Site icon Vistara News

Modi in Karnataka: ಕಾಂಗ್ರೆಸಿಗರು ನನಗೆ ಸಮಾಧಿ ತೋಡುತ್ತಿದ್ದಾರೆ; ನಾನು ಜನರಿಗೆ ಹೆದ್ದಾರಿ ಮಾಡುತ್ತಿದ್ದೇನೆ: ಪ್ರಧಾನಿ ನರೇಂದ್ರ ಮೋದಿ

narendra modi in mandya modi-in-karnataka-modi says congress trying to kill him

#image_title

ಮಂಡ್ಯ: ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾಂಗ್ರೆಸಿಗರು ಇದೀಗ ನನ್ನ ಸಮಾಧಿಯನ್ನು ತೋಡುವಲ್ಲಿ ನಿರತರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದ ಗೆಜ್ಜಲಗೆರೆಯಲ್ಲಿ ಆಯೋಜನೆ ಮಾಡಿದ್ದ, 12 ಸಾವಿರ ಕೋಟಿ ರೂ. ಮೊತ್ತದ 210 ಕಿಲೋಮೀಟರ್ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ದೇಶವು ಅವಕಾಶಗಳ ಭೂಮಿ. ಡಬಲ್‌ ಇಂಜಿನ್‌ ಸರ್ಕಾರ ಅಭಿವೃದ್ಧಿ ಮಾಡುತ್ತಿದ್ದರೆ ಕಾಂಗ್ರೆಸ್‌ ಮಾತ್ರ ಮೋದಿಯ ಸಮಾಧಿ ತೋಡಲು ನಿರತವಾಗಿದೆ. ಆದರೆ ಮೋದಿ ಮಾತ್ರ ಬೆಂಗಳೂರು-ಮೈಸೂರು ರಸ್ತೆ ನಿರ್ಮಾಣ ಮಾಡುವಲ್ಲಿ, ಬಡವರ ಜೀವನವನ್ನು ಸರಳ ಮಾಡುವಲ್ಲಿ ನಿರತವಾಗಿದ್ದಾರೆ ಎಂದರು.

ಮತ್ತೂ ಮುಂದುವರಿಸಿದ ಮೋದಿ, ದೇಶದ ಮಾತೆಯರ ಆಶೀರ್ವಾದವೇ ಮೋದಿಯ ಬಹುದೊಡ್ಡ ರಕ್ಷಾ ಕವಚ ಎನ್ನುವುದು ಮೋದಿಯ ಸಮಾಧಿ ನಿರ್ಮಿಸಲು ಮುಂದಾಗಿರುವ ಕಾಂಗ್ರೆಸ್‌ಗೆ ಗೊತ್ತಿಲ್ಲ. ಕರ್ನಾಟಕದ ವೇಗದ ಅಭಿವೃದ್ಧಿಗೆ ಡಬಲ್‌ ಇಂಜಿನ್‌ ಸರ್ಕಾರ ಅವಶ್ಯಕ. ಈ ಕಾರ್ಯಕ್ರಮಕ್ಕಾಗಿ ಮಂಡ್ಯ ಜನತೆಗೆ ಹೃದಯದಿಂದ ಆಭಾರಿಯಾಗಿದ್ದೇನೆ ಎಂದರು.

ಕರ್ನಾಟಕದ ಸಕ್ಕರೆ ನಾಡು ಮಂಡ್ಯದ ಕಬ್ಬು ಬೆಳೆಗಾರರು ಬಹುದೊಡ್ಡ ಸಮಸ್ಯೆ ಎದುರಿಸುತ್ತಿದ್ದರು. ಕಬ್ಬು ಉತ್ಪಾದನೆ ಹೆಚ್ಚಾದರೂ, ಕಡಿಮೆ ಆದರೂ ಸಂಕಷ್ಟ ಆಗುತ್ತಿತ್ತು. ಸಕ್ಕರೆ ಕಾರ್ಖಾನೆಗಳು ರೈತರ ಬಾಕಿಯನ್ನು ವರ್ಷಾನುಗಟ್ಟಲೆ ಇರಿಸಿಕೊಳ್ಳುತ್ತಿದ್ದವು. ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿತ್ತು. ರೈತರ ಹಿತ ಕಾಯುವ ಬಿಜೆಪಿ ಸರ್ಕಾರವು ಎಥೆನಾಲ್‌ ಮಾರ್ಗ ಕಂಡುಕೊಂಡಿದೆ. ಎಥೆನಾಲ್‌ ಉತ್ಪಾದನೆ ಹೆಚ್ಚಿಸಲಾಗುತ್ತಿದೆ. ಎಥೆನಾಲ್‌ನಿಂದ ರೈತರ ಆದಾಯ ಹೆಚ್ಚುತ್ತದೆ.

