ಮಂಡ್ಯ: ಅಕ್ರಮ ಗಣಿಗಾರಿಕೆಗೆ ಅಡ್ಡಿಪಡಿಸಿದ ಕಾರಣಕ್ಕೆ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಮೋಹನ್ ನಿಗೂಢವಾಗಿ ನಾಪತ್ತೆಯಾಗಿದ್ದ. ಇದೀಗ ನಿಗೂಢ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸ್ ತನಿಖೆಯಲ್ಲಿ ಬಗೆದಷ್ಟೂ ಆಳಕ್ಕೆ ರೋಚಕ ಸತ್ಯಗಳು ಹೊರ ಬರುತ್ತಿದ್ದು, ಕಿಡ್ನಾಪ್ ಮತ್ತು ಕೊಲೆ ಪ್ರಕರಣದಲ್ಲಿ ಬಿಂಡಿಗನವಿಲೆ ಠಾಣೆ ಪಿಎಸ್‌ಐ ಶಾಮೀಲು ಆಗಿದ್ದಾರೆಯೇ ಎಂಬ ಶಂಕೆಯೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಕ್ರಷರ್ ನಡೆಸಲು ಬಾಡಿಗೆಗೆ ಪಡೆದ ಜಾಗದಲ್ಲಿ ಮಾಲೀಕನು ರಸಗೊಬ್ಬರ ಕಲಬೆರಕೆ ನಡೆಸುತ್ತಿದ್ದ ಎನ್ನುವುದು ಬಹಿರಂಗಗೊಂಡಿದೆ. ಅಂತೆಯೇ ಹತ್ಯೆ ಹಿಂದೆ ಮೃತನ ಖಾಸಾ ದಾಯಾದಿ, ನೆರೆಯ ಕುಣಿಗಲ್‌ನಿಂದ ಬಂದ ರೌಡಿ ಶೀಟರ್ ಭಾಗಿಯಾಘಿರುವ ಅಂಶವೂ ಬಹಿರಂಗಗೊಂಡಿದೆ.
ಇದನ್ನೂ ಓದಿ | ಸಾ.ರಾ.ಮಹೇಶ್ ವಿರುದ್ಧ ಭೂ ಅಕ್ರಮ ದಾಖಲೆ ಬಿಡುಗಡೆ ಮಾಡಿದ ಆರ್‌ಟಿಐ ಕಾರ್ಯಕರ್ತ ಗಂಗರಾಜು
ಘಟನೆಯ ಹಿನ್ನೆಲೆ :
ಭಾನುವಾರ ನಿಗೂಢವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಮೋಹನ್ ನಿಗೂಢವಾಗಿ ನಾಪತ್ತೆಯಾಗಿದ್ದ. ಮೋಹನ್‌ನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಆತನ ಕುಟುಂಬಸ್ಥರು ದೂರು ನೀಡಲು ಮುಂದಾಗಿದ್ದರು. ಆದರೆ, ಬಿಂಡಗನವಿಲೆ ಪೊಲೀಸರು ಅದನ್ನು ಮಿಸ್ಸಿಂಗ್ ಕಂಪ್ಲೆಂಟ್ ನೀಡಿ ಎಂದು ಕುಟುಂಬಸ್ಥರಿಂದ ಬಲವಂತವಾಗಿ ದೂರು ಪಡೆದು, ದಾಖಲು ಮಾಡಿಕೊಂಡಿದ್ದರು.
ಮೋಹನ್‌ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿಸಿರುವುದು ಆತನ ಖಾಸಾ ದೊಡ್ಡಪ್ಪನ ಮಗ ಕುಮಾರ್ ಮತ್ತು ನರಗಲು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ರಾಜು ಎಂದು ಮೊದಲೇ ಶಂಕಿಸಲಾಗಿತ್ತು. ಈ ಬಗ್ಗೆ ಮೋಹನ್ ಕಣ್ಮರೆಯಾದ ದಿನದಿಂದಲೂ ಆತನ ಕುಟುಂಬಸ್ಥರು ಬಿಂಡಿಗನವಿಲೆ ಪೊಲೀಸರಿಗೆ ಮಾಹಿತಿ ನೀಡುತ್ತಲೇ ಬಂದಿದ್ದರು.
