ಮಂಡ್ಯ: ತನ್ನ ಸ್ಕೂಟರ್‌ಗೆ ಸೈಕಲ್ ಅಡ್ಡ ಬಂತು ಎಂಬ ಕಾರಣಕ್ಕೆ ತಾಳ್ಮೆ ಕಳೆದುಕೊಂಡ ವ್ಯಕ್ತಿಯೊಬ್ಬ ಶಾಲೆಗೆ ಹೋಗುತ್ತಿದ್ದ 13 ವರ್ಷದ ಬಾಲಕಿಯನ್ನು ಹಿಡಿದು ಹಲ್ಲೆ ಮಾಡಿದ್ದಾನೆ (Harassment Case). ಆಕೆ ಪರಿಪರಿಯಾಗಿ ಕಾಲು ಹಿಡಿದು, ಬೇಡಿಕೊಂಡರೂ ಬಿಡದೆ ಮನಸೋ ಇಚ್ಛೆ ಹಲ್ಲೆ (Man attacks on Girl) ಮಾಡಿರುವ ಘಟನೆಯ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ (Social Media) ಭಾರಿ ಆಕ್ರೋಶ ವ್ಯಕ್ತವಾಗಿದೆ. ಹೀಗೆ ಹಲ್ಲೆ ಮಾಡಿರುವ ವ್ಯಕ್ತಿ ಸಾಮಾನ್ಯದವರೇನೂ ಅಲ್ಲ. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುತಿಸಿಕೊಂಡಿರುವ ಮತ್ತು ಕೆಲ ರಾಜಕಾರಣಿಗಳ ಜೊತೆ ಸಕ್ರಿಯವಾಗಿರುವ ರಮೇಶ್ (Ramesh from Mandya) ಎಂಬವರೇ ಈ ರೀತಿ ಹಲ್ಲೆ ಮಾಡಿದವರು. ಅವರ ವಿರುದ್ಧ ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಘಟನೆ ನಡೆದಿರುವುದು ಮಾರ್ಚ್ 6ರಂದು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ. ಮಂಡ್ಯದ ಸುಭಾಷ್ ನಗರದ ಮೂರನೇ ತಿರುವಿನಲ್ಲಿ ರಮೇಶ್ ಎಂಬವರು ಈ ರೀತಿ ಹಲ್ಲೆ ಮಾಡಿದ್ದಾರೆ. ಅದನ್ನು ದೂರದಲ್ಲಿರುವ ಕಾರೊಂದರಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ವಿಡಿಯೊ ಮಾಡಿದ್ದಾರೆ.
ಆರೋಪಿ ರಮೇಶ್ ತಮ್ಮ ಸ್ಕೂಟರ್‌ನಲ್ಲಿ ಸಾಗುತ್ತಿದ್ದರು. ಆಗ 13 ವರ್ಷದ ಈ ಹುಡುಗಿ ಶಾಲೆಗೆ ಹೋಗುತ್ತಿದ್ದಳು. ದಾರಿಯಲ್ಲಿ ಸಾಗುವ ವೇಳೆ ಆಕೆಯ ಸೈಕಲ್ ರಮೇಶ್ ಅವರ ಸ್ಕೂಟರ್‌ಗೆ ಅಡ್ಡ ಬಂದಿದೆ ಎನ್ನಲಾಗಿದೆ. ಇದನ್ನೇ ದೊಡ್ಡ ವಿಷಯ ಮಾಡಿಕೊಂಡ ರಮೇಶ್ ಆಕೆಯನ್ನು ತಡೆದು, ಆಕೆ ಒಬ್ಬ ಹೆಣ್ಮಗು ಎಂಬ ಕಾರಣಕ್ಕೂ ಬಿಡದೆ ಹಲ್ಲೆ ಮಾಡಿದ್ದಾನೆ.
ಮೊದಲು ತಾನು ಕುಳಿತ ಸ್ಕೂಟರ್‌ನಿಂದಲೇ ಆಕೆಯ ಕೆನ್ನೆಗೆ ಬೀಸಿ ಹೊಡೆಯುವ ಈತ ಬಳಿಕ ಸ್ಕೂಟರ್‌ನಿಂದ ಇಳಿದು ಬಂದು ಹಲ್ಲೆ ಮಾಡುತ್ತಾನೆ. ಆಕೆ ಪರಿ ಪರಿಯಾಗಿ ಬೇಡಿದರೂ, ಕಾಲಿಗೆ ಬಿದ್ದರೂ ಬಿಡದೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ.
