Site icon Vistara News

Murder Case : ಭಯಾನಕ ಜೋಡಿ ಕೊಲೆ; ಅಜ್ಜಿ, ಮೊಮ್ಮಗಳನ್ನು ಕೊಂದು ಮೂಟೆ ಕಟ್ಟಿ ಎಸೆದ ದುರುಳರು

Murder Case Mandya

ಮಂಡ್ಯ : ಭೀಕರ ಜೋಡಿ ಕೊಲೆಗೆ (Double Murder Case) ಮಂಡ್ಯ ಜಿಲ್ಲೆ (Mandya News) ಬೆಚ್ಚಿ ಬಿದ್ದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚುಂಚನಗಿರಿ ಬಳಿ ಅಜ್ಜಿ ಮತ್ತು ಮೊಮ್ಮಗಳನ್ನು (Woman and Grand child Killed) ಕೊಂದು ಮೂಟೆ ಕಟ್ಟಿ ಹೊಂಡಕ್ಕೆ ಎಸೆದ ಭೀಕರ ಘಟನೆ (Crime News) ನಡೆದಿದೆ. ಅಜ್ಜಿ ಮತ್ತು ಮೊಮ್ಮಗಳ ಜೋಡಿ ಶವ ಹೊಂಡದಲ್ಲಿ ಪತ್ತೆಯಾಗುತ್ತಿದ್ದಂತೆಯೇ ಜನರು ಹೌಹಾರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಲ್ಕೆರೆ ಗ್ರಾಮದ ಜಯಮ್ಮ(45) ಮತ್ತು ರಿಷಿಕ (3) ಎಂಬವರೇ ಕೊಲೆಯಾದ ದುರ್ದೈವಿಗಳು. ದುಷ್ಕರ್ಮಿಗಳು ಇವರಿಬ್ಬರನ್ನು ಕೊಂದು ಮೂಟೆಯಲ್ಲಿ ಕಟ್ಟಿ ಹೊಂಡಕ್ಕೆ ಎಸೆದಿದ್ದಾರೆ. ಮೂರು ದಿನಗಳ ಹಿಂದೆ ಈ ಕೊಲೆ ಮಾಡಲಾಗಿದ್ದು, ಮೂರು ದಿನಗಳ ಬಳಿಕ ಹೊಂಡದಲ್ಲಿ ಕೊಳೆತ ಸ್ಥಿತಿಯಲ್ಲಿ ಅಜ್ಜಿ ಮತ್ತು ಮೊಮ್ಮಗಳ ಕಳೇಬರ ಪತ್ತೆಯಾಗಿದೆ. ಇವರು ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿದ್ದು, ಇತ್ತೀಚೆಗಷ್ಟೇ ಚುಂಚನಗಿರಿ ಸಮೀಪದ ಪಾಳ್ಯ ಗ್ರಾಮಕ್ಕೆ ಬಂದು ನೆಲೆಸಿದ್ದರು.

ಚುಂಚನಗಿರಿ ಬಳಿ ಹೊಂಡದಲ್ಲಿ ಮೂಟೆ ತೇಲುತ್ತಿರುವ ಬಗ್ಗೆ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂಟೆ ಹೊರ ತೆಗೆದು ಪರಿಶೀಲನೆ ನಡೆಸಿದರು. ಮೂಟೆಯಲ್ಲಿ ಅಜ್ಜಿ ಮತ್ತು ಮೊಮ್ಮಗಳ ಶವ ಕಂಡು ಪೊಲೀಸರೇ ಹೌಹಾರಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಮೃತರ ಗುರುತು ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಸಾಗುತ್ತಿದೆ.

ಇದನ್ನೂ ಓದಿ : Attempt To Murder: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಗೆ ಚಾಕು ಹಾಕಿದ ದುಷ್ಟ ಮಗ

Fire Accident : ಬೆಂಕಿ ಆರಿಸಲು ಹೋಗಿ ಸುಟ್ಟು ಕರಕಲಾದ ರೈತ

ಹಾಸನ: ಬೆಂಕಿ ಆರಿಸಲು ಹೋದ ರೈತ ಬೆಂಕಿಗಾಹುತಿಯಾದ ದಾರುಣ ಘಟನೆ ಹಾಸನದ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿ ನಡೆದಿದೆ. ಕೃಷ್ಣೇಗೌಡ (62) ಮೃತ ದುರ್ದೈವಿ.

ಮಂಗಳವಾರ ಸಂಜೆ ಕೃಷ್ಣೇಗೌಡ ತಮ್ಮ ಜಮೀನಿಗೆ ತೆರಳಿದ್ದಳು. ಈ ವೇಳೆ ಜಮೀನಿನ ಬದುವಿನಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿತ್ತು. ತೋಟಕ್ಕೆಲ್ಲಾ ಬೆಂಕಿ ವ್ಯಾಪಿಸುತ್ತದೆ ಎಂದು ಆತಂಕಗೊಂಡ ಕೃಷ್ಣೇಗೌಡರು ಬೆಂಕಿ ನಂದಿಸಲು ಹೋಗಿದ್ದರು.

ಜೋರಾಗಿ ಉರಿಯುತ್ತಿದ್ದ ಬೆಂಕಿಗೆ ಸಿಲುಕಿ ಕೃಷ್ಣೇಗೌಡರು ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ಗ್ರಾಮಸ್ಥರು ಗಾಯಾಳುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೊಳೆನರಸೀಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೃಷ್ಣೇಗೌಡರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version