Site icon Vistara News

Hanuman Flag : ಕೆರಗೋಡು ಧ್ವಜ ವಿವಾದದಿಂದ ಜೆಡಿಎಸ್‌ ಔಟ್‌, ನಾಳೆ ಮಂಡ್ಯ ಬಂದ್‌ ಡೌಟ್‌

Hanuman Flag Keragodu

ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡುವಿನಲ್ಲಿ ನಡೆದ ಹನುಮ ಧ್ವಜ (Hanuman flag) ವಿವಾದಕ್ಕೆ ಸಂಬಂಧಿಸಿ ಕರೆ ನೀಡಲಾಗಿದ್ದ ಫೆಬ್ರವರಿ 9ರ ಮಂಡ್ಯ ಬಂದ್‌ (Mandya Bandh) ನಡೆಯುವುದು ಡೌಟ್‌. ಯಾಕೆಂದರೆ, ಈ ಬಂದ್‌ ವಿಚಾರದಲ್ಲಿ ಕರೆ ನೀಡಿದವರೂ ಸೇರಿದಂತೆ ಯಾರೂ ಆಸಕ್ತಿ ತೋರಿಸುತ್ತಿಲ್ಲ. ಜತೆಗೆ ಈ ಭಾಗದಲ್ಲಿ ಪ್ರಭಾವಿಯಾಗಿರುವ ಜೆಡಿಎಸ್‌ ಪಕ್ಷವು ವಿವಾದದಿಂದ ಅಂತರ ಕಾಯ್ದುಕೊಂಡಿದೆ.

ಜನವರಿ 27ರಂದು ರಾತ್ರಿ ತಾಲೂಕು ಆಡಳಿತವು ಇಲ್ಲಿನ 108 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಹಾಕಿದ್ದ ಹನುಮ ಧ್ವಜವನ್ನು ತೆರವು ಮಾಡಿ ಅಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿತ್ತು. ಮಧ್ಯ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಈ ಧ್ವಜವನ್ನು ತೆರವು ಮಾಡಲಾಗಿದ್ದು, ಆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಲಾಠಿ ಚಾರ್ಜ್‌ ನಡೆಸಲಾಗಿತ್ತು. ಜನವರಿ 29ರಂದು ಕೆರಗೋಡಿನಿಂದ ಮಂಡ್ಯ ನಗರದ ವರೆಗೆ ಬೃಹತ್‌ ಪಾದಯಾತ್ರೆ (Keragodu Padayatra) ನಡೆದು ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅಂದೇ ಫೆಬ್ರವರಿ 9ರಂದು ಮಂಡ್ಯ ಬಂದ್‌ಗೆ ಕರೆ ನೀಡಲಾಗಿತ್ತು.

ಭಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿಯಿಂದ ಬಂದ್ ಗೆ ಕರೆ ನೀಡಲಾಗಿತ್ತು. ಆದರೆ, ಫೆಬ್ರವರಿ 8ರವರೆಗೂ ಬಂದ್‌ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ ಬಂದ್‌ ನಡೆಯುವುದು ಸಂಶಯ ಎಂಬ ವಾತಾವರಣ ಇದೆ.

ಮಂಡ್ಯದಲ್ಲಿ ಬಿಜೆಪಿ ಮುಖಂಡ ಅಶೋಕ್ ಜಯರಾಂ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ʻʻಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ನಾಳಿನ ಬಂದ್ ಗೆ ಬಿಜೆಪಿ, ಜೆಡಿಎಸ್ ಪಕ್ಷಗಳು ಬೆಂಬಲ ನೀಡುತ್ತಿಲ್ಲ. ಅಲ್ಲದೆ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವುದಿಲ್ಲ.. ಆದರೆ, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ರೆ ಸ್ವಾಗತ ಮಾಡುತ್ತೇವೆʼʼ ಎಂದು ಹೇಳಿದ್ದಾರೆ.

ಫೆ.9ರಂದು ಹನುಮಭಕ್ತರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಜೊತೆ ಸೇರಿ ಕೆರಗೋಡಿನಿಂದ ಬೈಕ್ ರ‍್ಯಾಲಿ ಇರಲಿದೆ. ಕೆರಗೋಡಿನಿಂದ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡೆಯಲಿರುವ ಬೈಕ್ ರ‍್ಯಾಲಿಯ ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮನವಿ ಪತ್ರ ಸಲ್ಲಿಸಲಾಗುವುದು ಎಂದ ಅಶೋಕ್ ಜಯರಾಂ ಹೇಳಿದ್ದಾರೆ.

