Site icon Vistara News

Road Accident : ಮಂಡ್ಯದಲ್ಲಿ ಜವರಾಯನ ಅಟ್ಟಹಾಸ; ಕಾರಿಗೆ ಲಾರಿ ಡಿಕ್ಕಿಯಾಗಿ ಮೂವರು ಸಾವು

Road Accident

ಮಂಡ್ಯ : ಕಾರು ಮತ್ತು ಲಾರಿ ನಡುವೆ (Road Accident) ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರ ಸಾವಾಗಿದೆ. ಮಂಡ್ಯದ ನಾಗಮಂಗಲ ಹಾಗೂ ಪಾಂಡವಪುರ ಹೆದ್ದಾರಿಯ ಶ್ರೀ ರಾಮನಹಳ್ಳಿ ಬಳಿ ಅಪಘಾತ ನಡೆದಿದೆ.

ಚಿತ್ರದುರ್ಗ ಮೂಲದ ಯುವರಾಜ್, ತಿಪ್ಪೇಸ್ವಾಮಿ ಹಾಗೂ ಸಿದ್ದೇಶ್ ಮೃತ ದುರ್ದೈವಿಗಳು. ಈ ಮೂವರು ಕಾರಿನಲ್ಲಿ ಬರುತ್ತಿದ್ದಾಗ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡಿದಿದೆ. ಡಿಕ್ಕಿ ರಭಸಕ್ಕೆ ರಸ್ತೆಯಿಂದ ಪಕ್ಕಕ್ಕೆ ಸರಿದು, ಕಂಬವೊಂದಕ್ಕೆ ಗುದ್ದಿದೆ. ಕಾರಿನ ಎಡಭಾಗವು ಸಂಪೂರ್ಣ ಛಿದ್ರಛಿದ್ರಗೊಂಡಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ED Raid: ʼಕನ್ನಡದ ಕೋಟ್ಯಾಧಿಪತಿʼ ಶೋನಲ್ಲಿ ಪ್ರಶ್ನೆ ಉತ್ತರಿಸಿ 50 ಲಕ್ಷ ಗೆದ್ದಿದ್ದ ಪಂಪಣ್ಣ ಈಗ ಇಡಿ ಪ್ರಶ್ನೆಗೆ ವಿಲವಿಲ!

ವಿದ್ಯುತ್‌ ತಂತಿ ತಗುಲಿ ಕಂಟೇನರ್‌ನಲ್ಲಿದ್ದ 40 ಬೈಕ್‌ಗಳು ಸುಟ್ಟು ಭಸ್ಮ

ಆನೇಕಲ್: ರಾಷ್ಟ್ರೀಯ ಹೆದ್ದಾರಿಯ ರಾಯಕೋಟೆ ಸಮೀಪದ ಕೆಲಮಂಗಳ ಬಳಿಯ ಧಮ್ಮನರಹಳ್ಳಿ ಚಲಿಸುತ್ತಿದ್ದ ಕಂಟೇನರ್‌ ವಾಹನಕ್ಕೆ ವಿದ್ಯುತ್‌ ತಂತಿ (Fire Accident) ತಗುಲಿದೆ. ಪರಿಣಾಮ ಕ್ಷಣಾರ್ಧದಲ್ಲೇ ಬೈಕ್‌ಗಳನ್ನು ಸಾಗಿಸುತ್ತಿದ್ದ ಕಂಟೇನರ್‌ ವಾಹನವು ಧಗಧಗಿಸಿ ಹೊತ್ತಿ ಉರಿದಿದೆ.

ಟಿವಿಎಸ್ ಕಂಪನಿಯ ಸುಮಾರು 40 ದ್ವಿಚಕ್ರ ವಾಹನಗಳನ್ನು ಕಂಟೇನರ್‌ ಮೂಲಕ ಉತ್ತನಹಳ್ಳಿಯ ಗೋಡೌನ್‌ನಿಂದ ಕೊತ್ತಕೊಂಡಹಳ್ಳಿಗೆ ಕೊಂಡೊಯ್ಯುತ್ತಿದ್ದಾಗ ಈ ಅವಘಡ ನಡೆದಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಕಂಟೇನರ್ ವಾಹನಕ್ಕೆ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಕಂಟೇನರ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ 30 ಲಕ್ಷ ಬೆಲೆಬಾಳುವ 40 ದ್ವಿಚಕ್ರ ವಾಹನಗಳು ಬೆಂಕಿಗಾಹುತಿ ಆಗಿವೆ. ಅದೃಶ್ಯವಶಾತ್‌ ಬೆಂಕಿ ಕಾಣಿಸಿಕೊಳ್ಳುತ್ತಿದ್ದ ಚಾಲಕ ಹಾಗೂ ಕ್ಲಿನರ್‌ ಜಿಗಿದು ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ. ಏಕಾಏಕಿ ಕಂಟೇನರ್‌ ಸೇರಿ 40ವಾಹನಗಳು ಬೆಂಕಿಗಾಹುತಿಯಾದ ಕಾರಣಕ್ಕೆ ಸುತ್ತಲೂ ದಟ್ಟ ಹೊಗೆ ಆವರಿಸಿತ್ತು. ಮಧ್ಯೆ ರಸ್ತೆಯಲ್ಲೇ ಅಗ್ನಿ ಅವಘಡ ಸಂಭವಿಸಿದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕೆಲಮಂಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

Fire Accident

ಕರೆಂಟ್‌ ಶಾಕ್‌ಗೆ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ರೈತ

ಚಿಕ್ಕಮಗಳೂರಲ್ಲಿ ಕರೆಂಟ್‌ ಶಾಕ್‌ಗೆ ರೈತರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ತೋಟಕ್ಕೆ ನೀರು ಹಾಯಿಸಲು ಹೋದಗ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ರೈತ ದಿನೇಶ್ (34) ಎಂಬುವವರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಘಟನೆ ನಡೆದಿದೆ.

ಜಮೀನಿನಲ್ಲಿ ಮೋಟರ್ ಆನ್ ಮಾಡುವಾಗ ಕರೆಂಟ್ ಶಾಕ್ ಹೊಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version