ಮಂಡ್ಯ: ಕಾವೇರಿ ನದಿಯ ಮಡಿಲಾಗಿರುವ ಮಂಡ್ಯದಲ್ಲಿ ಕರ್ನಾಟಕ ಬಂದ್ (Karnataka bandh) ಯಶಸ್ವಿಯಾಗಿ ನಡೆಯುತ್ತಿದೆ. ಈ ನಡುವೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯನ್ನು (Bangalore-Mysore Express way) ಬಂದ್ ಮಾಡುವ ನಿಟ್ಟಿನಲ್ಲಿ ಕನ್ನಡ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ಹೋರಾಟಗಾರರು ಬಂದ್ ನಡೆಸಲು ಸಕಲ ಸಿದ್ಧತೆ ನಡೆಸುತ್ತಿದ್ದರೆ, ಪೊಲೀಸರು ಅವರನ್ನು ದಶಪಥ ಪ್ರವೇಶಿಸದಂತೆ ತಡೆಯಲು ಸಜ್ಜಾಗಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ತಡೆಯಲು ರೈತರು ಗೌರಿಪುರದ ಬಳಿ ಸಿದ್ಧತೆ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಟಪಟ್ಟಣ ತಾಲೂಕಿನ ಗೌರಿಪುರದ ಬಳಿಕ ಮಧ್ಯಾಹ್ನದ ಊಟಕ್ಕೆ ಸಿದ್ಧತೆ ನಡೆಯುತ್ತಿದೆ. ಅನ್ನಸಾಂಬಾರ್ ಮಾಡಲಾಗುತ್ತಿದ್ದು, ಇದು ಸಿದ್ಧವಾಗುತ್ತಿದ್ದಂತೆಯೇ ಹೆದ್ದಾರಿಗೆ ತಂದು ರಸ್ತೆ ತಡೆದು ಅಲ್ಲೇ ಊಟ ಮಾಡುವ ಪ್ಲ್ಯಾನ್ ಇದಾಗಿದೆ.
ಆದರೆ, ರೈತರ ಪ್ರತಿಭಟನೆ ಮತ್ತು ಹೆದ್ದಾರಿ ಪ್ರವೇಶವನ್ನು ವಿಫಲಗೊಳಿಸಲು ಪೊಲೀಸರ ನಿಯೋಜನೆಯಾಗಿದೆ. ಅಪಾರ ಸಂಖ್ಯೆಯಲ್ಲಿರುವ ಪೊಲೀಸರು ಮತ್ತು ಸ್ಥಳದಲ್ಲಿ ನಿಂತಿರುವ ಐದಾರು ಸರ್ಕಾರಿ ಬಸ್ಸುಗಳು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿವೆ.
ಗೆಜ್ಜಲಗೆರೆ ಗ್ರಾಮದ ರೈಲ್ವೆ ಟ್ರ್ಯಾಕ್ ಬಳಿ ಬಿಗಿ ಭದ್ರತೆ
ಈ ನಡುವೆ ಬೆಂಗಳೂರು ಮೈಸೂರು ಹೆದ್ದಾರಿಗೆ ಸಮೀಪವೇ ಇರುವ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈಲು ತಡೆಯಲು ರೈತರು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ತಡೆಯುವುದಕ್ಕಾಗಿಯೂ ರೈಲ್ವೇ ಪೊಲೀಸರ ದೊಡ್ಡ ಟೀಮ್ ರೆಡಿಯಾಗಿದೆ.
ಸ್ಥಳಕ್ಕೆ ರೈಲ್ವೆ ಐಜಿಪಿ ಶರಣಪ್ಪ ಬೇಟಿ ಪರಿಶೀಲನೆ ನಡೆಸಿದ್ದು, ಜಿಲ್ಲಾಡಳಿತ ರೈತರ ಹೋರಾಟ ವಿಫಲಗೊಳಿಸಲು 144 ಸೆಕ್ಷನ್ ಜಾರಿಗೊಳಿಸಿದೆ.
ಮಂಡ್ಯದಲ್ಲಿ ಪ್ರತಿಭಟನೆ ಹೇಗಿದೆ?
ಇನ್ನು ಮಂಡ್ಯ ಜಿಲ್ಲೆಯಾದ್ಯಂತ ರೈತರು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮಂಡ್ಯದಲ್ಲಿ ರೈತರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ, ಉರುಳು ಸೇವೆ ನಡೆಸುತ್ತಿದ್ದಾರೆ. ಇದರ ಜತೆಗೆ ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಆಗಿವೆ.
ಮಂಡ್ಯದ ಸಂಜಯ ವೃತ್ತದಲ್ಲಿ ಹಸಿರು ಟವಲ್ ಬೀಸಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಶಿವರಾಮು ಎಂಬುವರಿಂದ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲಾದ್ಯಂತ ಪೊಲೀಸರ ಕಟ್ಟೆಚ್ಚರ ವಹಿಸಿದ್ದು 1ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆಯಾಗಿದೆ. 12 ಡಿಎಆರ್, 8 ಕೆಎಸ್‌ಆರ್‌ಪಿ ಸೇರಿ 1ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಯಾಗಿದೆ. ಎಸ್‌ಪಿ ಎನ.ಯತೀಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆದ್ದಾರಿ, ರೈಲು ಸಂಚಾರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.