ಹಾಸನ: ತಮ್ಮ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತ್ರವಲ್ಲ, ಸ್ವತಃ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರೇ ಸ್ಪರ್ಧೆ ಮಾಡಿದರೂ ಹೆದರುವುದಿಲ್ಲ ಎಂದು ಹೇಳಿದ್ದ ಕೆ.ಆರ್. ಪೇಟೆ (K.R. Pete) ಶಾಸಕ ಹಾಗೂ ಸಚಿವ ಕೆ.ಸಿ. ನಾರಾಯಣಗೌಡ ಅವರಿಗೆ ಎಚ್.ಡಿ. ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದ್ದಾರೆ.
ಹಾಸನ ಜಿಲ್ಲೆಯ ನಗರ್ತಿ ಗ್ರಾಮದಲ್ಲಿ ಆಯೋಜಿಸಿದ್ದ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಡಿರುವ ಕುಮಾರಸ್ವಾಮಿ, ಅವನ್ಯಾರೊ ಕೆ.ಆರ್. ಪೇಟೆಯಲ್ಲಿ ರೇವಣ್ಣ ಅಲ್ಲದಿದ್ದರೆ ಅವರಪ್ಪ ಬರಲಿ ಎಂದನಂತೆ. ಅವನನ್ನು ಸೋಲಿಸೋಕೆ ಕುಮಾರಸ್ವಾಮಿ, ದೇವೇಗೌಡರು ಬೇಡ. ಈಗ ಅಲ್ಲಿ ನಿಲ್ಲಿಸಿರುವ ಅಭ್ಯರ್ಥಿಯನ್ನು ಗೆಲ್ಲಿಸಲಿ ನೋಡೋಣ. ಜೆಡಿಎಸ್ ಅಭ್ಯರ್ಥಿಯೇ 25-30 ಸಾವಿರ ಮತಗಳಿಂದ ಗೆದ್ದು ಬರುತ್ತಾನೆ. ಹಿಂದೆ ಯಾರಿಂದ ಬಂದೆವು, ಯಾವ ರೀತಿ ಬಂದೆವು ಎನ್ನುವುದನ್ನು ಮರೆತಿದ್ದಾರೆ. ಹಣದ ಮದದಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದರು.
ಅರಸೀಕೆರೆಯಲ್ಲಿ ಒಬ್ಬ ಮಹಾನುಭಾವ ದಿನವೂ ಟೋಲಿ ಹಾಕಿಕೊಂಡೇ ಬರುತ್ತಿದ್ದಾನೆ. ಇವತ್ತು ಇತಿಶ್ರೀ ಹಾಡಬೇಕಾಗಿದೆ. ದೇವೇಗೌಡರ ಮುಖ ನೋಡಿ ನನಗೆ ಮತ ಹಾಕಿದರು ಎಂದು ಅವರೇ ಹೇಳಿಕೊಂಡಿರುವುದನ್ನೂ ನೋಡಿದ್ದೇನೆ. 2004ರಲ್ಲಿ ಸೋತಾಗ ಅವರನ್ನು ರಾಜಕೀಯವಾಗಿ ಬೆಳೆಸಲು ರೇವಣ್ಣ ಯಾವ ರೀತಿ ಸಹಾಯ ಮಾಡಿದರು ಎನ್ನುವುದು ಗೊತ್ತಿದೆ. ಅಲ್ಲಿನ ಸಭೆಯಲ್ಲಿ ಈ ಕುರಿತು ಮಾತನಾಡುತ್ತೇನೆ ಎಂದರು.
ನಮ್ಮ ಸೂರಜ್ ರೇವಣ್ಣ ಸ್ವಲ್ಪ ಶಾಸ್ತ್ರ ಹೇಳ್ತಾನೆ. ಅರಕಲಗೂಡಿನಲ್ಲಿ ಜೆಡಿಎಸ್ ಗೆದ್ದಾಗೆಲ್ಲ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಾನೆ. ನನಗೆ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದೆ. ಇದು ನನ್ನ ವೈಯಕ್ತಿಕ ಸ್ವಾರ್ಥಕ್ಕೆ ಅಲ್ಲ. ದೇವೇಗೌಡರ ಮನಸ್ಸು ಹಾಸನ ಜಿಲ್ಲೆಯ ಮೇಲೆಯೇ ಇದೆ. ಇಲ್ಲಿಯೂ ಸ್ವಲ್ಪ ಗೊಂದಲಗಳಿವೆ. ಆದರೆ ಹಳೆಯ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬೇಡಿ. ಏಳಕ್ಕೆ ಏಳೂ ಸ್ಥಾನವನ್ನು ಸರ್ಕಾರ ರಚನೆಗೆ ನೀಡಬೇಕು. ಸರ್ಕಾರ ರಚನೆಯಾದ ನೆಮ್ಮದಿಯಿಂದ ಇನ್ನೂ ಏಳೆಂಟು ವರ್ಷ ಅವರು ಬದುಕಬೇಕು.
ಅಮಿತ್ ಶಾ ಮಾತಿನ ಕುರಿತು ಮಾತನಾಡಿದ ಕುಮಾರಸ್ವಾಮಿ, ನಮಗೆ ಟಿಪ್ಪುವೂ ಬೇಕು, ರಾಣಿ ಅಬ್ಬಕ್ಕನೂ ಬೇಕು. ಮಹಾರಾಷ್ಟ್ರದಿಂದ ಬಂದು ಶೃಂಗೇರಿ ಮಠವನ್ನು ಒಡೆದಾಗ ಉಳಿಸಿದ್ದು ಟಿಪ್ಪು. ಕುವೆಂಪು ಅವರು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಬೇಕೊ ಅಥವಾ ಬಿಜೆಪಿಯವರ ಸರ್ವಜನಾಂಗದ ಅಶಾಂತಿಯ ತೋಟ ಬೇಕೊ ಎಂದು ಹೇಳಬೇಕು. ನಾವೆಲ್ಲರೂ ಅಣ್ಣತಮ್ಮನಂತೆ ಬದುಕಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.