ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery Water Dispute) ಸಂಬಂಧಪಟ್ಟಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ಶಿಫಾರಸು ಮಾಡಿರುವುದನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಬಲವಾಗಿ ಖಂಡಿಸಿದ್ದಾರೆ. ರಾಜ್ಯಕ್ಕೆ ಇನ್ನೊಂದು ದೊಡ್ಡ ಆಘಾತ ಎಂದು ಹೇಳಿದ್ದಾರೆ. ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಪ್ರಶ್ನೆ ಮಾಡಿರುವ ಎಚ್.ಡಿ. ಕುಮಾರಸ್ವಾಮಿ ಅವರು, ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ (ಟ್ವೀಟ್) ಮಾಡಿದ್ದಾರೆ.
ಇದನ್ನೂ ಓದಿ: Karnataka Weather : ಬೆಂಗಳೂರಿನಲ್ಲಿ ಭರ್ಜರಿ ಮಳೆ; ದಕ್ಷಿಣ ಒಳನಾಡು, ಕರಾವಳಿಯಲ್ಲಿ ಸಾಧಾರಣ ಪ್ರದರ್ಶನ
ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಸಾರಾಂಶ ಇಲ್ಲಿದೆ
ಮಳೆಯ ಕೊರತೆಯಿಂದ ಜಲಾಶಯಗಳೆಲ್ಲ ಖಾಲಿ ಆಗಿದ್ದರೂ ಕರ್ನಾಟಕಕ್ಕೆ ಬರೆಯ ಮೇಲೆ ಬರೆ ಎಳೆಯಲಾಗುತ್ತದೆ. ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಮುಂದಿನ 15 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಮತ್ತೆ ಆದೇಶ ನೀಡಿರುವುದು ರಾಜ್ಯಕ್ಕೆ ಇನ್ನೊಂದು ದೊಡ್ಡ ಆಘಾತ. ಇಂಥ ಜಲಾಘಾತಗಳನ್ನು ಕೊಡುವುದಕ್ಕೇ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಗಳನ್ನು ರಚನೆ ಮಾಡಿಕೊಂಡಿದ್ದಾರೆಯೇ ಎನ್ನುವ ಅನುಮಾನ ನಮ್ಮದು.
ಈ ಆದೇಶ ಕರ್ನಾಟಕದ ಹಿತಾಸಕ್ತಿಗೆ ಮರಣಶಾಸನ
ಈ ಆದೇಶಗಳು ಸಂವಿಧಾನ ಹಾಗೂ ಒಕ್ಕೂಟದ ಆಶಯಗಳಿಗೆ ವಿರುದ್ಧವಾಗಿವೆ. ಮಾತ್ರವಲ್ಲ, ಕನ್ನಡಿಗರ ತಾಳ್ಮೆ, ಸಹನೆ ಪರೀಕ್ಷೆ ಮಾಡುವಂತಿವೆ. ಈ ಆದೇಶ ಕರ್ನಾಟಕದ ಹಿತಾಸಕ್ತಿಗೆ ಮರಣಶಾಸನ. ಬೆಂಗಳೂರು ಜನ ಕುಡಿಯುವ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಕಾವೇರಿ ಕೊಳ್ಳದ ರೈತರ ಒಂದು ಬೆಳೆಗೂ ಸಮರ್ಪಕವಾಗಿ ನೀರು ಹರಿದಿಲ್ಲ. ಹೀಗಿದ್ದರೂ ರಾಜ್ಯಕ್ಕೆ ಆದೇಶದ ಮೇಲೆ ಆದೇಶ ನೀಡಿ ಸಮಾನ ನ್ಯಾಯ ತತ್ವವನ್ನು ನಾಮಾವಶೇಷ ಮಾಡಲಾಗಿದೆ.
ಆದೇಶ ದಿಕ್ಕರಿಸುವ ಎದೆಗಾರಿಕೆ ಸರ್ಕಾರಕ್ಕೆ ಇಲ್ಲ
ಕನ್ನಡಿಗರೂ ಮನುಷ್ಯರು, ಅವರಿಗೂ ಅನ್ನ ನೀರು ಬೇಕು. ಅವರೂ ಈ ಒಕ್ಕೂಟ ವ್ಯವಸ್ಥೆಯ ಭಾಗ ಎನ್ನುವುದನ್ನು ಸಮಿತಿ ಮರೆತಿರುವಂತಿದೆ. ಸರ್ಕಾರದಿಂದ ಕಾವೇರಿ ಹಿತರಕ್ಷಣೆ ಸಾಧ್ಯವಿಲ್ಲ. ಈ ಆದೇಶವನ್ನು ದಿಕ್ಕರಿಸುವ ಎದೆಗಾರಿಕೆ ಸರ್ಕಾರಕ್ಕೆ ಇಲ್ಲ. ಜನರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು, ಜನರ ಜತೆ ನಾವಿದ್ದೇವೆ, ನಮ್ಮ ಪಕ್ಷವೂ ಇದೆ.
