ಬೆಂಗಳೂರು : ಮಂಡ್ಯದ ಕೃಷ್ಣರಾಜ ಸಾಗರ ಅಣೆಕಟ್ಟೆ (KRS Dam) ಸುತ್ತಮುತ್ತ 20 ಕಿ.ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ (Mining restricted) ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ (High court Restriction) ವಿಧಿಸಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಆದೇಶ ನೀಡಿದೆ. ಕಳೆದ ಕೆಲವು ವರ್ಷಗಳಿಂದ ಮಂಡ್ಯ ಸಮೀಪದ ಬೇಬಿ ಬೆಟ್ಟದಲ್ಲಿ (Baby betta Near Mandya) ನಡೆಯುತ್ತಿರುವ ಗಣಿಗಾರಿಕೆ ಅದರಿಂದ ಕೆ.ಆರ್.ಎಸ್ ಅಣೆಕಟ್ಟಿಗೆ ಆಗಬಹುದಾದ ಹಾನಿಗೆ ಸಂಬಂಧಿಸಿ ಭಾರಿ ವಾದ ವಿವಾದಗಳು ನಡೆದಿದ್ದವು. ಇದೀಗ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದು ಇದರ ಪರವಾಗಿ ಪ್ರಬಲ ಹೋರಾಟ (KRS Mining Issue) ನಡೆಸಿದ ಸಂಸದೆ ಸುಮಲತಾ (MP Sumalata) ಅವರಿಗೆ ಭಾರಿ ಖುಷಿ ನೀಡಿದೆ.
ಬೇಬಿ ಬೆಟ್ಟ ಗಣಿಗಾರಿಕೆಯ ಪ್ರಶ್ನೆ ಎದ್ದಾಗ ಸಂಸದೆ ಸುಮಲತಾ ಅವರು ಮುಂಚೂಣಿಯಲ್ಲಿ ನಿಂತು ಹೋರಾಡಿದ್ದರು. ಗಣಿಗಾರಿಕೆಯಿಂದ ಕೆ.ಆರ್.ಎಸ್ನಿಂದ ಈಗಾಗಲೇ ಬಿರುಕು ಬಿಟ್ಟಿದೆ. ಇನ್ನಷ್ಟು ಗಣಿಗಾರಿಕೆ ನಡೆಸಿದರೆ ಇದರಿಂದ ಅಪಾಯ ಉಂಟಾಗಲಿದೆ ಎಂದು ಅವರು ಹೇಳಿದ್ದರು. ಇದರ ಬಗ್ಗೆ ಪರ-ವಿರೋಧ ಹೋರಾಟಗಳು ತಾರಕಕ್ಕೇರಿದಾಗ ಮಂಡ್ಯ ಜಿಲ್ಲಾಧಿಕಾರಿಗಳು ಹೊಸ ಪರವಾನಗಿ ನೀಡಲು ಷರತ್ತುಗಳನ್ನು ವಿಧಿಸಿದ್ದರು.
ಭೂಪರಿವರ್ತನೆಗೂ ಮುನ್ನ ಪರೀಕ್ಷಾರ್ಥ ಸ್ಫೋಟ ನಡೆಸಿ ಹಾನಿ ಸಾಧ್ಯತೆಯನ್ನು ಪರಿಶೀಲಿಸಿದ ಬಳಿಕವೇ ಗಣಿಗಾರಿಕೆಗೆ ಅನುಮತಿ ನೀಡುವ ಷರತ್ತನ್ನು ಜಿಲ್ಲಾಧಿಕಾರಿಗಳು ವಿಧಿಸಿದ್ದರು. ಜಿಲ್ಲಾಧಿಕಾರಿ ಷರತ್ತು ವಿಧಿಸಿರುವುದನ್ನ ಪ್ರಶ್ನಿಸಿ ಗಣಿ ಮಾಲೀಕರು ಹೈಕೋರ್ಟ್ಗೆ ದಾವೆ ಸಲ್ಲಿಸಿದ್ದರು.
ಅದರ ವಿಚಾರಣಗೆ ವಿಭಾಗೀಯ ಪೀಠದಲ್ಲಿ ನಡೆದು ಈಗ ಕೆ.ಆರ್ಎಸ್ನ 20 ಕಿಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ʻʻ ಕೆಆರ್ಎಸ್ ಜಲಾಶಯಕ್ಕೆ ಹಾನಿ ಮಾಡುವುದು ತಡೆಗಟ್ಟಬೇಕಿದೆ. ಇಲ್ಲಿ ಕೆಆರ್ಎಸ್ ಸುರಕ್ಷತೆ ಮುಖ್ಯವಾಗಿದೆʼʼ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಮತ್ತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಸರ್ಕಾರದ ನಿರ್ದೇಶನದಂತೆ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಲಾಗಿದೆ. ಹೀಗಾಗಿ, ಅಲ್ಲಿಯವರೆಗೆ ಗಣಿಗಾರಿಕೆಗೆ ಅನುಮತಿಸುವುದಿಲ್ಲʼʼ ಎಮದು ಹೇಳಿತು.