ಮೋಹನ್ ಅಕ್ರಮ ಗಣಿಗಾರಿಕೆಯ ವಿರುದ್ಧವಾಗಿ ಹೋರಾಟ ಮಾಡುತ್ತಲೇ ಇದ್ದ. ಹೀಗಾಗಿ ಮೋಹನ್‌ನನ್ನು ಕಿಡ್ನಾಪ್ ಮಾಡಿ, ದೊಡ್ಡಪ್ಪನ ಮಗ ಕುಮಾರ್ ಮತ್ತು ಕ್ರಶರ್ ಮಾಲೀಕ ರಾಜು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲು ಕುಟುಂಬ ಮುಂದಾಗಿತ್ತು. ಆದರೆ, ಪೊಲೀಸರು ಈ ಬಗ್ಗೆ ದೂರು ತೆಗೆದುಕೊಳ್ಳದೇ ಮಿಸ್ಸಿಂಗ್ ಕಂಪ್ಲೆಂಟ್ ಮಾಡಿಕೊಂಡಿದ್ದರು.
ಎಸ್ಸಿ ಯತೀಶ್ ವರೆಗೆ ವಿಷಯ ಹೋದ ನಂತರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ತನಿಖೆ ನಡೆಸಲಾಗಿತ್ತು. ಈ ಸಂಬಂಧ ಮೋಹನ ದೊಡ್ಡಪ್ಪನ ಮಗ ಕುಮಾರ್, ಆತನ ಮಗ ತೇಜಸ್‌ನನ್ನು ವಿಚಾರಣೆ ಮಾಡಿದ ವೇಳೆ ಮೋಹನ್‌ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ಶಂಕಿತ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಪೊಲೀಸರು ಡಿಸಿ ಮತ್ತು ಎಸಿ ಅವರ ಅನುಮತಿ ತೆಗೆದುಕೊಂಡು, ಹೂತಿದ್ದ ಶವವನ್ನು ಮೇಲೆ ಎತ್ತಿದಾಗ ಅದು ಮೋಹನ್ ಶವವೇ ಎಂದು ಖಚಿತವಾಗಿದೆ.
ಗ್ರಾಮಸ್ಥರ ಆರೋಪ :
ಗ್ರಾಮಕ್ಕೆ ಶವ ತಂದ ಕುಟುಂಬಸ್ಥರು, ಸಂಬಂಧಿಕರು ಮತ್ತು ಗ್ರಾಮಸ್ಥರು ಶವವನ್ನು ಶಂಕಿತ ಅರೋಪಿಗಳಲ್ಲಿ ಒಬ್ಬನಾದ ರಾಜು ನಡೆಸುತ್ತಿದ್ದ ಕ್ರಷರ್ ಬಳಿಯೇ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಮೋಹನ್ ಕೊಲೆಗೆ ಮೂಲ ಕಾರಣವೇ ಪೊಲೀಸರು. ಅಂದು ಬಿಂಡಿಗನವಿಲೆ ಪಿಎಸ್‌ಐ ಶ್ರೀಧರ್ ಎರಡು ಲಕ್ಷ ರೂಪಾಯಿ ಲಂಚವನ್ನು ಆರೋಪಿಗಳಿಂದ ಪಡೆದುಕೊಂಡು, ನಾವು ಕಿಡ್ನಾಪ್ ಕೇಸ್ ಕೊಟ್ಟರೂ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ಮೊದಲೇ ಈ ಬಗ್ಗೆ ದೂರು ದಾಖಲು ಮಾಡಿಕೊಂಡು, ತನಿಖೆ ಮಾಡಿದ್ದರೆ ಮೋಹನ್ ಸಾಯುತ್ತಿರಲಿಲ್ಲ. ಈ ಸಂಬಂಧ ಶ್ರೀಧರ್‌ನನ್ನು ಸಸ್ಪೆಂಡ್ ಮಾಡಬೇಕು ಮತ್ತು ಕೊಲೆ ಮಾಡಿದ ಹಂತಕರಿಗೆ ಶಿಕ್ಷೆ ನೀಡಬೇಕೆಂದು ಮೋಹನ್ ಸಂಬಂಧಿಕರು ಆಗ್ರಹಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆ :
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅಗಮಿಸಿ, ಪ್ರತಿಭಟನಾನಿರತರ ದೂರು ಆಲಿಸಿ ತಪ್ಪಿತಸ್ಥ ಪೊಲಿಸರ ಮೇಲೆ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಎಸ್‌ಪಿ ಯತೀಶ್ ಖುದ್ದು ಕಾಳಜಿ ವಹಿಸಿ, ತನಿಖೆಗೆ ತಂಡಗಳನ್ನು ರಚಿಸಿದ್ದರು. ಆರೋಪಿಗಳಾದ ರಾಜು, ಕುಮಾರ್, ತೇಜಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಮೂಲದ ರೌಡಿ ಶೀಟರ್ ಸೇರಿದಂತೆ ಆರು ಮಂದಿ ಆರೋಪಿಗಳಿಗಾಗಿ ಹುಡುಕಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ಆರು ಮಂದಿಗಾಗಿ ಶೋಧಕಾರ್ಯ ಶುರುವಾಗಿದೆ. ಕೊಲೆಯ ಬಳಿಕ ಮೋಹನ್ ಮೃತ ದೇಹದ ಹಿಮ್ಮಡಿ ಕತ್ತರಿಸಿದ್ದ ಆರೋಪಿ ಕುಮಾರ್. ಸತ್ತ ಬಳಿಕ ದೆವ್ವವಾಗಿ ಕಾಡಬಾರದೆಂದು ಹಿಮ್ಮಡಿ ಕತ್ತರಿಸಿ, ಬಳಿಕ ಮಣ್ಣು ಮಾಡಿದ್ದ. ಕೊಲೆ ಪ್ರಕರಣದಲ್ಲಿ ರೌಡಿ ಶೀಟರ್‌ಗಳು ಭಾಗಿಯಾಗಿದ್ದು, ಲೈಮ್ ಲೈನ್ ಕ್ರಷರ್ ಕಾವಲಿಗೆ ರೌಡಿ ಶೀಟರ್ ಗಳ ನೇಮಕ ಮಾಡಲಾಗಿತ್ತು.
ಕ್ರಷರ್ ಕಾವಲಿಗಾಗಿ ರೌಡಿ ಶೀಟರ್ ನನ್ನು ಮಾಲೀಕ ರಾಜು ನೇಮಿಸಿದ್ದ. ಆರೋಪಿ ಕುಮಾರ್ ಜಮೀನಿನನಲ್ಲಿ ಫರ್ಟಿಲೈಸರ್ ಮಿಶ್ರಣಕ್ಕಾಗಿ ಕ್ರಷರನ್ನು ರಾಜು ತೆರೆದಿದ್ದ. ಮೇ 10ರಂದು ಕ್ರಷರ್ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಾಳಿ ನಡೆಸಿತ್ತು. ಈ ದಾಳಿ ಹಿಂದೆ ಮೋಹನ್ ಪಾತ್ರವಿದೆ ಎಂದು ಅನುಮಾನಿಸಿದ್ದ ಕುಮಾರ್. ಈ ಹಿನ್ನಲೆ ಕೊಲೆಗೈದು ಬಳಿಕ ಹಾಸನ ಜಿಲ್ಲೆಯ ಹೊಳೆನರಸಿಪುರದ ಬಂಟರ ತಾಳಾಳುನಲ್ಲಿ ಮಣ್ಣು ಮಾಡಿದ್ದರು.
ಇದನ್ನೂ ಓದಿ | ಅರಣ್ಯ ಒತ್ತುವರಿ ಕುರಿತ 42,422 ಅರ್ಜಿಗಳ ವಿಲೇ ಬಾಕಿ: ಪಶ್ಚಿಮಘಟ್ಟ ಕಾರ್ಯಪಡೆ ಸಭೆಯಲ್ಲಿ ಮಾಹಿತಿ