ಕನ್ನಡಿಗರ ಕಣ್ಣೀರು ಹರಿಸುವ ಕಾಂಗ್ರೆಸ್ ಸರ್ಕಾರ
ಒಂದು ಕಡೆ ವಿದ್ಯುತ್ ಆಘಾತದಿಂದ ರೈತರು ಕಂಗೆಟ್ಟಿದ್ದಾರೆ. ಮತ್ತೊಂದೆಡೆ ಕಾವೇರಿ ಬವಣೆ ರಾಜ್ಯವನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ಕನ್ನಡಿಗರ ಕಣ್ಣೀರು ಹರಿದರೂ ಚಿಂತೆ ಇಲ್ಲ, ತಮಿಳುನಾಡಿಗೆ ಕಾವೇರಿ ಹರಿಯಲಿ ಎನ್ನುವ ಮನಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಇದೆ” ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. “ಕಾವೇರಿ_ನಮ್ಮದು” ಎಂಬ ಹ್ಯಾಷ್‌ಟ್ಯಾಗ್ ಅಡಿ ಎಚ್.ಡಿ. ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಎಲ್ಲಿಯವರೆಗೆ ನೀರು ಬಿಡಬೇಕು?
ಅಕ್ಟೋಬರ್ 16ರಿಂದ 15 ದಿನಗಳ ಕಾಲ ನೀರು ಬಿಡುವಂತೆ ಸೂಚನೆ ನೀಡಿದ್ದು, ಪ್ರತಿ ದಿನ 3000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಶಿಫಾರಸಿನಲ್ಲಿ ತಿಳಿಸಿದೆ.
ಕರ್ನಾಟಕದ ವಾದ ಏನಿತ್ತು?
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority) ಜತೆ ನಡೆದ ಸಭೆಯಲ್ಲಿ ಕರ್ನಾಟಕವು ವಾದ ಮಂಡಿಸಿತ್ತು. ಯಾವುದೇ ಕಾರಣಕ್ಕೂ ನೀರು ಬಿಡಲು ಆಗುವುದಿಲ್ಲ. ದಿನಾಂಕ 10.10.2023ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇಕಡಾ 50.891 ರಷ್ಟು ಇದೆ. ಹೀಗಾಗಿ ನೀಡು ಬಿಡುವುದು ಕಷ್ಟ ಎಂದು ಕರ್ನಾಟಕ ವಾದ ಮಂಡಿಸಿದೆ.
ಸಂಕಷ್ಟದ ಹರಿವುಗಳು ಸೇರಿದಂತೆ ಈಗ ಆಗುತ್ತಿರುವ ಜಲ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಗಮನಿಸಿದರೆ ಕರ್ನಾಟಕ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಳ ಆಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳುವುದು ಹಾಗೂ ಆ ಅಂದಾಜಿನ ಭರವಸೆ ಮೇಲೆ ನೀರು ಬಿಡುವುದು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಅನಿಯಂತ್ರಿತ ಜಲಾನಯನದಿಂದ ಉಂಟಾಗುವ ಕೊಡುಗೆಯನ್ನು ಹೊರತುಪಡಿಸಿ ಬಿಳಿಗುಂಡ್ಲುವಿಗೆ ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಾದವನ್ನು ಮಂಡಿಸಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು, ಮುಂದಿನ 15 ದಿನಗಳವರೆಗೆ ಕರ್ನಾಟಕವು 16,000 ಕ್ಯೂಸೆಕ್ (20.75 ಟಿಎಂಸಿ) ಅನ್ನು ಬಿಡುಗಡೆ ಮಾಡಬೇಕೆಂದು ಆದೇಶಿಸಿತು.
ಇದನ್ನೂ ಓದಿ: Karnataka Politics : ಡಿಕೆಶಿ ಕಾಲಿಗೆ ಬಿದ್ದಿದ್ದೇನೆ; ಅನುದಾನ ಕೊಡದಿದ್ದರೆ ಉಗ್ರ ಪ್ರತಿಭಟನೆ ಎಂದ ಮುನಿರತ್ನ
ಪ್ರಾಧಿಕಾರ ಯಾವತ್ತು ರಾಜ್ಯದ ಪರ ಇರಲಿಲ್ಲ
ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸಹ ರಾಜ್ಯದ ಪರವಾಗಿ ಯಾವತ್ತೂ ಇಲ್ಲ. ಹೀಗಾಗಿ ಈ ಆದೇಶವನ್ನು ಮತ್ತೆ ಪ್ರಾಧಿಕಾರಕ್ಕೆ ಪ್ರಶ್ನೆ ಮಾಡಿದರೂ ಪ್ರಯೋಜನ ಇಲ್ಲದಂತೆ ಆಗುತ್ತದೆ. ಕಳೆದ ಬಾರಿ ಪ್ರಾಧಿಕಾರದ ಕದ ತಟ್ಟಿದಾಗಲೂ ಕರ್ನಾಟಕದ ಕೈ ಹಿಡಿದಿರಲಿಲ್ಲ. ಮೊದಲು ಆಗಸ್ಟ್ 26ರಂದು 5000 ಕ್ಯೂಸೆಕ್, ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಿತ್ತು. ಬಳಿಕ ಸೆಪ್ಟೆಂಬರ್ 29ರಂದು ಸಹ ನೀರು ಬಿಡಲು ಆದೇಶಿಸಿತ್ತು. ಎಲ್ಲ ಬಾರಿ ಮನವಿ ಮಾಡಿದಾಗಲೂ CWRC ಹೇಳಿದ್ದೇ ಸರಿ ಎಂದು ಹೇಳಿತ್ತು.