ಇದನ್ನೂ ಓದಿ: Modi in Karnataka: ಕರ್ನಾಟಕದ ರೈತರ ಖಾತೆಗೆ 12 ಸಾವಿರ ಕೋಟಿ ರೂ. ಬಂದಿದೆ: ಇದು ಡಬಲ್‌ ಇಂಜಿನ್‌ ಸರ್ಕಾರ ಎಂದ ಪ್ರಧಾನಿ ನರೇಂದ್ರ ಮೋದಿ

ಕಳೆದ ವರ್ಷ ದೇಶದ ಸಕ್ಕರೆ ಕಂಪನಿಗಳು 20 ಸಾವಿರ ಕೋಟಿ ರೂ. ಮೌಲ್ಯದ ಎಥೆನಾಲ್‌ ಅನ್ನು ತೈಲ ಕಂಪನಿಗಳಿಗೆ ಮಾರಿವೆ. 2014ರಿಂದ ಕಳೆದ ಸೀಸನ್‌ವರೆಗೆ 70 ಸಾವಿರ ಕೋಟಿ ರೂ. ಮೌಲ್ಯದ ಎಥೆನಾಲ್‌ ಅನ್ನು ತೈಲ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ. ಈ ಹಣವು ಕಬ್ಬು ಬೆಳೆಗಾರರಿಗೆ ತಲುಪಿದೆ. ಸಕ್ಕರೆ ಸಹಕಾರಿ ಸಂಘಗಳಿಗೆ ಸಹಾಯಧನ, ತೆರಿಗೆ ವಿನಾಯಿತಿ ನೀಡಲಾಗಿದ್ದು, ಇದರಿಂದಲೂ ಕಬ್ಬು ಬೆಳೆಗಾರರಿಗೆ ಲಾಭವಾಗಲಿದೆ ಎಂದರು.

ಕಾಂಗ್ರೆಸ್‌ ಸಮಯದಲ್ಲಿ ಬಡವರು ಸೌಲಭ್ಯ ಪಡೆಯಬೇಕೆಂದರೆ ಸರ್ಕಾರದ ಬಾಗಿಲಿಗೆ ಹೋಗಬೇಕಾಗಿತ್ತು. ಆದರೆ ಈಗ ಸರ್ಕಾರವೇ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದೆ. ಬಿಜೆಪಿ ಸರ್ಕಾರವು ಯಾವಾಗಲೂ ಸಮಸ್ಯೆಯನ್ನು ಪೂರ್ಣ ನಿವಾರಿಸಲು ಪ್ರಯತ್ನಿಸುತ್ತಿದೆ. ನಮ್ಮ ಅವಧಿಯಲ್ಲಿ ದೇಶದಲ್ಲಿ 3 ಕೋಟಿಗೂ ಹೆಚ್ಚು ಬಡವರ ಮನೆ ಆಗಿದೆ, ಅದರಲ್ಲಿ ಲಕ್ಷಾಂತರ ಮನೆ ಕರ್ನಾಟಕದಲ್ಲೂ ಆಗಿದೆ. ಜಲಜೀವನ ಮಿಷನ್‌ನಲ್ಲಿ 40 ಲಕ್ಷ ಹೊಸ ಕುಟುಂಬಗಳಿಗೆ ನಲ್ಲಿ ಮೂಲಕ ನೀರು ಲಭಿಸಿದೆ ಎಂದು ತಿಳಿಸಿದರು.

Exit mobile version