ಮಂಡ್ಯ: ಪತ್ನಿಯ ಶೀಲದ (Suspecting illicit relationship) ಬಗ್ಗೆ ಸದಾ ಶಂಕೆ ವ್ಯಕ್ತಪಡಿಸುತ್ತಿದ್ದ ಗಂಡನೊಬ್ಬ ಆಕೆಯನ್ನು ಕೊಂದು (Husband kills wife) ನಾಲ್ಕು ವರ್ಷದ ಮಗನೊಂದಿಗೆ ಪರಾರಿಯಾಗಿದ್ದಾನೆ (Man kills wife and absconds with son). ಮಂಡ್ಯ ಜಿಲ್ಲೆಯ (Mandya news) ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ಘಟನೆ ನಡೆದಿದೆ.
ನಾಗಮಂಗಲ ಪಟ್ಟಣದ ವಾಸಿ ಮಧುಶ್ರಿ (25) ಕೊಲೆಯಾಗಿರುವ ಮಹಿಳೆ. ಐದು ವರ್ಷದ ಹಿಂದೆ ಆಕೆಯ ಮದುವೆ ತಾಲೂಕಿನ ಕರಡಹಳ್ಳಿ ಗ್ರಾಮದ ಮಂಜುನಾಥ್ ಜೊತೆ ನಡೆದಿತ್ತು. ಅವರಿಗೆ ಒಬ್ಬ ಪುಟ್ಟ ಮಗನಿದ್ದಾನೆ.
ಮಧುಶ್ರೀ ಮತ್ತು ಮಂಜುನಾಥ್ ಕಳೆದ ಒಂದುವರೆ ವರ್ಷಗಳಿಂದ ನಾಗಮಂಗಲದ ಟಿಬಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. 4 ವರ್ಷದ ಗಂಡು ಮಗುವಿನ ಜೊತೆ ಅವರು ವಾಸವಾಗಿದ್ದರು.
ಮಂಜುನಾಥ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಂಡ್ಯದಿಂದಲೇ ಹೋಗಿ ಬರುತ್ತಿದ್ದ. ಕೆಲವೊಮ್ಮೆ ಬೆಂಗಳೂರಿನಲ್ಲೇ ಉಳಿಯುತ್ತಿದ್ದ. ಮಂಗಳವಾರ ಮಧ್ಯಾಹ್ನ ಬೆಂಗಳೂರಿನಿಂದ ಬಂದಿದ್ದ ಮಂಜುನಾಥ್ ಪತ್ನಿ ಜತೆಗೆ ಜಗಳವಾಡಿದ್ದ ಎಂದು ಹೇಳಲಾಗಿದೆ.
ಪತ್ನಿಯ ಶೀಲ ಶಂಕಿಸುತ್ತಿದ್ದ ಆತ ಈ ಬಾರಿಯೂ ಅದೇ ವಿಚಾರವನ್ನು ಎತ್ತಿ ಜಗಳ ಶುರು ಮಾಡಿದ್ದಾನೆ ಎನ್ನಲಾಗಿದೆ. ಈ ಜಗಳ ತಾರಕಕ್ಕೇರಿದ್ದು ಮಂಜುನಾಥ್ ತನ್ನ ಪತ್ನಿ ಮಧುಶ್ರೀಯನ್ನು ಕೊಲೆ ಮಾಡಿದ್ದಾನೆ. ಬಳಿಕ ಮಗ ಮನ್ವಿತ್ ಕರೆದುಕೊಂಡು ಪರಾರಿಯಾಗಿರುವ ಶಂಕೆ ಇದೆ.
