Site icon Vistara News

Honeytrap Case | ಡ್ರಾಪ್ ಕೊಡುವ ನೆಪದಲ್ಲಿ ಕಿಡ್ನಾಪ್: ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿದ ಚಿನ್ನದ ವ್ಯಾಪಾರಿ

Honeytrap Case

ಮಂಡ್ಯ : ಡ್ರಾಪ್‌ ಕೊಡುವ ನೆಪದಲ್ಲಿ ಚಿನ್ನದ ವ್ಯಾಪಾರಿಯನ್ನು ಕಿಡ್ನಾಪ್‌ ಮಾಡಿ ಲಾಡ್ಜ್‌ಗೆ ಕರೆದೊಯ್ದು ಹನಿಟ್ರ್ಯಾಪ್‌ (Honeytrap Case) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಒಬ್ಬಾಕೆಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಮಂಡ್ಯದ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯಾದ ಜಗನ್ನಾಥ್‌ ಎಸ್‌. ಶೆಟ್ಟಿ ಫೆಬ್ರವರಿ 26ರಂದು ರಾಜಹಂಸ ಬಸ್‌ನಲ್ಲಿ ಮಂಗಳೂರಿಗೆ ಹೋಗಲು ಟಿಕೆಟ್‌ ಕಾದರಿಸಿದ್ದರು. ಆ ಬಸ್ಸು ಮೈಸೂರಿನಿಂದ ಮಂಗಳೂರಿಗೆ ಹೋಗುವುದಾಗಿತ್ತು. ಜಗನ್ನಾಥ್‌ ಅವರು ಬಸ್ಸಿನಲ್ಲಿ ಹೋಗುವುದಕ್ಕಾಗಿ ಮಂಡ್ಯದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ರಾತ್ರಿ 8.00 ಗಂಟೆಗೆ ಕಾಯುತ್ತಿದ್ದರು. ಅದೇ ವೇಳೆಯಲ್ಲಿ ಒಂದು ಅಪರಿಚಿತ ಕಾರು ಬಂದು ನಿಂತಿತು. ಜಗನ್ನಾಥ್ ಅವರ ಬಳಿ ಕಾರಿನವರು ಅವರ ಚಿನ್ನದ ಅಂಗಡಿ ಬಗ್ಗೆ ಕೇಳಿ ಕ‌ನ್‌ಫರ್ಮ್‌ ಮಾಡಿಕೊಂಡರು. ತಾವೂ ಮೈಸೂರಿನ ಕಡೆಗೆ ಹೋಗುತ್ತಿದ್ದೇವೆ, ಡ್ರಾಪ್ ಕೊಡುತ್ತೇವೆ ಎಂದು ಈ ಖತರ್ನಾಕ್‌ ಗ್ಯಾಂಗ್‌ ಪರಿಚಯಸ್ಥರಂತೆ ಮಾತನಾಡಿ, ಜಗನ್ನಾಥ್‌ ಅವರನ್ನು ಮೈಸೂರಿಗೆ ಕರೆದುಕೊಂಡು ಹೋದರು. ಕಾರಿನಲ್ಲಿ ಆರೋಪಿ ಸಲ್ಮಾ ಬಾನು ಹಾಗೂ ಜಯಂತ್‌ ಎಂಬುವರಿದ್ದು, ವ್ಯಾಪಾರಿಯ ಜತೆ ಪರಿಚಯ ಬೆಳೆಸಿಕೊಂಡರು.

ಇದನ್ನೂ ಓದಿ | Honeytrap | ಬೆತ್ತಲೆ ವಿಡಿಯೋ ಕಾಲ್‌ ರೆಕಾರ್ಡ್‌, ಸಿಬಿಐ ಹೆಸರಲ್ಲಿ ಯುವಕನಿಂದ ಲಕ್ಷಾಂತರ ರೂ. ವಸೂಲಿ

