Site icon Vistara News

Hanuman Flag : ಕೆರಗೋಡಿನಲ್ಲಿ 30 ವರ್ಷದ ಹಿಂದೆಯೇ ಹನುಮ ಧ್ವಜ ಇತ್ತು; ಸಾಕ್ಷ್ಯ ಇಲ್ಲಿದೆ

Hanuman Flag keragodu development

ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ (Keragodu Village) ಹುಟ್ಟಿರುವ ಹನುಮ ಧ್ವಜ (Hanuman Flag) ವಿವಾದಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ಇಲ್ಲಿ ಹೊಸದಾಗಿ 108 ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪಿಸಿ ಅದರಲ್ಲಿ ಕಳೆದ ಜನವರಿ 20ರಂದು ಹನುಮ ಧ್ವಜವನ್ನು ಸ್ಥಾಪಸಲಾಗಿತ್ತು. ಆದರೆ, ಇಲ್ಲಿ ಹನುಮ ಧ್ವಜ ಏರಿಸಲು ಅವಕಾಶವಿಲ್ಲ. ಕೇವಲ ರಾಷ್ಟ್ರ ಧ್ವಜ, ನಾಡ ಧ್ವಜ ಮಾತ್ರ ಹಾರಿಸಬಹುದು ಎಂದು ಆಕ್ಷೇಪಿಸಿದ ತಾಲೂಕು ಆಡಳಿತ ಜನವರಿ 28ರ ರಾತ್ರಿ ತೆರವುಗೊಳಿಸಿ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. ಆದರೆ, ಇಲ್ಲಿ ಹನುಮ ಧ್ವಜ ಹಾರಿಸುವುದು ಮೊದಲ ಸಲವೇನಲ್ಲ. ಹಿಂದಿನಿಂದಲೂ ಹಾರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಅದಕ್ಕೆ ತಡೆ ಒಡ್ಡಲಾಗಿದೆ ಎಂಬ ವಾದವೊಂದು ಕೇಳಿಬಂದಿದೆ.

ಕೆರಗೋಡು ಗ್ರಾಂದಲ್ಲಿ 30 ವರ್ಷಗಳಿಂದಲೇ (30 year old tradition) ಹನುಮ ಧ್ವಜ ಇತ್ತು ಎಂದು ಗ್ರಾಮಸ್ಥರು ದಾಖಲೆ ಬಿಡುಗಡೆ ಮಾಡಿದ್ದಾರೆ. 30 ವರ್ಷದ ಹಿಂದೆ ಧ್ವಜಸ್ತಂಭದ ಬಳಿ ತೆಗೆದಿದ್ದ ಫೋಟೊಗಳು ಈಗ ವಿಸ್ತಾರ ನ್ಯೂಸ್ ಗ ಲಭ್ಯವಾಗಿದೆ.

ಗ್ರಾಮಸ್ಥರು ಬಿಡುಗಡೆ ಮಾಡಿದ ಚಿತ್ರಗಳು

ಕೇಸರಿ ಹನುಮ ಧ್ವಜದ ಜೊತೆಗೆ ನಾಡಹಬ್ಬ, ರಾಷ್ಟ್ರೀಯ ಹಬ್ಬಗಳಲ್ಲೂ ನಾಡಧ್ವಜ, ರಾಷ್ಟ್ರಧ್ವಜಗಳನ್ನೂ ಇಲ್ಲಿ ಹಾರಿಸಲಾಗುತ್ತಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈಗ 108 ಅಡಿ ನಿರ್ಮಿಸಿರುವ ನೂತನ ಧ್ವಜ ಸ್ತಂಭದ ಜಾಗದಲ್ಲಿ ಹಿಂದೆ ಸಾದಾರಣ ಮರದ ಕಂಬ ಇತ್ತು ಎನ್ನುವ ಫೋಟೊಗಳನ್ನು ಗ್ರಾಮಸ್ಥರು ನೀಡಿದ್ದಾರೆ.

ಒಂದು ವೇಳೆ ಹಿಂದೆ ಇಲ್ಲಿ ಹನುಮ ಧ್ವಜ ಹಾರಿಸಲಾಗುತ್ತಿತ್ತು ಎಂದರೆ ಅದನ್ನು ಯಾಕೆ ನಿಲ್ಲಿಸಲಾಯಿತು? ಯಾವಾಗ ನಿಲ್ಲಿಸಲಾಯಿತು ಎನ್ನುವುದು ಸ್ಪಷ್ಟವಾಗಿಲ್ಲ.

Hanuman Flag Ganiga Ravi kumar

Hanuman Flag : ಇವರು ಮುಠ್ಠಾಳರು ಎಂದು ಹೇಳಿದ ಗಣಿಗ ರವಿಕುಮಾರ್‌

ಮಂಡ್ಯ: ʻʻಎರಡು ಫೋಟೊ ಬಿಟ್ಟು ಹನುಮಧ್ವಜ ಮೂವತ್ತು ವರ್ಷಗಳಿಂದ ಇದೆ ಅನ್ನುತ್ತಿದ್ದಾರೆ. ಇವರು ಮೂರ್ಖರಾ ಮುಟ್ಠಾಳರ?.ʼ ಎಂದು ಮಂಡ್ಯ ಶಾಸಕ ಗಣಿಗ ರವಿ ಕುಮಾರ್‌ ಕೇಳಿದ್ದಾರೆ.

