ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಭರ್ಜರಿ ತಯಾರಿ ನಡೆಯುತ್ತಿದೆ. ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಲೆಕ್ಕಾಚಾರ ಜೋರಾಗಿಯೇ ಇದೆ. ಅಲ್ಲದೆ, ಸೀಟು ಹಂಚಿಕೆ ಬಗ್ಗೆ ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಈಗ ಜೆಡಿಎಸ್‌ಗೆ (JDS Karnataka) ಮೂರು ಸೀಟುಗಳನ್ನು ಬಿಟ್ಟುಕೊಡುವ ಬಗ್ಗೆ ಅಂತಿಮ ತೀರ್ಮಾನವಾಗಿದೆ ಎಂದು ಹೇಳಲಾಗಿದೆ. ಜತೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಮೈತ್ರಿ ಸೀಟು ಹಂಚಿಕೆಯಲ್ಲಿ ಮಹತ್ತರ ಬೆಳವಣಿಗೆಯಾಗಿದ್ದು, ನಾಲ್ಕರಿಂದ ಐದು ಸೀಟ್ ಕೇಳುತ್ತಿದ್ದ ಜೆಡಿಎಸ್‌ಗೆ ಮೂರು ಸೀಟು ಬಿಟ್ಟು ಕೊಡಲು ನಿರ್ಧಾರ ಮಾಡಲಾಗಿದೆ. ಅಲ್ಲದೆ, ಮಂಡ್ಯದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತವಾಗಿದೆ.
ಇನ್ನು ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದು, ಚಿಕ್ಕಬಳ್ಳಾಪುರ ಅಥವಾ ಕೋಲಾರ ಎರಡರಲ್ಲಿ ಒಂದು ಸ್ಥಾನವನ್ನು ಬಿಟ್ಟು ಕೊಡುವ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿ ಹೈಕಮಾಂಡ್ ಬಳಿ ಅಂತಿಮ ತೀರ್ಮಾನ ಆಗಲಿದೆ ಎನ್ನಲಾಗಿದೆ.
ಕೋಲಾರ ಬಿಟ್ಟುಕೊಡಲು ಆಗ್ರಹ
ಇದೇ ವೇಳೆ ಕೋಲಾರದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಹೊಂದಿದೆ. ಹಾಗಾಗಿ ಕೋಲಾರವನ್ನೇ ಬಿಟ್ಟುಕೊಡುವಂತೆ ಜೆಡಿಎಸ್ ಆಗ್ರಹಿಸಿದೆ. ಹೀಗಾಗಿ ಈ ಬಗ್ಗೆ ಸಾಧಕ – ಬಾಧಕಗಳ ಚರ್ಚೆ ನಡೆದಿದೆ ಎನ್ನಲಾಗಿದೆ.
ಸುಮಲತಾ ಅಂಬರೀಷ್ ನಡೆ ಏನು?
ಮಂಡ್ಯ ಲೋಕಸಭಾ ಕ್ಷೇತ್ರದ ವಿಚಾರವಾಗಿ ಸುಮಲತಾ ಅಂಬರೀಷ್ ಅವರ ಬಳಿ ಮಾತನಾಡುತ್ತೇನೆ. ಸುಮಲತಾ ಸೇರಿ ಎಲ್ಲರ ಜತೆ ಚರ್ಚಿಸಲಾಗುವುದು. ಮಂಡ್ಯ ಟಿಕೆಟ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಈಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದರು. ಇದೀಗ ಮಾತುಕತೆ ವೇಳೆ ಜೆಡಿಎಸ್‌ಗೆ ಮಂಡ್ಯವನ್ನು ಬಿಟ್ಟುಕೊಡುವ ತೀರ್ಮಾನ ಮಾಡಲಾಗಿದ್ದು, ಸುಮಲತಾ ಅವರ ಕಥೆ ಏನು? ಅವರಿಗೆ ಬಿಜೆಪಿಯಲ್ಲಿ ಬೇರೆ ಕ್ಷೇತ್ರವನ್ನು ಬಿಟ್ಟುಕೊಡಲಾಗುತ್ತಿದೆಯೇ? ಅವರ ಮನವೊಲಿಕೆ ಪ್ರಕ್ರಿಯೆ ಆಗಿದೆಯೇ? ಇಲ್ಲವೇ ಅವರನ್ನು ಕೇಳದೆಯೇ ನಿರ್ಧಾರ ಮಾಡಲಾಗಿದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಒಂದು ವೇಳೆ ಸುಮಲತಾ ಮಂಡ್ಯದಿಂದಲೇ ಸ್ಪರ್ಧೆಯನ್ನು ಬಯಸಿಸದರೆ ಅವರ ಮುಂದಿನ ನಡೆ ಏನು? ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಾರೆಯೇ? ಅದಕ್ಕೆ ಕಾಂಗ್ರೆಸ್ ನಾಯಕರು ಒಪ್ಪುತ್ತಾರೆಯೇ? ಎಂಬ ಬಗ್ಗೆಯೂ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ.
