ಮಂಡ್ಯ: ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ (Melukote private School Teacher), ರೀಲ್ಸ್ ಮೂಲಕ ಗಮನ ಸೆಳೆಯುತ್ತಿದ್ದ ಮಾಣಿಕ್ಯನ ಹಳ್ಳಿಯ ದೀಪಿಕಾ (Teacher Deepika) ಕೊಲೆ ಪ್ರಕರಣಕ್ಕೆ (Deepika Murder Case) ಸಂಬಂಧಿಸಿ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ (Killer Arrested). ಎಲ್ಲರ ಊಹೆಯಂತೆ ಕಳೆದ ಎರಡು ವರ್ಷಗಳಿಂದ ದೀಪಿಕಾ ಅವರಿಗೆ ಅತ್ಮೀಯನಾಗಿದ್ದು, ಆಕೆಯನ್ನು ʻಅಕ್ಕ ಅಕ್ಕʼ ಎಂದೇ ಕರೆಯುತ್ತಿದ್ದ ನಿತೇಶ್ ಎಂಬ ಯುವಕನೇ ಕೊಲೆಗಾರ ಎನ್ನುವುದು ಪೊಲೀಸರಿಗೆ ಸ್ಪಷ್ಟವಾಗಿದೆ.
ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶನಿವಾರ ಸಂಜೆಯ ಹೊತ್ತಿಗೆ ಟೀಚರ್ ದೀಪಿಕಾ ಅವರನ್ನು ಕೊಂದು ಕೊಂದು ಮಣ್ಣಲ್ಲಿ ಹೂತು ಹಾಕಿದ್ದ ಅದೇ ಗ್ರಾಮದ ನಿತೇಶ್ʼ ಅಂದಿನಿಂದಲೇ ನಾಪತ್ತೆಯಾಗಿದ್ದ. ಮೇಲುಕೋಟೆ ಪೊಲೀಸರು ನಿತೇಶ್‌ನನ್ನು ಹೊಸಪೇಟೆ ಬಳಿ ವಶಕ್ಕೆ ಪಡೆದು ಕರೆದುಕೊಂಡು ಬಂದಿದ್ದಾರೆ. ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಜತೆಗೆ ಕೊಲೆಗೆ ಕಾರಣವಾದ ಅಂಶಗಳನ್ನು ಬಿಚ್ಚಿಟ್ಟಿದ್ದಾನೆ.
ಎಲ್ಲರಿಗೂ ತಿಳಿದಿರುವಂತೆ ದೀಪಿಕಾ ಅವರು ವಿವಾಹಿತೆ. ಈಗ ಅವರಿಗೆ 28 ವರ್ಷ. ಒಂಬತ್ತು ವರ್ಷಗಳ ಹಿಂದೆ ಅವರಿಗೆ ಲೋಕೇಶ್ ಎಂಬವರೊಂದಿಗೆ ಮದುವೆಯಾಗಿತ್ತು. ಇವರಿಗೆ ಎಂಟು ವರ್ಷದ ಒಬ್ಬ ಮಗನಿದ್ದಾನೆ. ದೀಪಿಕಾ ಅವರಿಗೆ ವಿಡಿಯೋ ರೀಲ್ಸ್ ಮಾಡುವುದು ಭಾರಿ ಖುಷಿಯ ವಿಷಯ. ಅದಕ್ಕೆ ಪೂರಕವಾದ ಸೌಂದರ್ಯ ಮತ್ತು ಬುದ್ಧಿವಂತಿಕೆ, ವಿಷಯ ಜ್ಞಾನವೂ ಅವರಿಗೆ ಇತ್ತು.
