ಬೆಂಗಳೂರು: ದೇಶದಲ್ಲಿ ಪ್ರತಿಯೊಬ್ಬರೂ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಪ್ರೀತಿಸುತ್ತಾರೆ. ಕಾಂಗ್ರೆಸ್- ಜೆಡಿಎಸ್ ಕುಟುಂಬ ಪಕ್ಷಗಳಾದರೆ, ಬಿಜೆಪಿ ಜನಪರ ಪಕ್ಷ ಎಂದು ರಾಜ್ಯದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ʼಜಗನ್ನಾಥ ಭವನʼದಲ್ಲಿ ಕೆಪಿಸಿಸಿ ಮಾಜಿ ಸದಸ್ಯ ಹಾಗೂ ಮಂಡ್ಯ ಸಂಸದೆ ಸುಮಲತಾ ಆಪ್ತ ಎಸ್. ಸಚ್ಚಿದಾನಂದ ಮತ್ತು ಇತರ ಕಾಂಗ್ರೆಸ್ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಡ್ಯವು ಹಿಂದೆ ಅಭಿವೃದ್ಧಿಗೆ ಹೆಸರುವಾಸಿಯಾಗಿತ್ತು. ಆದರೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಆ ಜಿಲ್ಲೆ ಕುಸಿತ ಕಂಡಿತು. ಆ ಜಿಲ್ಲೆಯಲ್ಲಿ ಜನರಿಂದ ಅವಕಾಶ ಪಡೆದ ಪ್ರತಿನಿಧಿಗಳು ಸಮರ್ಪಕವಾಗಿ ಕೆಲಸ ಮಾಡಲಿಲ್ಲ. ಜನಪರ ಕೆಲಸ ಮಾಡುವವರು ನಾಯಕ. ಜನದ್ರೋಹಿಗಳಿಗೆ ಪಾಠ ಕೊಡುವ ಕೆಲಸ ಆಗಬೇಕಿದೆ. ಗುಲಾಮಗಿರಿ ಸಹಿಸದೆ ಹಲವು ನಾಯಕರು ಈಗಾಗಲೇ ಜೆಡಿಎಸ್ ತೊರೆದಿದ್ದಾರೆ. ಮಂಡ್ಯದ ಸಮೃದ್ಧಿಯನ್ನು ಹೆಚ್ಚಿಸಲು ನಿಜ ಸ್ವಾತಂತ್ರ್ಯ ರೂಪಿಸಲು ಬಿಜೆಪಿ ಸೂಕ್ತವಾದ ಪಕ್ಷ ಎಂದು ತಿಳಿಸಿದರು.
ಮಂಡ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು. ನಿಸ್ವಾರ್ಥವಾಗಿ ನಾವು ಕೆಲಸ ಮಾಡುತ್ತೇವೆ. ವಿಶ್ವಕ್ಕೇ ಭರವಸೆಯನ್ನು ಕರ್ನಾಟಕ ನೀಡುತ್ತಿದೆ. ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಭೆ ಇರುವ ನಾಡು ಕರ್ನಾಟಕ. ಸ್ವಾಭಿಮಾನದಿಂದ ಕೆಲಸ ಮಾಡಲು ಅವಕಾಶವಿರುವ ಪಕ್ಷ ಬಿಜೆಪಿ. ತುಷ್ಟೀಕರಣದ ರಾಜಕೀಯ ಮಾಡುವ ಎರಡೂ ಪಕ್ಷಗಳಿಗೆ ಪಾಠ ಕಲಿಸಿ; ಬಿಜೆಪಿಯನ್ನು ಬೆಂಬಲಿಸಿ ಗೆಲ್ಲಿಸಲು ಅವರು ಮನವಿ ಮಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಮಾತನಾಡಿ, ಸಚ್ಚಿದಾನಂದ ಅವರ ಪಕ್ಷ ಸೇರ್ಪಡೆಯಿಂದ ಮಂಡ್ಯ ಜಿಲ್ಲೆಯಲ್ಲಿ ಹೊಸ ಶಕ್ತಿ ಮತ್ತು ನವೀನ ಸಂಚಲನ ಉಂಟಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.
ಯುವಸಬಲೀಕರಣ ಮತ್ತು ಕ್ರೀಡೆ ಖಾತೆ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ಕಾಂಗ್ರೆಸ್ಸಿನ ಹಲವಾರು ಮುಖಂಡರು ಪಕ್ಷ ಸೇರಿದ್ದರಿಂದ ಬಿಜೆಪಿ ಇನ್ನಷ್ಟು ಬಲಗೊಂಡಿದೆ. ಕನಿಷ್ಠ 7 ಶಾಸಕರ ಸ್ಥಾನವನ್ನು ನಾವು ಮಂಡ್ಯದಲ್ಲಿ ಗೆಲ್ಲುವುದು ಖಚಿತ. ಜೆಡಿಎಸ್- ಕಾಂಗ್ರೆಸ್ ಪಕ್ಷಕ್ಕೆ ನಾವು ಭಯಪಡಬೇಕಿಲ್ಲ. ಗೂಂಡಾಗಳಿಗೆ ತಕ್ಕ ಪಾಠವನ್ನು ನಮ್ಮ ಪಕ್ಷ ಕಲಿಸಿದೆ ಎಂದರು.