ಬಂದ್ ಕೈಬಿಡುವಂತೆ ಮನವಿ ಮಾಡಿದ್ದ ಜಿಲ್ಲಾಡಳಿತದ ಕರೆಗೆ ಸ್ಪಂದಿಸಿ ಫೆ.7ರ ಬಂದ್ ಹಿಂಪಡೆಯಲಾಗಿದೆ ಎಂದು ಸಮಾನ ಮನಸ್ಕರ ವೇದಿಕೆ ಹೇಳಿದೆ.

ಈ ನಡುವೆ ಜೆಡಿಎಸ್ ಅಂತೂ ಕೆರಗೋಡು ಧ್ವಜ ವಿವಾದದಿಂದ ಅಂತರ ಕಾಯ್ದುಕೊಂಡಿದೆ. ವಿವಾದ ಪ್ರಾರಂಭದಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳಿಗೆ ಸಾಥ್ ನೀಡಿತ್ತು. ಪಾದ ಯಾತ್ರೆಯ ವೇಳೆ ಮಂಡ್ಯದ ಕಾಂಗ್ರೆಸ್‌ ಶಾಸಕ ಗಣಿಗ ರವಿ ಕುಮಾರ್‌ ಅವರ ಫ್ಲೆಕ್ಸ್‌ಗಳನ್ನು ಪುಡಿಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಜೆಡಿಎಸ್‌ ಕಾರ್ಯಕರ್ತರು ಎನ್ನಲಾಗಿದೆ.

ಇದನ್ನೂ ಓದಿ : Hanuman Flag :ಕೆರಗೋಡಿನಲ್ಲಿ ಮನೆ ಮನೆಗೆ ಹನುಮ ಧ್ವಜ ಕಟ್ಟಿದ ಮಹಿಳೆಯರು

ಈ ನಡುವೆ, ಬಿಜೆಪಿ ಈ ಪ್ರಕರಣದ ಮೈಲೇಜ್‌ ಪಡೆಯಲು ಮನೆ ಮನೆ ಧ್ವಜ ಅಭಿಯಾನ ಆರಂಭಿಸಿತ್ತು. ಈ ಅಭಿಯಾನದಲ್ಲಿ ಜೆಡಿಎಸ್‌ ನ್ನು ಸೇರಿಸಿಕೊಂಡಿರಲಿಲ್ಲ. ಇತ್ತ ಮಾಜಿ ಪ್ರಧಾನಿ ದೇವೇಗೌಡರು ಎಚ್‌.ಡಿ ಕುಮಾರಸ್ವಾಮಿ ಅವರು ಕೇಸರಿ ಧ್ವಜ ಹಾಕಿಕೊಳ್ಳಬಾರದಿತ್ತು ಎಂಬ ಅಭಿಪ್ರಾಯ ಹೇಳಿದ್ದು ಕೂಡಾ ಜೆಡಿಎಸ್‌ ಹಿಂದೆ ಸರಿಯಲು ಕಾರಣವಾಯಿತು ಎನ್ನಲಾಗಿದೆ.

ಈ ನಡುವೆ, ಮಂಡ್ಯ ಬಂದ್‌ ಬಗ್ಗೆ ಪ್ರತಿಕ್ರಿಯಿಸಿರುವ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ಅವರು, ಕೆರಗೋಡು ಗ್ರಾಮದಲ್ಲಿ ಹಾರುತ್ತಿರುವುದು ರಾಷ್ಟ್ರಧ್ವಜ. ಅದನ್ನು ಇಳಿಸಬೇಕಾ? ಹಾರಾಟ ಮಾಡಬೇಕಾ ಎಂದು ಅವರು ನಾಳೆ ಡಿಸಿಗೆ ಕೊಡುವ ಮನವಿ ಪತ್ರ ನೋಡಿ ಹೇಳುತ್ತೇನೆ. ಡಿಸಿ, ಎಸ್ ಪಿ, ಸಿಇಒ ಅವರು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ಮಾಡಿದ್ದಾರೆ. ಆ ವೇಳೆ ಅವರು ಧ್ವಜ ಹಾರಿಸುವ ಕುರಿತು ಯಾವುದೇ ಪ್ರಸ್ತಾವನೆ ಇಟ್ಟಿಲ್ಲ. ಆದರೆ ನಾವು ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಬಿಟ್ಟರೆ ಬೇರೆ ಧ್ವಜಕ್ಕೆ ಹಾರಾಟಕ್ಕೆ ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿದರು.

Exit mobile version