ದೀಪಿಕಾ ಅವರು ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದರು. ಅವರು ಪ್ರತಿ ದಿನವೂ ಬಸ್ಸಿನಲ್ಲಿ ಅಲ್ಲಿಗೆ ಹೋಗಿಬರುತ್ತಿದ್ದರು. ಮಾಣಿಕ್ಯನ ಹಳ್ಳಿಯ ಮನೆಯಿಂದ ಹೆದ್ದಾರಿವರೆಗೆ ದ್ವಿಚಕ್ರ ವಾಹನದಲ್ಲಿ ಬಂದು ಮುಂದೆ ಮೇಲುಕೋಟೆವರೆಗೆ ಬಸ್ಸಿನಲ್ಲಿ ಹೋಗುತ್ತಿದ್ದರು. ಕಳೆದ ಜನವರಿ 20ರಂದು ಶನಿವಾರ ಅವರು ಶಾಲೆಗೆ ಹೊರಟು ಮಾರ್ಗದ ಬಳಿ ಬಂದಾಗ ಬಸ್ ಹೋಗಿ ಆಗಿತ್ತು. ಹಾಗಾಗಿ ಅವರು ದ್ವಿಚಕ್ರ ವಾಹನದಲ್ಲೇ ಶಾಲೆಗೆ ಹೋಗಿದ್ದರು. ಮಧ್ಯಾಹ್ನ 12.30ಕ್ಕೆ ಶಾಲೆಯಿಂದ ಹೊರಟಿದ್ದ ಅವರು ಮನೆಗೆ ಬರಲೇ ಇಲ್ಲ.
ಮನೆಯವರು ಸಂಜೆಯಾದದರೂ ದೀಪಿಕಾ ಬಂದಿಲ್ಲ ಎಂದು ಹುಡುಕಲು ಶುರು ಮಾಡಿದಾಗ ಆಕೆಯ ಸ್ಕೂಟರ್ ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಜತೆಗೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪತಿ ಲೋಕೇಶ್ ಅವರು ಪತ್ನಿ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಇದರ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ.
ಈ ನಡುವೆ ಮನೆಯವರೇ ಈ ಸ್ಕೂಟರ್ ಸಿಕ್ಕಿದ ಆಸುಪಾಸಿನಲ್ಲಿ ಏನಾದರೂ ಕುರುಹುಗಳು ಸಿಗಬಹುದೇ ಎಂದು ಹುಡುಕಿದ್ದರು. ಆಗ ಒಂದು ಕಡೆ ಹಸಿ ಮಣ್ಣು ಕಂಡಿತ್ತು. ಅದನ್ನು ಸ್ವಲ್ಪ ಸರಿಸಿದಾಗ ದೀಪಿಕಾ ಅವರ ಶವ ಪತ್ತೆಯಾಗಿತ್ತು. ಅಲ್ಲಿಗೆ ಶಾಲೆಯಿಂದ ಹೊರಟ ದೀಪಿಕಾ ಅವರನ್ನು ಯಾರೋ ಕೊಲೆ ಮಾಡಿ ಹೂತು ಹಾಕಿದ್ದು ಸ್ಪಷ್ಟವಾಗಿತ್ತು. ಅದಕ್ಕೆ ಪೂರಕವಾಗಿ ಯೋಗ ನಾರಸಿಂಹ ಬೆಟ್ಟಕ್ಕೆ ಹೋಗಿ ಯುವಕರ ತಂಡವೊಂದು ಬೆಟ್ಟದ ಭಾಗದಲ್ಲಿ ನಡೆದ ಒಂದು ಘಟನೆಯ ವಿಡಿಯೊವನ್ನು ಪೊಲೀಸರಿಗೆ ಒಪ್ಪಿಸಿತ್ತು. ಅದರಲ್ಲಿ ತಪ್ಪಲಿನಲ್ಲಿ ಮಹಿಳೆ ಮತ್ತು ಯುವಕರಿಬ್ಬರು ಕಿತ್ತಾಡುತ್ತಿರುವುದು ಕಂಡುಬಂದಿತ್ತು.
ಇದನ್ನೂ ಓದಿ: Murder Case : ದೀಪಿಕಾ ಕೊಲೆ ಕೇಸ್; ದುಡ್ಡು ಕೊಟ್ಟರೂ ಪೊಲೀಸರು ಕೆಲ್ಸ ಮಾಡಲಿಲ್ಲ!
ಹಂತಕ ಅವನೇ ಎನ್ನುವುದು ಎಲ್ಲರಿಗೂ ಸ್ಪಷ್ಟವಿತ್ತು!