ಸುಮಲತಾ ಜತೆ ಮಾತನಾಡುವೆ ಎಂದಿದ್ದ ಎಚ್‌ಡಿಕೆ
ಅಲ್ಲದೆ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಈಚೆಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಸುಮಲತಾ ಅವರೇನು ನಮ್ಮ ಶತ್ರು ಅಲ್ಲ. ಅಗತ್ಯ ಬಿದ್ದರೆ ಅವರ ಜತೆಗೂ ಮಾತನಾಡುತ್ತೇನೆ ಎಂದು ಬಿಗುಮಾನ ಬಿಟ್ಟು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಹಿಂದೆ ಎಚ್‌ಡಿಕೆ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ಚರ್ಚೆಗಳೂ ನಡೆದಿದ್ದವು. ಆದರೆ, ಈಗ ಬಿ.ಎಸ್. ಯಡಿಯೂರಪ್ಪ ಅವರ ಜತೆಗಿನ ಸಭೆ ಸೇರಿದಂತೆ ಬಿಜೆಪಿ ಹೈಕಮಾಂಡ್ ಜತೆಗಿನ ಸಭೆಯಲ್ಲಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನಕ್ಕೆ ಬರಲಾಗಿದೆ ಎಂಬ ಅಂಶ ಗೊತ್ತಾಗಿದೆ. ಅಲ್ಲದೆ, ಅಲ್ಲಿಂದ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿದೆ.
ಕೇಂದ್ರ ಮಂತ್ರಿಯಾಗಲಿದ್ದಾರಾ ಎಚ್‌ಡಿಕೆ?
ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಳಿಕ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ನೇಮಕ ಮಾಡುವ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ಹೇಳಲಾಗಿದೆ. ಈ ಸಂಬಂಧ ಅನೇಕ ಸುತ್ತಿನ ಮಾತುಕತೆಗಳೂ ನಡೆದಿವೆ. ಆದರೆ, ಇದುವರೆಗೆ ಆ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿಲ್ಲ. ತಾವು ಕೇಂದ್ರದಲ್ಲಿ ಮಂತ್ರಿಯಾಗುವ ಮಾತೇ ಇಲ್ಲ ಎಂದು ಹೇಳಿಕೊಂಡು ಬಂದಿದ್ದಾರೆ.
ಒಕ್ಕಲಿಗ ಮತ ಕಾರ್ಡ್ ಪ್ಲೇ ಮಾಡ್ತಾರಾ ಎಚ್‌ಡಿಕೆ?
ಇನ್ನು ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಕಾರ್ಡ್ ಅನ್ನು ಪ್ಲೇ ಮಾಡಿದ್ದರು. ನನಗೆ ಈ ಬಾರಿ ಅವಕಾಶ ಕೊಡಿ, ಮುಖ್ಯಮಂತ್ರಿ ಆಗುತ್ತೇನೆ ಎಂದು ಮನವಿ ಮಾಡಿದ್ದರು. ಹೀಗಾಗಿ ಮಂಡ್ಯ ಸೇರಿದಂತೆ ಆ ಭಾಗದಲ್ಲಿ ಕಾಂಗ್ರೆಸ್‌ಗೆ ಭಾರಿ ಜಯ ಸಿಕ್ಕಿತ್ತು. ಆದರೆ, ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡದಿರುವುದು ಒಕ್ಕಲಿಗರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಈಗ ಇದೇ ಕಾರ್ಡ್ ಬಳಸಲು ಎಚ್‌ಡಿಕೆ ಮುಂದಾಗಿದ್ದಾರೆ ಎನ್ನಲಾಗಿದೆ. ನಾನು ಕೇಂದ್ರ ಮಂತ್ರಿಯಾಗುತ್ತೇನೆ. ನನಗೆ ಅವಕಾಶ ಮಾಡಿಕೊಡಿ, ಜೆಡಿಎಸ್ ಅನ್ನು ಬೆಂಬಲಿಸಿ ಎಂದು ಮತದಾರರ ಮುಂದೆ ಹೋಗಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Ram Mandir: ನಾಳೆ ಉಡುಪಿಯ ಕುಂಭಾಶಿಯಲ್ಲೂ ಶ್ರೀರಾಮನ ಪಾದುಕೆಯ ಮಂದಿರ ಲೋಕಾರ್ಪಣೆ
ಕಳೆದ ಬಾರಿ ಸೋತಿದ್ದ ಪುತ್ರ ನಿಖಿಲ್ ಕುಮಾರಸ್ವಾಮಿ
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದರು. ಅಲ್ಲದೆ ಈ ಚುನಾವಣೆಯಲ್ಲಿ ಸುಮಲತಾ ಅವರನ್ನು ಬಿಜೆಪಿ ಬೆಂಬಲಿಸಿತ್ತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 + 1 ರಲ್ಲಿ ಬಿಜೆಪಿ ಜಯಗಳಿಸಿತ್ತು. ಈಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಚುನಾವಣೆ ಕಣ ರಂಗೇರಿದೆ.