಿಗಳ ಮಗ ನೀವು. ಸಾಧಾರಣ ವ್ಯಕ್ತಿ ಅಲ್ಲ ನೀವು. ದೇವೇಗೌಡರ ಮಗನಾಗಿ ನೀವು ಈ ಜಿಲ್ಲೆಗೆ ಬಂದು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿರೋದು ನಿಮಗೆ ಶೋಭೆ ತರುವುದಿಲ್ಲʼʼ ಎಂದು ಹೇಳಿರುವ ಚಲುವರಾಯ ಸ್ವಾಮಿ ಅವರು, ʻʻಕೆರಗೋಡು ಪ್ರಕರಣದ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೊ ಗೊತ್ತಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ಅವರು ತಾವೇ ಸಿಎಂ ಆಗಿದ್ದರೆ ಏನು ಮಾಡುತ್ತಿದ್ದರು ಎಂದು ತಿಳಿಸಬೇಕುʼʼ ಎಂದು ಆಗ್ರಹಿಸಿದರು.
ಇದು ಮಂಡ್ಯ, ಮಂಗಳೂರಲ್ಲ, ನಿಮ್ಮ ಆಟ ನಡೆಯಲ್ಲ: ಚಲುವರಾಯ ಸ್ವಾಮಿ ಎಚ್ಚರಿಕೆ
ʻʻಇದು ಮಂಡ್ಯ ಮಂಗಳೂರಲ್ಲ, ಉಡುಪಿಯಲ್ಲ. ನಿಮ್ಮ ಆಟ ಇಲ್ಲಿ ನಡೆಯಲ್ಲ, ಜಿಲ್ಲೆಯ ಯುವಕರು ಅವರ ರಾಜಕೀಯ ಅಸ್ತಿತ್ವಕ್ಕೆ ಬಲಿಯಾಗೋದು ಬೇಡʼʼ ಎಂದು ಹೇಳಿದರು ಚಲುವರಾಯ ಸ್ವಾಮಿ.
ʻʻಖಾಸಗಿ ಜಾಗದಲ್ಲಿ ಧ್ವಜ ಸ್ತಂಭ ಅಳವಡಿಸಲು ಅವಕಾಶ ಕೇಳಿದರೆ ನಾವು ಸಹಕಾರ ಕೊಡುತ್ತೇವೆ. ಇದು ಕೂಡಾ ಕಾನೂನು ಪ್ರಕಾರವಾಗಿಯೇ ನಡೆಯಬೇಕು. ಸರ್ಕಾರಿ ಜಾಗ ಹೊರತು ಪಡಿಸಿ ಖಾಸಗಿ ಜಾಗದಲ್ಲಿ ಹಾಕಿದರೆ ನಮ್ಮ ಬೆಂಬಲ ಇದೆʼʼ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರು.