Site icon Vistara News

Amit Shah | ಗೃಹಸಚಿವರಿಗೆ ತಲೆಬಾಗಿ ನಮಿಸುವೆ ಎಂದ ಎಚ್‌.ಡಿ. ದೇವೇಗೌಡ; ಅಮಿತ್‌ ಶಾಗೆ ಹೊಗಳಿಕೆಯ ಸುರಿಮಳೆ

hd-devegowda-heavily-praises-amit-shah

ಮಂಡ್ಯ: ಅಮೂಲ್‌ ಡೈರಿ ಸ್ಥಾಪನೆ ಮೂಲಕ ದೇಶದಲ್ಲಿ ಕ್ಷೀರ ಕ್ರಾಂತಿ ಮಾಡಿದ ವರ್ಗೀಸ್‌ ಕುರಿಯನ್‌ ಅವರ ಮಾರ್ಗದಲ್ಲೇ ಕೇಂದ್ರ ಗೃಹಸಚಿವ ಹಾಗೂ ಸಹಕಾರ ಸಚಿವ ಅಮಿತ್‌ ಶಾ (amit shah) ಸಾಗುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಆಯೋಜಿಸಿದ್ದ ಮೆಗಾ ಡೈರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್‌.ಡಿ. ದೇವೇಗೌಡ, ಕರ್ನಾಟಕದಲ್ಲಿ ಹಾಲು ಒಕ್ಕೂಟ ಸ್ಥಾಪನೆ ಕುರಿತ ಘಟನೆಯನ್ನು ನೆನೆದರು.

ಕರ್ನಾಟಕದಲ್ಲಿ ಈ ಹಿಂದೆ 12 ಸಹಕಾರಿ ಸಂಘಗಳಿದ್ದವು. ಅವುಗಳನ್ನು ಒಟ್ಟುಗೂಡಿಸಿ ಗುಜರಾತ್‌ನಂತೆಯೇ ಹಾಲು ಒಕ್ಕೂಟ ಮಾಡುವ ಆಲೋಚನೆಯನ್ನು ರೇವಣ್ಣ ವ್ಯಕ್ತೊಡಿಸಿದ್ದರು. ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಮೂಲ್‌ ಸಂಕೀರ್ಣವನ್ನು ಉದ್ಘಾಟಿಸಲು ತೆರಳಿದ್ದೆ. ಆಗ ಊಟದ ಸಮಯದಲ್ಲಿ ವರ್ಗೀಸ್‌ ಕುರಿಯನ್‌ ಅವರಲ್ಲಿ ವಿಷಯ ಪ್ರಸ್ತಾಪಿಸಿದ್ದೆ.

ಆದರೆ ಅವರು ಸ್ಪಷ್ಟವಾಗಿ ನಿರಾಕರಣೆ ಮಾಡಿದರು. ದೇಶದಲ್ಲಿ ಒಂದೇ ತಾಜ್‌ ಮಹಲ್‌ ಇರಲು ಸಾಧ್ಯ. ಇನ್ನೊಂದು ತಾಜ್‌ ಮಹಲ್‌ ಕಟ್ಟಲಾಗಲಿ, ಈ ತಾಜ್‌ ಅನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಲಿ ಆಗುವುದಿಲ್ಲ ಎಂದಿದ್ದರು. ನಾನೂ ಏನೂ ಮಾತನಾಡದೆ ಸುಮ್ಮನಾದೆ. ಕಾರ್ಯಕ್ರಮ ಮುಗಿಸಿ ಇನ್ನೇನು ವಿಮಾನದ ಮೆಟ್ಟಿಲು ಹತ್ತಬೇಕು ಎನ್ನುವಾಗ ಕುರಿಯನ್‌ ಅವರು ನನ್ನನ್ನು ತಡೆದರು.

ನೀವು ದೇಶದ ಪ್ರಧಾನಿಯಾಗಿ ನನ್ನನ್ನು ಕೇಳಿದಿರಿ, ಅವಮಾನ ಆಗುವಂತೆ ಮಾತನಾಡಿದೆ. ನಿಮಗೂ ಒಂದು ತಾಜ್‌ ಮಾಡಿಕೊಡುತ್ತೇನೆ, ನಿರಾಸೆ ಮಾಡುವುದಿಲ್ಲ ಎಂದರು. ಇದರ ಪರಿಣಾಮವೇ ನಮಗೆ ಒಕ್ಕೂಟ ಲಭಿಸಿತು. ನಮ್ಮ ಗೃಹ ಮಂತ್ರಿಗಳೂ (ಅಮಿತ್‌ ಶಾ) ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ಕುರಿಯನ್‌ ಅವರು ಮಾಡಿದ ಯಾವುದಕ್ಕೂ ಅಪಾಯ, ಚ್ಯುತಿ ತರದೇ, ಯಾವುದೇ ಆತಂಕ ಬರದ ರೀತಿ ಶಕ್ತಿ ತುಂಬಿಕೊಂಡು ಬಂದಿದ್ದಾರೆ. ಅದಕ್ಕಾಗಿ ಅವರಿಗ ತಲೆಬಾಗಿ ನಮಸ್ಕಾರ ಮಾಡುತ್ತೇನೆ.

ಕುರಿಯನ್‌ ಅವರು, ಪ್ರಧಾನಿಯನ್ನು ನಿರಾಸೆಗೊಳಿಸುವುದಿಲ್ಲ ಎಂದು ಅಂದು ಹೇಳಿದರು. ಇಂದೂ ನಿಮ್ಮ ಒಳ್ಳೆಯತನ ತೋರುತ್ತಿದೆ, ನಿಮಗೆ ಧನ್ಯವಾದ ಸಲ್ಲಿಸುತ್ತೇನೆ. ಗೃಹ ಸಚಿವರಾಗಿ ಹಾಗೂ ಸಹಕಾರ ಸಚಿವರಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಇಲಾಖೆಗಳಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿವೆ, ಕುರಿಯನ್‌ ಮಾರ್ಗದಲ್ಲೇ ನಡೆಯುತ್ತಿದ್ದೀರ. ನಿಮಗೆ ಆಭಾರಿಯಾಗಿದ್ದೇನೆ.

ಸಹಕಾರಿ ಬ್ಯಾಂಕ್‌ಗಳಲ್ಲಿ ಇಷ್ಟು ಅನ್ಯಾಯ ನಡೆಯುತ್ತಿದೆ ಎಂದು ಅವರೇ ಜವಾಬ್ದಾರಿ ವಹಿಸಿಕೊಂಡರು. ಹಲವಾರು ಸಂಸ್ಥೆಯ ಅಕ್ರಮಗಳನ್ನು ಸರಿಪಡಿಸುವ ಸಲುವಾಗಿ ಆಲೋಚಿಸಿ ಅನೇಕ ಬ್ಯಾಂಕ್‌ಗಳು, ಕೊ ಆಪರೇಟಿವ್‌ ಸೊಸೈಟಿಗಳ ನಷ್ಟದ ಕಾರಣ ತಿಳಿದು ಪರಿಹರಿಸಲು ಮುಂದಾಗಿದ್ದಾರೆ.

ಇಲ್ಲಿ ರಾಜಕೀಯ ಬೇಕಾಗಿಲ್ಲ. ಅವರ ವ್ಯಕ್ತಿತ್ವ ಬಹಳ ದೊಡ್ಡದು. ರೇವಣ್ಣ ನಿಮ್ಮ ಬಳಿಗೆ ಬಂದಾಗ ನೀವು ಸಾಕಷ್ಟು ಸಮಯ ನೀಡಿದಿರಿ. ನೀವು ನಿರಾಸೆಗೊಳಿಸಲಿಲ್ಲ. ಅವರನ್ನು ಬೆಂಬಲಿಸಿದಿರಿ, ಪ್ರೋತ್ಸಾಹಿಸಿದರಿ. ಅಮಿತ್‌ ಶಾ ಅವರೊಬ್ಬ ದೂರದರ್ಶಿತ್ವವುಳ್ಳ ವ್ಯಕ್ತಿ ಎಂದು ರೇವಣ್ಣ ನನಗೆ ಹೇಳಿದರು. ಈ ಸಂದರ್ಭದಲ್ಲಿ ನಾನು ಅದನ್ನು ಮರೆಯಲು ಸಾಧ್ಯವಿಲ್ಲ. ಯುವಕರನ್ನು ಪ್ರೋತ್ಸಾಹಿಸಿದ ತಮ್ಮ ತಾಳ್ಮೆಗೆ ನನ್ನ ನಮನಗಳು. ನಮ್ಮ ಪಕ್ಷದ ಸದಸ್ಯರಿಗೂ ಇದನ್ನು ತಿಳಿಸಿದ್ದೇನೆ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.

ಇದನ್ನೂ ಓದಿ | ಹಾಸನ ಅಭಿವೃದ್ಧಿಗೆ ಬಿ.ಎಸ್‌. ಯಡಿಯೂರಪ್ಪ ಅಡ್ಡಗಾಲು: ಮೋದಿ ಭೇಟಿ ನಂತರ ಎಚ್‌.ಡಿ. ದೇವೇಗೌಡ ವಾಗ್ದಾಳಿ

Exit mobile version