ನಿಜವೆಂದರೆ ದೀಪಿಕಾ ಕೊಲೆಯಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಹಂತಕ ಯಾರು ಎಂಬ ವಿಚಾರದಲ್ಲಿ ಆ ಭಾಗದ ಜನರಿಗೆ ಸ್ಪಷ್ಟತೆ ಇತ್ತು. ಆತನೇ ಆ ಭಾಗದ ಪ್ರಭಾವಿ ವ್ಯಕ್ತಿಯೊಬ್ಬರ ಮಗ ನಿತೇಶ್! ಹೌದು, ನಿತೇಶ್ ಮತ್ತು ದೀಪಿಕಾ ಕಳೆದ ಎರಡು ವರ್ಷಗಳಿಂದ ಆತ್ಮೀಯರಾಗಿಯೇ ಇದ್ದರು. ಅದು ದೀಪಿಕಾ ಪತಿ ಲೋಕೇಶ್‌ಗೆ ಕೂಡಾ ಗೊತ್ತಿತ್ತು.
ಹಾಗಂತ ಅದೇನೂ ಕೆಟ್ಟ ಸಂಬಂಧವಾಗಿರಲಿಲ್ಲ. 22 ವರ್ಷದ ನಿತೇಶ್ ದೀಪಿಕಾರನ್ನು ಅಕ್ಕ ಅಕ್ಕ ಎಂದೇ ಕರೆಯುತ್ತಿದ್ದ. ಆಕೆಗೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದ. ಆಕೆಯ ರೀಲ್ಸ್‌ಗೆ ಕೂಡಾ ನೆರವಾಗುತ್ತಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಗಾಸಿಪ್ ಗಳು ಹರಿದಾಡುತ್ತಿದ್ದವು. ನಿತೇಶ್ ಅಕ್ಕನೆಂದು ಕರೆಯುತ್ತಿದ್ದ ದೀಪಿಕಾ ಅವರ ವಿಚಾರದಲ್ಲಿ ಬೇರೆ ಭಾವನೆಗಳನ್ನು ವ್ಯಕ್ತಪಡಿಸಲು ಶುರು ಮಾಡಿದ್ದ ಎನ್ನಲಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಜನರ ಬಾಯಿಗೆ ಅವರು ಆಹಾರವಾಗಿದ್ದರು.
ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ದೀಪಿಕಾ ಆತನಿಂದ ಅಂತರ ಕಾಯ್ದುಕೊಂಡಿದ್ದರು. ಮೊದಲಿನಷ್ಟು ಮಾತುಕತೆ, ಭೇಟಿ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಇದು ದೀಪಿಕಾಳನ್ನು ಅತಿಯಾಗಿ ಹಚ್ಚಿಕೊಂಡಿದ್ದ ನಿತೇಶ್‌ಗೆ ಭಾರಿ ಆಕ್ರೋಶವನ್ನು ಉಂಟು ಮಾಡಿತ್ತು ಎನ್ನಲಾಗಿದೆ.
ಹುಟ್ಟುಹಬ್ಬದ ನೆಪದಲ್ಲಿ ಕರೆಸಿಕೊಂಡಿದ್ದ ನಿತೇಶ್
ಕಳೆದ ಶನಿವಾರ ನಿತೇಶ್ ಹುಟ್ಟುಹಬ್ಬವಿತ್ತು. ಹಿಂದೆಲ್ಲ ನಿತೇಶ್ ಹುಟ್ಟುಹಬ್ಬವನ್ನು ದೀಪಿಕಾ ಸಂಭ್ರಮಿಸುತ್ತಿದ್ದರು. ಈ ಬಾರಿ ಆಕೆ ವಿಷ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಆತನೇ ಮಧ್ಯಾಹ್ನದ ಹೊತ್ತಿಗೆ ಶಾಲೆಯಲ್ಲಿದ್ದ ದೀಪಿಕಾ ಅವರಿಗೆ ಕರೆ ಮಾಡಿದ್ದ ಎನ್ನಲಾಗಿದೆ. ಸುಮಾರು ಒಂದು ಗಂಟೆ ಕಾಲ ಶತಪಥ ತಿರುಗುತ್ತಾ ಫೋನಿನಲ್ಲಿ ಮಾತನಾಡಿದ್ದ ದೀಪಿಕಾ ಅಲ್ಲಿಂದ ಹೊರಟಿದ್ದರು.
