Site icon Vistara News

JDS Karnataka : ಗೋಸುಂಬೆ ಕಾಂಗ್ರೆಸ್‌ಗೆ ಹನುಮನಿಂದಲೇ ಅಂತ್ಯ; ಜೆಡಿಎಸ್‌ ಆಕ್ರೋಶ

JDS Karnataka HD Kumaraswamy

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಬಿಜೆಪಿ ವಕ್ತಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕರೆದಿದ್ದರು. ಜತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಲಾಳು ಎಂದೂ ಹೀಗಳೆಯಲಾಗಿತ್ತು. ಇದಕ್ಕೆ ಕರ್ನಾಟಕ ಜೆಡಿಎಸ್‌ (JDS Karnataka) ಪ್ರತ್ಯುತ್ತರವನ್ನು ನೀಡಿದೆ. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ (Keragodu in mandya) ನಡೆದ ಹನುಮ ಧ್ವಜ ವಿವಾದವನ್ನು (Hanuman Flag Controversy) ಗುರಿಯಾಗಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿರುವ ಅದು ʻಊಸರವಳ್ಳಿಯಂತೆ ಆಡುತ್ತಿರುವ ಕಾಂಗ್ರೆಸ್‌ ಹನುಮನಿಂದಲೇ ಅಂತ್ಯವಾಗಲಿದೆʼ (Congress will be Finished by Hanuma) ಎಂದಿದೆ. ಹಾಗಿದ್ದರೆ ಅದು ನಡೆಸಿರುವ ಎಕ್ಸ್‌ ದಾಳಿಯ ಮುಖ್ಯಾಂಶಗಳೇನು?

JDS Karnataka : ಕಾಂಗ್ರೆಸ್‌ ಊರಸವಳ್ಳಿ ಕುಮಾರಸ್ವಾಮಿ ನೇರ ನಿಷ್ಠುರ

ಗೊಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ. ಈ ದೇಶದಲ್ಲಿ ಯಾವುದಾದರೂ ಛದ್ಮವೇಷದಾರಿ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಎಚ್‌.ಡಿ ಕುಮಾರಸ್ವಾಮಿ ಅವರು ಹಾಗಲ್ಲ. ಏನಾದರೂ ಹೇಳಬೇಕೆಂದರೆ; ನೇರ, ದಿಟ್ಟ, ನಿಷ್ಠುರ. ಏನೇ ಬಂದರೂ ಎದುರಿಸುವ ಕೆಚ್ಚು ಅವರದ್ದು, ಪಲಾಯನ ಮಾಡುವ ಪೈಕಿ ಅವರಲ್ಲ.

JDS Karnataka : ಕುಮಾರಸ್ವಾಮಿ ಆರೆಸ್ಸೆಸ್‌ ಟೀಕೆ ಮಾಡಿದ್ದು ನಿಜ

ಆರ್‌ಎಸ್‌ಎಸ್‌ ಬಗ್ಗೆ ಕುಮಾರಸ್ವಾಮಿ ಅವರು ಹಿಂದೆ ಮಾತನಾಡಿದ್ದಾರೆ, ಬರೆದಿದ್ದಾರೆ.. ನಿಜ. ಟೀಕೆ ಮಾಡಿದ್ದಾರೆನ್ನುವುದೂ ಹೌದು. ಹಾಗೆಯೇ, ಕಲ್ಲಡ್ಕ ಪ್ರಭಾಕರ ಭಟ್ಟರು ನಡೆಸುತ್ತಿರುವ ಶ್ರೀರಾಮ ವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ ಅವರು ಏನು ಹೇಳಬೇಕೋ ಅದನ್ನೇ ಹೇಳಿದ್ದಾರೆ. ಕಾಮಾಲೆ ಕಣ್ಣಿನ, ಕುತ್ಸಿತ ಕಿವಿಯ ಕಾಂಗ್ರೆಸ್ ಗೆ ಅದೆಲ್ಲಾ ಗೊತ್ತಾಗುವುದೇ ಇಲ್ಲ.