ಆರೋಪಿಗಳು ಮೈಸೂರಿಗೆ ತಲುಪುತ್ತಿದ್ದಂತೆ, ನಮ್ಮ ಸ್ನೇಹಿತರು ದರ್ಶನ್‌ ಪ್ಯಾಲೇಸ್‌ನಲ್ಲಿ ಚಿನ್ನದ ಬಿಸ್ಕತ್‌ ತಂದಿದ್ದಾರೆ. ಅದು ಒರಿಜಿನಲ್ಲೇ ಎಂದು ನೋಡಿ ಹೇಳಿ ಎಂದು ನಂಬಿಸಿದರು. ಮೊದಲಿಗೆ ಒಪ್ಪದ ಜಗನ್ನಾಥ್‌ ನಂತರ ಇವರ ಸುಳ್ಳಿನ ಸುಳಿಯಲ್ಲಿ ಸಿಲುಕಿ ಒಪ್ಪಿದರು. ನಂತರ ಪ್ಯಾಲೇಸ್‌ಗೆ ಗ್ಯಾಂಗ್‌ ಜತೆ ಹೊರಟ ಜಗನ್ನಾಥ್‌, ಲಾಡ್ಜ್‌ ರೂಮಿನ ಒಳಗೆ ಹೋಗುತ್ತಿದ್ದಂತೆ ಖತರ್ನಾಕ್‌ ಗ್ಯಾಂಗ್‌ ಅಲ್ಲಿಂದ ನಾಪತ್ತೆಯಾಯಿತು. ಸುಮಾರು 22-25 ವರ್ಷದ ಹುಡುಗಿ ರೂಮಿನಲ್ಲಿದ್ದಳು. ಎರಡು ನಿಮಿಷದ ನಂತರ ಆರೋಪಿಗಳು ರೂಮಿನ ಒಳಗೆ ನುಗ್ಗಿ, ಹುಡುಗಿಯೊಂದಿಗೆ ಜಗನ್ನಾಥ್‌ ಇರುವ ದೃಶ್ಯವನ್ನು ರೆಕಾರ್ಡ್‌ ಮಾಡಿಕೊಂಡರು.

ಈ ಗ್ಯಾಂಗಿನ ಒಬ್ಬಳು, ʼಇವಳು ನನ್ನ ತಂಗಿ, ನೀನು ಲಾಡ್ಜ್‌ಗೆ ಕರೆದುಕೊಂಡು ಬಂದಿದ್ದೀಯಾʼ ಎಂದು ಜಗನ್ನಾಥ್‌ ಅವರ ಮೇಲೆ ಹಲ್ಲೆ ಮಾಡಿದಳು. ಇನ್ನೊಬ್ಬ ಆರೋಪಿ ಇದನ್ನೆಲ್ಲ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡ. ನಂತರ ಇದೇ ವಿಚಾರ ಇಟ್ಟುಕೊಂಡು ಜಗನ್ನಾಥ್‌ಗೆ ಬೆದರಿಕೆ ಒಡ್ಡಿ 4 ಕೋಟಿ ರೂ. ಹಣ ನೀಡಲು ಬೇಡಿಕೆ ಇಟ್ಟ. ಕೊಡದಿದ್ದರೆ ಕೊಲೆ ಮಾಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ. ಇದರಿಂದ ಭಯಗೊಂಡ ಜಗನ್ನಾಥ್‌, 50 ಲಕ್ಷ ರೂ. ನೀಡುವುದಾಗಿ ಒಪ್ಪಿದರು. ಮಾರನೇ ದಿನ ಸ್ನೇಹಿತರ ಮೂಲಕ ಹಣವನ್ನು ಪಡೆದು ಗ್ಯಾಂಗ್‌ಗೆ ಒಪ್ಪಿಸಿದರು. ಹಣ ಪಡೆದ ನಂತರ ಆರೋಪಿಗಳು ಜಗನ್ನಾಥ್‌ ಅವರನ್ನು ಬಿಡುಗಡೆಗೊಳಿಸಿದರು.

ಆರು ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಜಗನ್ನಾಥ್‌ ದೂರನ್ನು ನೀಡಿದ್ದರು. ದೂರಿನ ಮೇರೆಗೆ ಆರೋಪಿ ಸಲ್ಮಾ ಬಾನು ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳು ಇನ್ನೂ ಸಿಕ್ಕಿ ಬಿದ್ದಿಲ್ಲ.

ಇದನ್ನೂ ಓದಿ | ಹನಿ ಟ್ರ್ಯಾಪ್‌ ಮೂಲಕ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ ನಾಯಕ ನಟ ಯುವರಾಜ್‌ ಅರೆಸ್ಟ್‌

Exit mobile version