ಏನಾದರೂ ತೊಂದರೆ ಆದರೆ ಕೆಆರ್ಎಸ್ ಜಲಾಶಯಕ್ಕೆ ಭಾರಿ ಹಾನಿಯಾಗಗಬಹುದು ಎಂದು ಸಿಜೆ ಅಭಿಪ್ರಾಯಪಟ್ಟರೆ, ಕೆಆರ್ಎಸ್ ಅನ್ನು ಅಲ್ಲಿನ ಜನರ ರಕ್ತ ಮತ್ತು ಬೆವರಿನಿಂದ ಕಟ್ಟಲಾಗಿದೆ. ಇದು ನಮ್ಮ ರಾಜ್ಯದ ಮೂರನೇ ಅತಿದೊಡ್ಡ ಜಲಾಶಯ, ಏನಾದರೂ ಆದರೆ ಯಾರು ಜವಾಬ್ದಾರಿ? ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಆತಂಕವ್ಯಕ್ತಪಡಿಸಿದರು.
ʻʻಕೆಆರ್ಎಸ್ ಜಲಾಶಯಕ್ಕೆ ಹಾನಿ ಮಾಡುವುದು ತಡೆಗಟ್ಟಬೇಕಿದೆ. ಇಲ್ಲಿ ಅಣೆಕಟ್ಟಿನ ಸುರಕ್ಷತೆ ಮುಖ್ಯವಾಗಿದೆʼʼ ಎಂದು ಕೋರ್ಟ್ ಹೇಳಿತು.
ನ್ಯಾಯಪೀಠ ಹೇಳಿದ್ದೇನು?
ಕೆಆರ್ಎಸ್ ಡ್ಯಾಂ ನಿರ್ಮಾಣಕ್ಕೆ ಜನರು ರಕ್ತ, ಬೆವರು ಹರಿಸಿದ್ದಾರೆ. ತೀ.ತಾ. ಶರ್ಮ ಅವರು ಸರ್.ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಬರೆದ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಕೆಆರ್ಎಸ್ಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ಮೂರು ರಾಜ್ಯಗಳು ಕಾವೇರಿ ನೀರಿಗಾಗಿ ಹೋರಾಡುತ್ತಿವೆ. ಆದರೆ ಕೆಆರ್ಎಸ್ ಅಣೆಕಟ್ಟೆ ಸಂರಕ್ಷಣೆಗೆ ಪ್ರಯತ್ನಿಸುತ್ತಿಲ್ಲ. ಅಣೆಕಟ್ಟೆಗೆ ತೊಂದರೆಯಾದರೆ ಆಗುವ ಅನಾಹುತಗಳ ಅರಿವಿದೆಯೇ? ಅಣೆಕಟ್ಟೆಗೆ ತೊಂದರೆಯಾದರೆ ಇಡೀ ರಾಜ್ಯಕ್ಕೇ ಗಂಭೀರ ಆಪತ್ತು ಬರಲಿದೆ. ಹೀಗಾಗಿ ಕೆಆರ್ಎಸ್ ಅಣೆಕಟ್ಟೆ ಬಳಿ ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಸಂಸದೆ ಸುಮಲತಾ ಸ್ವಾಗತ
ಕೆ.ಆರ್.ಎಸ್ ಸುತ್ತಮುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿ ಹೊರಡಿಸಿರುವ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದ ಆದೇಶ ಅತ್ಯಂತ ಸೂಕ್ತವಾಗಿದೆ. ಇಂಥದ್ದೊಂದು ಮಹತ್ವದ ಆದೇಶವನ್ನು ನೀಡಿರುವ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಮಾನ್ಯ ಶ್ರೀ ಪಿ. ಬಿ. ವರಾಳೆ ಹಾಗೂ ಶ್ರೀ ಕೃಷ್ಣ.ಎಸ್. ದೀಕ್ಷಿತ್ ಅವರಿಗೆ ಧನ್ಯವಾದಗಳನ್ನು… pic.twitter.com/XBA9OdffqS
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) January 8, 2024
ಕೆ.ಆರ್.ಎಸ್ ಸುತ್ತಮುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿರ್ಬಂಧಿಸಿದ ಹೈಕೋರ್ಟ್ ಆದೇಶವನ್ನು ಸಂಸದೆ ಸುಮಲತಾ ಅವರು ಸ್ವಾಗತಿಸಿದ್ದಾರೆ. ಹೈಕೋರ್ಟ್ ಆದೇಶವು ಅತ್ಯಂತ ಸೂಕ್ತವಾಗಿದೆ. ಇಂಥದ್ದೊಂದು ಮಹತ್ವದ ಆದೇಶವನ್ನು ನೀಡಿರುವ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಮಾನ್ಯ ಶ್ರೀ ಪಿ. ಬಿ. ವರಾಳೆ ಹಾಗೂ ಶ್ರೀ ಕೃಷ್ಣ.ಎಸ್. ದೀಕ್ಷಿತ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದು ಸುಮಲತಾ ಹೇಳಿದ್ದಾರೆ. ಕೆ.ಆರ್.ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು ಎನ್ನುವ ನನ್ನ ಬಹುದಿನದ ಹೋರಾಟಕ್ಕೆ ಈ ಆದೇಶ ಮತ್ತಷ್ಟು ಬಲ ತಂದಿದೆ. ನಾವೆಲ್ಲರೂ ಕೆ.ಆರ್.ಎಸ್ ಅನ್ನು ಉಳಿಸಿಕೊಳ್ಳಬೇಕಿದೆ ಎಂದಿದ್ದಾರೆ ಸಂಸದೆ ಸುಮಲತಾ.