JDS Karnataka: ರಾಮನಗರ, ಚನ್ನಪಟ್ಟಣದಲ್ಲಿ ಬೆಂಕಿ ಹಾಕಿದ ಕಾಂಗ್ರೆಸ್‌

ಪ್ರಭಾಕರ ಭಟ್ಟರ ಶಾಲೆಯಲ್ಲಿ, ನಿನ್ನೆ (ಜನವರಿ 29) ದಿನ ಮಂಡ್ಯದಲ್ಲಿ ಕುಮಾರಸ್ವಾಮಿ ಅವರು ಮಾಡಿರುವ ಭಾಷಣಗಳನ್ನು ಕಾಂಗ್ರೆಸ್ಸಿಗರು ಕೇಳಲಿ. ಕೊಳೆತು ನಾರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕೊಚ್ಚೆಯೇ ಸಹ್ಯವಾಗಿದೆಯೇ ಹೊರತು ಸತ್ಯವಲ್ಲ. ವೀರೇಂದ್ರ ಪಾಟೀಲರ ಕಾಲದಲ್ಲಿ (1989) ಚನ್ನಪಟ್ಟಣ, ರಾಮನಗರದಲ್ಲಿ ಬೆಂಕಿ ಹಾಕಿ ರಾಜಕೀಯ ಬೇಳೆ ಬೇಯಿಸಿಕೊಂಡ ಗಿರಾಕಿಗಳು ನೀವು? ಹಿರಿಯರಾದ ವೀರೇಂದ್ರ ಪಾಟೀಲರ ಜೀವಕ್ಕೆ ಕ್ಷೋಭೆ ಕೊಟ್ಟ ಆಸಾಮಿಗಳೂ ನೀವೇ? ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ.

ಇದನ್ನೂ ಓದಿ: Hanuman Flag: ಎಚ್.ಡಿ. ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರರು: ಮುಖ್ಯಮಂತ್ರಿ ಸಿದ್ದರಾಮಯ್ಯ

JDS Karnataka : ಕೇಸರಿ ನಮ್ಮ ಸಂಸ್ಕೃತಿ, ಕೊಳಕು ಮನಸಿಗೆ ಕೇಸರಿಯೂ ಸರಕು

ಕೇಸರಿ ಬಗ್ಗೆ ಹೇಳಿದ್ದೀರಿ, ಸರಿ. ಅದು ನಮ್ಮ ಸಂಪ್ರದಾಯ, ಸಂಸ್ಕೃತಿಯ ಪ್ರತೀಕ. ನಮ್ಮ ನಂಬಿಕೆಯ ಹೆಗ್ಗುರುತು. ಸ್ವಧರ್ಮದ ಬಗ್ಗೆ ಗೌರವವೇ ಇಲ್ಲದವರಿಗೆ, ಓಲೈಕೆ ಮಾಡಿಕೊಂಡೇ ಒಲೆ ಉರಿಸಿಕೊಳ್ಳುವವರಿಗೆ ಆಚಾರ ವಿಚಾರಗಳ ಪಾವಿತ್ರ್ಯತೆ ಎಲ್ಲಿ ಗೊತ್ತಾಗಬೇಕು? ಕೊಳಕು ಮನಸ್ಸಿನವರಿಗೆ ಕೇಸರಿಯೂ ರಾಜಕೀಯದ ಸರಕು!!

JDS Karnataka : ಆರೆಸ್ಸೆಸ್‌ ಕಾಲಾಳೋ? ಸೇವಕರೋ, ಕಾಲ ನಿರ್ಣಯಿಸುತ್ತದೆ

ಕುಮಾರಸ್ವಾಮಿ ಅವರು ಆರೆಸ್ಸೆಸ್‌ ಕಾಲಾಳೋ, ಸೇವಕರೋ ಎನ್ನುವುದು ಕಾಲವೇ ನಿರ್ಣಯಿಸುತ್ತದೆ. ಆದರೆ, ನಿಮ್ಮ ಸಿದ್ಧಹ ಸ್ತನಂತೆ ಉಂಡ ಮನೆಗೆ ಎರಡು ಬಗೆಯುವ ಪೈಕಿ ಅವರಲ್ಲ. ಮಾತೃಭೂಮಿಯನ್ನು, ಪರಂಪರಾಗತ ಆಚಾರ-ವಿಚಾರ, ನಂಬಿಕೆಗಳಿಗೆ ಕೊಳ್ಳಿ ಇಟ್ಟು ಜಾತಿ-ಧರ್ಮಗಳ ನಡುವೆ ವಿಷಪ್ರಾಶನ ಮಾಡಿ, ಅದನ್ನೇ ಅಮಲೇರಿಸಿಕೊಳ್ಳುವ ಗತಿಗೆಟ್ಟ ಕಾಂಗ್ರೆಸ್ ಮನಸ್ಥಿತಿಗೆ ಆ ಹನುಮದೇವರೇ ಅಂತ್ಯ ಕಾಣಿಸುತ್ತಾನೆ. ಇದು ಸತ್ಯ.. ಸತ್ಯ..

Exit mobile version