ಬೆಂಗಳೂರು: ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಎಸ್. ಎಂ. ಕೃಷ್ಣ ಇದೀಗ ಬಿಜೆಪಿಯಲ್ಲಿದ್ದಾರೆ. ಆದರೆ ಅವರ ಮಾತೃ ಪಕ್ಷ ಕಾಂಗ್ರೆಸ್‌ನಲ್ಲಿ ಇನ್ನೂ ಸಂಪರ್ಕ ಹೊಂದಿರುವ ಎಸ್‌ಎಂಕೆ, ತಮ್ಮ ಸಂಬಂಧಿಗೆ ಮದ್ದೂರು (Maddur) ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮದ್ದೂರಿನಲ್ಲಿ ಹಾಲಿ ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಇದ್ದಾರೆ. ಕಾಂಗ್ರೆಸ್‌ನಿಂದ ಈ ಬಾರಿ ಸ್ಪರ್ಧೆ ಮಾಡಲು ಕ್ಯಾಸಿನೊ ಮಾಲೀಕ ಹಾಗೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಕದಲೂರು ಉದಯ್ ಆಕಾಂಕ್ಷಿ.
ಹಾಗೆಯೇ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಗುರುಚರಣ್ ಸಹ ಪ್ರಬಲ ಆಕಾಂಕ್ಷಿ. ಎಸ್.ಎಂ. ಕೃಷ್ಣ ಸಹೋದರ ಎಸ್.ಎಂ. ಶಂಕರ್ ಅವರ ಪುತ್ರ ಗುರುಚರಣ್‌ಗೆ ಟಿಕೆಟ್ ನೀಡಲು ಡಿ.ಕೆ. ಶಿವಕುಮಾರ್ ಒಲವು ಹೊಂದಿದ್ದರು.
ಇದನ್ನೂ ಓದಿ: ಎಲೆಕ್ಷನ್ ಹವಾ | ಮದ್ದೂರು | ಮೂರೂ ಪಕ್ಷವನ್ನು ಕಂಡ ತಮ್ಮಣ್ಣ ಸೋಲಿಗೆ ಮದ್ದು ಅರೆಯಲು ಸಾಧ್ಯವೇ?
ಆದರೆ ಉದಯ್ ಪ್ರಬಲ ಪೈಪೋಟಿ ನೀಡುತ್ತಿದ್ದರಿಂದ ಇಬ್ಬರನ್ನೂ ಕರೆಸಿ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ಗುರುಚರಣ್‌ಗೆ ಟಿಕೆಟ್ ನೀಡಿದರೆ ಅವರ ಪರವಾಗಿ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಉದಯ್ ಅವರಿಗೆ ಸೂಚಿಸಿದ್ದಾರೆ. ಇಷ್ಟರ ನಂತರವೂ ಕೊನೆಯ ಕ್ಷಣದಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.