ಬುಧವಾರ ಬೆಳಗ್ಗೆ ಮಧು ಎಂಬಾತ ಮನೆ ಬಳಿ ಬಂದಾಗ ಮಧುಶ್ರೀ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ನಾಗಮಂಗಲ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಎಸ್‌ಪಿ ಯತೀಶ್ ಭೇಟಿ, ಪರಿಶೀಲನೆ
ನಾಗಮಂಗಲ ಪಟ್ಟಣದಲ್ಲಿ ಮಹಿಳೆಯ ಕೊಲೆ ನಡೆದ ಮನೆಗೆ ಜಿಲ್ಲಾ ಎಸ್‌ಪಿ ಯತೀಶ್ ಭೇಟಿ ನೀಡಿದ್ದಾರೆ. ಹರಿತವಾದ ಆಯುದದಲ್ಲಿ ಮಹಿಳೆಯ ಹೊಟ್ಟೆ ಭಾಗಕ್ಕೆ ಚುಚ್ಚಿರುವ ಬಗ್ಗೆ ಮೇಲ್ನೋಟಕ್ಕೆ ತಿಳಿಯುತ್ತಿದೆ. ತನಿಖೆ ತೀವ್ರಗೊಳಿಸಿ ಆರೋಪಿಯನ್ನು ಪತ್ತೆ ಮಾಡಲಾಗುವುದು ಎಂದು ಎಸ್‌ಪಿ ತಿಳಿಸಿದರು.
ಇದನ್ನೂ ಓದಿ : Gay Husband : ಹುಡುಗಿಯರು ಇನ್ನು ಮದುವೆ ಗಂಡಿಗೆ ಪರಪುರುಷರ ಸಂಪರ್ಕ ಇದ್ಯಾ ಅಂತಾನೂ ಚೆಕ್ ಮಾಡ್ಕೊಬೇಕು!
ಪ್ಯಾಂಟ್‌ನ ಲೇಸನ್ನು ಕುತ್ತಿಗೆಗೆ ಬಿಗಿದು ಸ್ನೇಹಿತನ ಕೊಲೆ
ರಾಯಚೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಅದೂ ನೈಟ್ ಪ್ಯಾಂಟ್‌ನ ಲೇಸನ್ನೇ ಕುತ್ತಿಗೆಗೆ ಬಿಗಿದು. ಈ ಘಟನೆ ನಡೆದಿರುವುದು ಲಿಂಗಸುಗೂರು ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ.
ರವಿಕುಮಾರ (33) ಕೊಲೆಯಾದ ಯುವಕ. ಹುಬ್ಬಳ್ಳಿ ಮೂಲದ ಪವನ ಕುಮಾರ ಕೊಲೆ ಮಾಡಿದ ಆರೋಪಿ. ಮಂಗಳವಾರ ರಾತ್ರಿ ಇವರಿಬ್ಬರು ಜತೆಯಾಗಿ ಮದ್ಯಪಾನ ಮಾಡುತ್ತಿದ್ದರು. ಆಗ ಅವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಪವನ್ ಕುಮಾರ್ ಸಿಟ್ಟು ಮತ್ತು ಮತ್ತಿನಲ್ಲಿ ನೈಟ್ ಪ್ಯಾಂಟ್ ಲೇಸನ್ನೇ ಕುತ್ತಿಗೆಗೆ ಬಿಗಿದು ಸ್ನೇಹಿತನ ರವಿಕುಮಾರ್‌ನ್ನು ಕೊಲೆ ಮಾಡಿದ್ದಾನೆ.
ನಿಜವೆಂದರೆ ಈ ಕೊಲೆ ನಡೆದಿದ್ದು ಕೊಲೆಯಾದ ರವಿಕುಮಾರ್‌ನ ಮನೆಯಲ್ಲೇ. ಕುಡಿಯುವ ಅಭ್ಯಾಸವಿದ್ದ ಅವರು ಸ್ವಾತಂತ್ರ್ಯದ ಸಂಭ್ರಮದ ಹಿನ್ನೆಲೆಯಲ್ಲಿ ಮದ್ಯಪಾನಕ್ಕೆ ಮುಂದಾಗಿದ್ದರು. ಅದಕ್ಕಾಗಿ ಪವನ್ ರವಿಕುಮಾರ್‌ನ ಮನೆಗೇ ಬಂದಿದ್ದ. ರವಿಕುಮಾರ್‌ನ ಮನೆಯ ಟೆರೇಸ್ ಮೇಲೆಯೇ ಕುಳಿತು ಕಿಕ್ಕೇರಿಸಿಕೊಳ್ಳುತ್ತಿದ್ದರು. ಮಧ್ಯೆ ಜಗಳ ಹುಟ್ಟಿಕೊಂಡು ಕೊಲೆಯಲ್ಲಿ ಅಂತ್ಯಗೊಂಡಿದೆ.
ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪವನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.