ಮಂಡ್ಯ : ʻʻಈಗಾಗಲೇ ಸಾಕಷ್ಟು ಬಾರಿ ಇದರ ಬಗ್ಗೆ ಹೇಳಿದ್ದೇನೆ. ಈಗ ಕೊನೆಯದಾಗಿ ಹೇಳ್ತಿದ್ದೀನಿ.. ಮಂಡ್ಯದಲ್ಲಿ ಈ ಬಾರಿ ನನ್ನ ಸ್ಪರ್ಧೆ ಇಲ್ಲ.. ನಾನು ಕಣಕ್ಕೆ ಇಳಿಯಲ್ಲ. (I am not Contesting) ಯಾವ ಒತ್ತಡಕ್ಕೂ ಮಣಿದು ನಾನು ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲʼʼ- ಹೀಗೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಚಿತ್ರನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy).
2019ರ ಲೋಕಸಭಾ ಚುನಾವಣೆಯಲ್ಲಿ (parliament Elections 2024) ಮಂಡ್ಯ ಕ್ಷೇತ್ರದಲ್ಲಿ (Mandya Constituency) ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿಖಿಲ್ ಕುಮಾರಸ್ವಾಮಿ ಅವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮಂಡ್ಯ ಕ್ಷೇತ್ರವನ್ನು ತನಗೆ ಬಿಟ್ಟುಕೊಡಬೇಕು ಎಂದು ಬೇಡಿಕೆ ಇಟ್ಟಿದೆ. ಆದರೆ, ಸುಮಲತಾ ಅವರು ಇದನ್ನು ಬಿಜೆಪಿಯೇ ಉಳಿಸಿಕೊಂಡು ತನಗೇ ಮರು ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ನಿಖಿಲ್ ಕುಮಾರಸ್ವಾಮಿ ಅವರು ಮರಳಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಲ್ಲೇ ಗೆಲ್ಲುವ ಛಲ ತೋರಿಸಲಿದ್ದಾರೆ ಎಂಬ ಸುದ್ದಿಗಳು ಹರಡುತ್ತಿವೆ. ಆದರೆ ಈ ವರದಿಗಳನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಇದನ್ನೂ ಓದಿ : Preetham Gowda : ನಾನೇನು ಮಾಡ್ಬೇಕು ಅಂತ JDSನವರು ಹೇಳ್ಬೇಕಾಗಿಲ್ಲ; ಪ್ರೀತಂ ಗೌಡ ಅಬ್ಬರ
ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, 2019ರ ಸೋಲಿನ ಬಗ್ಗೆ ನಾನು ಮಾತನಾಡಲ್ಲ. ನಡೆದಿರುವ ಬಗ್ಗೆ ಮರೆತು ಮುಂದೆ ಹೋಗಲು ನಿರ್ಧರಿಸಿದ್ದೇನೆ. ಈ ಬಾರಿ ಮತ್ತೆ ಕಣಕ್ಕಿಳಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭಾ ಚುನಾವಣೆಯ ಸಿದ್ಧತೆ, ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿದ ಅವರು, ಸೀಟು ಹಂಚಿಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಎಂದರು.
ʻʻಕಳೆದ 1 ತಿಂಗಳಿಂದ ಯಾವ ರೀತಿ ಚುನಾವಣೆ ಎದುರಿಸಬೇಕು ಅನ್ನೋ ತಯಾರಿ ಆಗಿದೆ. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಮಂಡ್ಯದಲ್ಲಿ ಪಕ್ಷ ಕಟ್ಟುವಲ್ಲಿ ಓಡಾಟ ಮಾಡಬೇಕು. ಹಿಂದೆ 2019ರಲ್ಲಿ ಮಂಡ್ಯದಿಂದ ನಾನು ಸ್ಪರ್ಧೆ ಮಾಡಿದ್ದೆ ಹೀಗಾಗಿ ಮಂಡ್ಯದಲ್ಲಿ ನಾನು ಸಕ್ರಿಯವಾಗಿ ಇರಬೇಕು ಎಂಬ ಸೂಚನೆ ಇದೆʼʼ ಎಂದು ನಿಖಿಲ್ ಕುಮಾರಸ್ವಾಮಿ. ʻʻಮುಂದೆ ಮಂಡ್ಯದ 8 ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡುತ್ತೇನೆ ಎಂದರು.
Nikhil Kumaraswamy : ಜೆಡಿಎಸ್‌ನಲ್ಲಿ ಯಾವುದೇ ಗೊಂದಲ ಇಲ್ಲ
ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಗೊಂದಲದ ವಿಚಾರವಾಗಿ ಮಾತನಾಡಿದ ಅವರು, ಮೈಸೂರಿನಲ್ಲಿ ಸಭೆ ನಡೆಸಿ ಅಮಿತ್ ಶಾ ಬಿಜೆಪಿ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ. ನಮ್ಮ ಪಕ್ಷದವರಲ್ಲಿ ಯಾವುದೇ ಗೊಂದಲ ಇಲ್ಲ. ನಾವು ಯಾರು ಯಾವುದಕ್ಕೂ ಪ್ರತಿಕ್ರಿಯೆ ನೀಡ್ತಿಲ್ಲ. ಇದು ಆರೋಗ್ಯಕರ ಚುನಾವಣೆ ಆಗಬೇಕು, ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ದೇವೇಗೌಡರು ಈಗಾಗಲೇ ಮೋದಿ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ. ನಾವು ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಕಾರ್ಯಕರ್ತರು ಮತ್ತು ನಾಯಕರ ಒತ್ತಡ ಇರುವುದಂತೂ ನಿಜ ಎಂದು ಹೇಳಿದ್ದಾರೆ ನಿಖಿಲ್ ಕುಮಾರಸ್ವಾಮಿ.