ಹಾಗೆ ಹೊರಟ ದೀಪಿಕಾ ಬಂದಿದ್ದೇ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿಗೆ. ಅಲ್ಲಿ ಅವರ ಮಧ್ಯೆ ಮಾತುಕತೆ ನಡೆದಿದೆ. ಎರಡು ವರ್ಷಗಳಿಂದ ಜತೆಯಾಗಿದ್ದು ಈಗ ಏಕಾಏಕಿಯಾಗಿ ದೂರ ಮಾಡಿದ್ದನ್ನು ಪ್ರಶ್ನಿಸಿ ದೂರ ಮಾಡಬೇಡಿ ಎಂದು ಕೇಳಿಕೊಂಡಿದ್ದಾನೆ ಎನ್ನಲಾಗಿದೆ. ಆಗ ಅವರಿಬ್ಬರ ನಡುವೆ ಜಗಳ ನಡೆದು ಅಂತಿಮವಾಗಿ ಶಾಲಿನಿಂದ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಕೆಳಗೆ ಎಳೆದುಕೊಂಡು ಹೋಗಿ ಮಣ್ಣಲ್ಲೇ ಹೂತು ಹಾಕಿದ್ದಾನೆ.
ಶನಿವಾರದಿಂದಲೇ ನಾಪತ್ತೆಯಾಗಿದ್ದ ನಿತೇಶ್
ನಿಜವೆಂದರೆ ಕಳೆದ ಜನವರಿ 23ರಂದು ನಿತೇಶ್ ಮೇಲೆ ಸಂಶಯ ಬರಲು ಕಾರಣವಾಗಿದ್ದು ಆತನ ನಾಪತ್ತೆ ಪ್ರಕರಣ. ಆವತ್ತು ದೀಪಿಕಾ ಮೃತದೇಹ ಸಿಕ್ಕಿದ ದಿನದಿಂದಲೇ ಇವನೂ ನಾಪತ್ತೆಯಾಗಿದ್ದ. ಅಂದು ಆತ ನನ್ನ ಹುಡುಕಬೇಡಿ ಅಕ್ಕನಿಗೆ ಒಳ್ಳೆ ಕಡೆ ಮದುವೆ ಮಾಡಿ ಎಂದು ತಂದೆಗೆ ಹೇಳಿದ್ದನಂತೆ. ಇತ್ತ ದೀಪಿಕಾಗೆ ಕೊನೆಯದಾಗಿ ಕರೆ ಮಾಡಿ ಅಷ್ಟು ಹೊತ್ತು ಮಾತನಾಡಿದ್ದು ಕೂಡಾ ಇವನೇ ಎನ್ನುವುದು ಕರೆಗಳಿಂದ ಸ್ಪಷ್ಟವಾಗಿದೆ.
ತಪ್ಪೊಪ್ಪಿಕೊಂಡನಾ ಕೊಲೆಗಾರ ನಿತೇಶ್ ?
ಅಂದು ಮೇಲುಕೋಟೆಯಿಂದ ತಪ್ಪಿಸಿಕೊಂಡಿದ್ದ ಆರೋಪಿ ನಿತೇಶ್ ಊರು ಬಿಟ್ಟಿದ್ದ. ಆತನ ಮೊಬೈಲ್ ಲೋಕೇಶನ್ ಆಧಾರದಲ್ಲಿ ಆತನನ್ನು ಹೊಸಪೇಟೆಯಲ್ಲಿ ಬಂಧಿಸಲಾಗಿದೆ. ಆತನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮೀಯವಾಗಿದ್ದ ಟೀಚರ್ ಸಂಗವನ್ನು ತೊರೆದುದೇ ಕೊಲೆಗೆ ಕಾರಣ ಎಂದು ಆತ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.