ಮಂಡ್ಯ: ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಿಂದ ಐದು ಶಾಸಕರ ಜತೆಗೆ ಸಂಸದರನ್ನೂ ಗೆಲ್ಲಿಸಿಕೊಳ್ಳಲಿದ್ದೇವೆ ಎಂದು ಮಂಡ್ಯ ಉಸ್ತುವಾರಿ ಸಚಿವ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.
ಕೆ.ಆರ್. ಪೇಟೆ ಕ್ಷೇತ್ರಕ್ಕೆ ಮಾತ್ರವೆ ಹೆಚ್ಚು ಅನುದಾನ ಪಡೆಯುತ್ತಿದ್ದಾರೆ ಎಂಬ ಜೆಡಿಎಸ್ ಶಾಸಕರ ಮಾತಿಗೆ ನಾರಾಯಣಗೌಡ ಪ್ರತಿಕ್ರಿಯೆ ನೀಡುತ್ತ ಈ ಮಾತನ್ನು ಹೇಳಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರಕ್ಕೆ ಮಾತ್ರ ಹೆಚ್ಚು ಅನುದಾನವೆಂದು ಜೆಡಿಎಸ್ ಶಾಸಕರು ಆರೋಪ ಮಾಡಿದ್ದಾರೆ. ಮಗು ಅಳದೆ ಯಾರೂ ಹಾಲನ್ನು ಕೊಡಲ್ಲ. ನಾನು ಬಿಜೆಪಿ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿಗೆ ಟಾರ್ಗೆಟ್ ಇಟ್ಟುಕೊಂಡು ಕೆಲಸ ಮಾಡ್ತಿದ್ದೇನೆ. ಬೇರೆ ಕ್ಷೇತ್ರದ ಶಾಸಕರು ಕೂಡ ಹೋರಾಟ ಮಾಡಬೇಕು. ಅವರು ಹೋರಾಟ ಮಾಡದೇ ಅನುದಾನ ಸಿಗಲ್ಲ. ಬಿಜೆಪಿಯವರ ಬಳಿ ಅನುದಾನ ಕೇಳಲು ಜಿಲ್ಲೆಯ ಜೆಡಿಎಸ್ ಶಾಸಕರು ಮುಜುಗರ ಪಡುತ್ತಾರೆ ಎಂದರು.
ಇವರು ಮುಖ್ಯಮಂತ್ರಿ ಬಳಿ ಹೋಗಿ ಅನುದಾನ ಕೇಳ್ತಿಲ್ಲ. ನಾನು ತಾಲೂಕು ಅಭಿವೃದ್ದಿ ಕನಸಿಟ್ಟುಕೊಂಡು ರಾಜಕಾರಣಕ್ಕೆ ಬಂದೆ. ಆದರೆ ಅದಕ್ಕೆ ಸಹಕಾರ ಆಗದಿದ್ದಕ್ಕೆ ಪಕ್ಷಾಂತರ ಮಾಡಿದ್ದು. ಜೆಡಿಎಸ್ ಶಾಸಕರಿಗೆ ರಾಜಕಾರಣ ಮಾಡುವುದು ಬಿಟ್ರೆ ಅಭಿವೃದ್ದಿ ಮಾಡುವ ಯೋಚನೆ ಇಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ಆದರೆ ಬಿಜೆಪಿಗೆ ಹೆಸರು ಬರುತ್ತದೆ ಎಂದು ಅನುದಾನ ಕೇಳುತ್ತಿಲ್ಲ. ಅನುದಾನ ಕೇಳಲು ಯಾಕೆ ಮುಜುಗರ ಪಡಬೇಕು? ಬಂದು ಕೇಳಲಿ, ತಾಲೂಕುಗಳನ್ನ ಅಭಿವೃದ್ದಿ ಮಾಡೋಣ. ಅದನ್ನ ಬಿಟ್ಟು ಸುಮ್ಮನೆ ಟೀಕೆ ಟಿಪ್ಪಣಿ ಮಾಡೋದನ್ನ ನಿಲ್ಲಿಸಬೇಕು ಎಂದು ಹರಿಹಾಯ್ದರು. ಮುಂದಿನ ಬಾರಿ ಜಿಲ್ಲೆಯಲ್ಲಿ ನಾಲ್ಕೈದು ಕ್ಷೇತ್ರವನ್ನ ಗೆಲ್ಲುತ್ತೇವೆ. ಅಷ್ಟೇ ಅಲ್ಲ ಎಂಪಿಯನ್ನೂ ಗೆಲ್ಲುತ್ತೇವೆ. ಮಂಡ್ಯ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಸಂಸದೆಯಾಗಿರುವ ಸುಮಲತಾ ಅಂಬರೀಷ್ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳ ನಡುವೆಯೇ ನಾರಾಯಣಗೌಡ ಅವರ ಮಾತು ಪ್ರಾಮುಖ್ಯತೆ ಪಡೆದಿದೆ.
ಇದನ್ನೂ ಓದಿ: ರಾಜ್ಯದಲ್ಲೀಗ 150+ ಜಪ: BJP, CONGRESS ನಡುವೆ JDS ನಡೆ ವಿಭಿನ್ನ