ಎಸ್ ಸಚ್ಚಿದಾನಂದ ಜತೆಗೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮತ್ತು 2013 ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್. ಲಿಂಗರಾಜು, ಮುಖಂಡ ಬಾಬು ಹನುಮಾನ್, ಮಲ್ಲಿಕಾರ್ಜುನ್ (ಫೈಟರ್ ರವಿ), ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ರಾಮಲಿಂಗಯ್ಯ, ಮಮತಾ ಧನಂಜಯ್, ನಾಗರತ್ನ ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ರಾಮೇಗೌಡ, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ನಂದಮಣಿ ಚಂದ್ರಶೇಖರ್, ಯೋಗಾನಂದ ಪಟೇಲ್, ಲಕ್ಷ್ಮಮ್ಮ, ಇಂಡುವಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಸ್ವಾಮಿ, ಬೇವಿನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಹೇಶ್, ಸೂನಗಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಚಂದ್ರ ಕೆ, ಇಂಡುವಾಳ ಗ್ರಾ.ಪಂ ಮಾಜಿ ಅಧ್ಯಕ್ಷ ಸ್ವಾಮಿ ಬಿಜೆಪಿ ಸೇರಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಮಂಡ್ಯ ಜಿಲ್ಲಾ ಪ್ರಭಾರಿ ಜಗದೀಶ್ ಹಿರೇಮನಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಫೈಟರ್ ರವಿ ಸೇರ್ಪಡೆ ಚರ್ಚೆ
ರೌಡಿ ಶೀಟರ್ ಆಗಿದ್ದ ಫೈಟರ್ ರವಿ ಸೇರ್ಪಡೆ ಕುರಿತು ವಿವಿಧೆಡೆ ಚರ್ಚೆಗಳು ನಡೆಯುತ್ತಿದ್ದು, ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯು ರೌಡಿಗಳಿಗೆ ಮಣೆ ಹಾಕಿತೇ ಎಂದು ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಅಶ್ವತ್ಥನಾರಾಯಣ, ಫೈಟರ್ ರವಿ ಸೇರ್ಪಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾನೂನು ಎಲ್ಲರಿಗೆ ಅನ್ವಯ. ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದರೂ ಕ್ರಮ ಆಗುತ್ತದೆ. ಕಾನೂನು ಮೀರಿ ಯಾರೂ ನಡೆಯಲು ಸಾಧ್ಯವಿಲ್ಲ. ಆದರೆ ಎಲ್ಲರಿಗೂ ನಾವು ನಾಮಕರಣ ಮಾಡೋದು ತಪ್ಪು. ಸಮಾಜದಲ್ಲಿ ಎಲ್ಲರಿಗೂ ಬಾಳಿ ಬದುಕಲು ಅವಕಾಶ ಇದೆ. ಉತ್ತಮವಾಗಿ ಬದುಕಲು ಅವಕಾಶ ಕೊಡದೆ ನಿಂದನೆ ಮಾಡಬಾರದು. ಕಾನೂನಿನಲ್ಲಿ ಶಿಕ್ಷೆ ಆಗಿದ್ದರೆ ಕೇಳಬೇಕು. ಕಾನೂನಿನ ಅಡಿ ತಪ್ಪು ಮಾಡಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶವಿಲ್ಲ. ತಪ್ಪು-ಒಪ್ಪು ಇಲ್ಲದೆ ಆಪಾದನೆ ಇಲ್ಲದೆ ಬದುಕಲು ಅವಕಾಶ ಮಾಡಬೇಕು. ಉತ್ತಮವಾಗಿ ಬದುಕಲು ಕಾನೂನಿನಲ್ಲೆ ಇದಕ್ಕೆ ಎಲ್ಲರಿಗೂ ಅವಕಾಶ ಇದೆ. ತಪ್ಪು ಮಾಡಿದ್ದರೆ, ಶಿಕ್ಷೆ ಆಗಿದ್ದರೆ, ಯಾರೂ ಕೂಡಾ ಅವರ ಪರವಾಗಿ ಇರುವುದಿಲ್ಲ. ಉತ್ತಮವಾಗಿ ಬದುಕುತ್ತೇನೆ ಎಂದಾಗ ನಾವು ನಿಂದನೆ ಮಾಡಬಾರದು ಎಂದಿದ್ದಾರೆ.
ಇದನ್ನೂ ಓದಿ | Udyami Vokkaliga | ಒಕ್ಕಲಿಗರು ಕೃಷಿಯ ಜತೆಗೆ ಉದ್ಯಮಿಗಳೂ ಆಗಬೇಕು: ಸಚಿವ ಸಿ.ಎನ್.ಅಶ್ವತ್ಥನಾರಾಯಣ