ಮಂಡ್ಯ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 35 ಲಕ್ಷ ರೂ ಮೌಲ್ಯದ ಕುಕ್ಕರ್‌ಗಳನ್ನು ನಾಗಮಂಗಲ ತಾಲೂಕಿನ ಕದಬಳ್ಳಿ ಚೆಕ್‌ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ.
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಕಂಟೈನರ್ ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ತಪಾಸಣೆ ಮಾಡಿದಾಗ ಕುಕ್ಕರ್‌ಗಳು ಪತ್ತೆಯಾಗಿವೆ. ಶೃಂಗೇರಿ ಶಾಸಕ ಜಿ.ಡಿ.ರಾಜೇಗೌಡ ಅವರಿಗೆ ಸೇರಿದ ಕುಕ್ಕರ್‌ಗಳು ಇವಾಗಿದ್ದು ಕ್ಷೇತ್ರದ ಮತದಾರರಿಗೆ ಹಂಚಲು ಬಾಳೆಹೊನ್ನೂರಿನಿಂದ ಖರೀದಿಸಿ ಕೊಂಡೊಯ್ಯಲಾಗುತ್ತಿತ್ತು. ಬಾಳೆಹೊನ್ನೂರಿನ ಕೃಷ್ಣ ಹಾರ್ಡ್‌ವೇರ್‌ನಿಂದ ಇವನ್ನು ಖರೀದಿಸಲಾಗಿತ್ತು. ಕುಕ್ಕರ್ ಜಪ್ತಿ ಮಾಡಿ ಶಾಸಕ ಹಾಗೂ ಅಂಗಡಿ ಮಾಲೀಕನ ವಿರುದ್ಧ ಬಿಂಡಿಗನವಿಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಕ್ಕರೆ ಕಾರ್ಖಾನೆ ಗೋಡೌನ್‌ನಲ್ಲಿ ಗಿಫ್ಟ್ ಪತ್ತೆ
ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಯರಗಲ್ ಮದರಿ ಗ್ರಾಮದ ಹತ್ತಿರ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆಯ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾದ ಟೀಶರ್ಟ್ ಹಾಗೂ ವಿವಿಧ ವಸ್ತುಗಳ ಸಂಗ್ರಹ ಕಂಡುಬಂದಿದ್ದು, ಮತದಾರರಿಗೆ ಹಂಚಲು ಸಂಗ್ರಹಿಸಲಾಗಿದೆ ಎಂದು ಶಂಕಿಸಲಾಗಿದೆ.
ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ದಾಳಿ ನಡೆಸಿ ಯಾವುದೇ ಪರವಾನಿಗೆ ಪಡೆಯದೆ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿ ಇಡಲಾಗಿರುವ ಟೀಶರ್ಟ್ ಗಳು ಹಾಗೂ ವಾಲ್ ಕ್ಲಾಕ್ ಪತ್ತೆ ಹಚ್ಚಿದರು. ಗೋಡೆ ಗಡಿಯಾರಗಳಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಆರ್ ಪಾಟೀಲ್ ಭಾವಚಿತ್ರಗಳು ಕಂಡುಬಂದಿವೆ. ಎಸ್‌ಆರ್‌ಪಿ ಗುರುತಿರುವ ಟಿ-ಶರ್ಟ್‌ಗಳು ಕೂಡ ಪತ್ತೆಯಾಗಿವೆ.
ಸ್ಥಳಕ್ಕೆ ವಿಜಯಪುರ ಡಿಸಿ ವಿಜಯಮಹಾಂತೇಶ ದಾನಮ್ಮನವರ್ ಹಾಗೂ ಎಸ್ಪಿ ಆನಂದಕುಮಾರ್ ಭೇಟಿ ನೀಡಿದ್ದು, ಇಡೀ ರಾತ್ರಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದಾರೆ. ತಾಳಿಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿಯಿಂದಲೂ ಸಿಬ್ಬಂದಿಗಳನ್ನು ಕರೆಸಿಕೊಂಡು ಗಿಫ್ಟ್‌ಗಳ ಎಣಿಕೆ ಮಾಡಲಾಗುತ್ತಿದೆ.