ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ಅವರ ಜನಸಂಪರ್ಕ ಯಾತ್ರೆ ಸಮಾವೇಶದಲ್ಲಿ ಭಾಗವಹಿಸಿದ್ದ ಜನರಿಗೆ ಸ್ಟೀಲ್ ಬಿಂದಿಗೆ ಗಿಫ್ಟ್ ನೀಡಲಾಗಿದೆ. ಸಮಾವೇಶಕ್ಕೆ ಬಂದ ಜನರಿಗೆ ಲಾರಿಯಿಂದ ಗಿಫ್ಟ್ ಆಗಿ ಬಿಂದಿಗೆಗಳನ್ನು ಕಾರ್ಯಕರ್ತರು ಎಸೆಯುತ್ತಿರುವ ದೃಶ್ಯ ವೈರಲ್ ಆಗಿದೆ.
ನಿನ್ನೆ ಕೆ.ಆರ್.ಪೇಟೆಯಲ್ಲಿ ಕುಮಾರಸ್ವಾಮಿಯವರ ಪಂಚರತ್ನ ರಥ ಯಾತ್ರೆ ನಡೆದಿತ್ತು. ಈ ವೇಳೆ ಸಮಾವೇಶಕ್ಕೆಂದು ವಿವಿಧೆಡೆಯಿಂದ, ಹಾಲಿನ ಡೈರಿ ಕಡೆಯಿಂದ ಹೆಚ್ಚಿನ ಮಹಿಳೆಯರನ್ನು ಸ್ಥಳೀಯ ಮುಖಂಡರು ಕರೆತಂದಿದ್ದರು. ಈ ವೇಳೆ ಸ್ಟೀಲ್ ಬಿಂದಿಗೆಗಳನ್ನು ಲಾರಿಯಲ್ಲಿ ತುಂಬಿಕೊಂಡು ಬಂದು ಜನರ ಗುಂಪಿನತ್ತ ಎಸೆಯಲಾಯಿತು. ಉಡುಗೊರೆಗೆ ಮುಗಿಬಿದ್ದ ಜನರಿಗೆ, ರೊಟ್ಟಿ ಎಸೆಯುವ ರೀತಿ ಬಿಂದಿಗೆ ಎಸೆಯಲಾಯಿತು. ಕೆಲವರು ಮುಗಿಬಿದ್ದು ಹೋರಾಡಿ ಕೈಗೆ ಸಿಕ್ಕಷ್ಟು ಬಿಂದಿಗೆ ಹೊತ್ತೊಯ್ಯುತ್ತಿದ್ದುದು ಕಂಡುಬಂತು.
ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಟಿ ಮಂಜು ಅವರ ಹೆಸರು ಘೋಷಿಸಲಾಗಿದೆ. ಮಂಜು ಅವರು ಮನ್‌ಮುಲ್ ನಿರ್ದೇಶಕರೂ ಆಗಿದ್ದಾರೆ. ಹೀಗಾಗಿ ತಾಲೂಕಿನ ಹಾಲಿನ ಡೈರಿಗಳ ಮೂಲಕ ಹೆಚ್ಚಿನ ಮಹಿಳೆಯರನ್ನು ಕರೆಯಿಸಿದ್ದರು ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ಜೆಡಿಎಸ್ ನಾಯಕರು ಮತ್ತು ಮುಖಂಡರ ವಿರುದ್ಧ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | JDS Pancharatna | ಪಂಚರತ್ನ ಯೋಜನೆ ಜಾರಿ ಮಾಡದಿದ್ದರೆ ಜೆಡಿಎಸ್ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