ಈಗ ಆರ್.ಎಸ್.ಎಸ್ ನವರು ಗೊಂದಲ ಮಾಡುತ್ತಿದ್ದಾರೆ. ಧ್ವಜ ಸ್ತಂಭದ ವಿಚಾರವಾಗಿ ಅವರಲ್ಲೇ ಗೊಂದಲ ಇದೆ ಎಂದು ಹೇಳಿದರು ರವಿ ಗಣಿಗ. ಪೋಟೋ ಬಿಡುಗಡೆ ಮಾಡಿದವರನ್ನ ಮುಠ್ಠಾಳರು ಎಂದು ಕರೆದ ಶಾಸಕ ರವಿ ಗಣಿಗ ಅವರು, ಕೆರಗೋಡಿನಲ್ಲಿ ನಡೆದ ಘಟನಾವಳಿಗಳಿಗೆ ಮಂಡ್ಯ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ರಾಮಚಂದ್ರ ಕಾರಣ ಎಂದು ಆರೋಪಿಸಿದ್ದಾರೆ.

Hanuman Flag Ganiga Ravi kumar

Hanuman Flag : ರಾಷ್ಟ್ರ ಧ್ವಜಾರೋಹಣ ಮಾಡಿದ ಅಧಿಕಾರಿಗಳ ವಿರುದ್ದ ದೂರು

ಕೆರಗೋಡಿನಲ್ಲಿ ಧ್ವಜಸ್ತಂಭದಲ್ಲಿ ಹಾಕಲಾಗಿದ್ದ ಹನುಮ ಧ್ವಜವನ್ನು ತೆಗೆದು‌ ರಾಷ್ಟ್ರ ಧ್ವಜಾರೋಹಣ ಮಾಡಿದ ಅಧಿಕಾರಿಗಳ ವಿರುದ್ಧ ಬಿಜೆಪಿ ಜಿಲ್ಲಾ ವಕ್ತಾರ ಮಂಜುನಾಥ್‌ ಅವರು ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

40 ವರ್ಷದಿಂದ ಇದ್ದ ಹನುಮ ಧ್ವಜದ ಬಾವುಟ ಇಳಿಸಿ ಹಿಂದುಗಳಿಗೆ ಅಪಮಾನ ಮಾಡಿದ್ದಾರೆ. ಧ್ವಜ ಸ್ತಂಭದ ಮುಕ್ಕಾಲು ಭಾಗಕ್ಕೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಹಲವು ರೀತಿಯಲ್ಲಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಮಂಡ್ಯ ಎಸಿ ಶಿವಮೂರ್ತಿ ಹಾಗೂ ಟಿಪಿ ಸಿಇಒ ವೀಣಾ ವಿರುದ್ಧ ದೂರು ನೀಡಲಾಗಿದೆ. ಅಂದು ಕಾನೂನು ಉಲ್ಲಂಘಿಸಿ ಧ್ವಜಾರೋಹಣ ಮಾಡಲಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎನ್ನುವುದು ಮಂಡ್ಯ ಜಿಲ್ಲಾ ಬಿಜಪಿ ವಕ್ತಾರ ಮಂಜುನಾಥ್ ಅವರ ಆಗ್ರಹ.

ಇದನ್ನೂ ಓದಿ: Hanuman Flag: ಹನುಮಧ್ವಜ ಸಂಬಂಧ ನೋಟಿಸ್‌ ಕೊಡಲಿಲ್ಲವೇಕೆ? ನಿಯಮ ಮೀರಿ ರಾಷ್ಟ್ರಧ್ವಜ ಹಾರಿಸಿದ್ದು ಸರಿಯಾ?: ಅಶ್ವತ್ಥನಾರಾಯಣ

ಧ್ವಜ ತೆರವಿನ ವಿರುದ್ಧ ಪ್ರತಿಭಟನೆ ಮಾಡಿದವರ ಮೇಲೆ ಎಫ್‌ಐಆರ್‌

ಈ ನಡುವೆ, ಕಳೆದ ಶನಿವಾರ ರಾತ್ರಿ ಹನುಮ ಧ್ವಜ ತೆಗೆದು ರಾಷ್ಟ್ರ ಧ್ವಜಾರೋಹಣ ಮಾಡಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಜನವರಿ 28ರಂದು ರಾತ್ರಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ಮೇಲೆ ಪ್ರಕರಣ ದಾಖಲಾಗಿದ್ದು, ಕೆರಗೋಡು ಪೊಲೀಸ್ ಠಾಣೆಯಲ್ಲಿ‌ ಎಫ್‌ಐಆರ್‌ ಮಾಡಲಾಗಿದೆ. ಹನುಮ ಧ್ವಜ ತೆರವು ವಿರೋಧಿಸಿ ನೂರಾರು ಮಂದಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಳಿದೇಗಲು ಗ್ರಾಮದ ಪ್ರತಾಪ್, ಹೊನಗವಳ್ಳಿ ಮಠ ಗ್ರಾಮದ ಅವಿನಾಶ್, ಕೆರಗೋಡು ಗ್ರಾಮದ ಪ್ರಕಾಶ್ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 301, 353, 149 ಅಡಿ ಪ್ರಕರಣ ದಾಖಲಾಗಿದೆ. ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ದೂರಿನನ್ವಯ ಕೇಸ್ ದಾಖಲಾಗಿದೆ.

Exit mobile version