ನಿಜವೆಂದರೆ ಆ ಹುಡುಗಿ ಅವಸರದಿಂದ ಶಾಲೆಗೆ ಹೋಗುತ್ತಿದ್ದಳು. ಆಕೆಗೆ ಪರೀಕ್ಷೆ ಬೇರೆ ಇತ್ತು. ಆಕೆ ಇದನ್ನು ಆತನ ಮುಂದೆ ಹೇಳಿ ಕೈ ಕಾಲು ಹಿಡಿದಿದ್ದಾಳೆ. ʻʻಸಾರಿ ಅಂಕಲ್, ತಪ್ಪಾಯ್ತು ಕ್ಷಮಿಸಿ, ಪರೀಕ್ಷೆ ಇದೆ ಹೋಗಬೇಕು ಬಿಡಿʼʼ ಎಂದರೂ ಬಿಡದೆ ಹಲ್ಲೆ ಮಾಡಿರುವುದು ದಾಖಲಾಗಿದೆ. ನಡು ರಸ್ತೆಯಲ್ಲೇ ಶಾಲಾ ಬಾಲಕಿ ಮೇಲೆ ಮನಬಂದಂತೆ ಥಳಿಸುವ ದೃಶ್ಯವನ್ನು ಹಲವರು ನೋಡುತ್ತಿದ್ದರೂ ಅಂಜದೆ ತನ್ನ ದಾಳಿಯನ್ನು ಆತ ಮುಂದುವರಿಸಿದ್ದ. ಸಿಸಿಟಿವಿ ಹಾಗೂ ಸ್ಥಳೀಯರ ಮೊಬೈಲ್ ನಲ್ಲಿ ಈ ಹಲ್ಲೆಯ ದೃಶ್ಯಗಳು ಸೆರೆಯಾಗಿವೆ.
ಇದನ್ನೂ ಓದಿ : Physical Abuse : ಸಿದ್ದಗಂಗಾ ಜಾತ್ರೆಗೆ ಬಂದಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳು ಅರೆಸ್ಟ್
ರಾಜಕಾರಣಿಗಳ ಜತೆ ಸಕ್ರಿಯನಾಗಿರುವ ರಮೇಶ್
ಹಲ್ಲೆ ಮಾಡಿದ ವ್ಯಕ್ತಿ ಮಂಡ್ಯ ನಗರದ ಪ್ರತಿಷ್ಠಿತ ವ್ಯಕ್ತಿ ಎಂದು ಕರೆಸಿಕೊಳ್ಳುತ್ತಾನೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ಕೆಲ ರಾಜಕಾರಣಿಗಳ ಜೊತೆ ಸಕ್ರಿಯವಾಗಿದ್ದಾನೆ. ಆದರೆ ಒಬ್ಬ ಬಾಲಕಿಯ ಜತೆ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇಲ್ಲದೆ ವರ್ತಿಸಿದ್ದಾನೆ ಎನ್ನಲಾಗಿದೆ.
ಬಾಲಕಿ ತಂದೆಯಿಂದ ಪೊಲೀಸರಿಗೆ ದೂರು
ಪ್ರಕರಣ ಸಂಬಂಧ ನೊಂದ ಬಾಲಕಿ ತಂದೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಾಲಕಿ ತಂದೆ ದೂರು ಆಧರಿಸಿ, ಆರೋಪಿ ರಮೇಶ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ರಮೇಶ್ ವಿರುದ್ಧ IPC ಸೆಕ್ಷನ್ 341, 323, 354 ಹಾಗೂ 2015ರ ಚಿಲ್ಡ್ರನ್ ಪ್ರೊಟೆಕ್ಷನ್ ಅಂಡ್ ಕೇರ್ ಆಕ್ಟ್ 75ರ ಅಡಿ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ ಪೊಲೀಸರು ಆತನ ಮೇಲೆ ತಕ್ಷಣವೇ ಕ್ರಮ ಜರುಗಿಸಿ ಆತನನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲೂ ವ್ಯಾಪಕ ಆಕ್ರೋಶ
ಸಮಾಜದಲ್ಲಿ ಗಣ್ಯ ವ್ಯಕ್ತಿ ಎಂದು ಕರೆಸಿಕೊಳ್ಳುವ ಈ ವ್ಯಕ್ತಿಯ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ವರ್ತನೆ ವಿರುದ್ಧ ಸಿಡಿದೆದ್ದ ನೆಟ್ಟಿಗರು ಕೂಡಲೇ ಆತನನ್ನು ಬಂಧಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ಮತ್ಯಾರೂ ಈ ರೀತಿಯ ವರ್ತನೆ ತೋರದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.