ಮಂಡ್ಯ: ಸಲಾಂ ಆರತಿ VS ಸಂಧ್ಯಾರತಿ ನಡುವಿನ ಕಾದಾಟದಲ್ಲಿ ಸಂಧ್ಯಾರತಿ ಗೆದ್ದಿದೆ. ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಸಂಜೆ ನಡೆಯುತ್ತಿದ್ದ ದೀವಟಿಗೆ ಸಲಾಂ ಆರತಿ ಹೆಸರು ಬದಲಾವಣೆಯಾಗಿ ಸಂಧ್ಯಾರತಿ ಬಳಸಲು ನಡೆಯುತ್ತಿದ್ದ ಅನೇಕ ದಿನಗಳ ಚರ್ಚೆಗೆ ತೆರೆ ಬಿದ್ದಿದೆ. ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಮೇಲುಕೋಟೆಯಲ್ಲಿ ಈ ಆರತಿ ನಡೆಯುತತಿದ್ದದ್ದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದು, ಇದೀಗ ಅಧಿಕೃತ ಆದೇಶದ ಮೂಲಕ ಮುಕ್ತಾಯ ಕಂಡಿದೆ.
ದೀವಟಿಗೆ ಸಲಾಂ ಆರತಿ ಬದಲಿಗೆ ಸಂಧ್ಯಾರತಿ ಎಂದು ಬದಲಿಸುವಂತೆ ಧಾರ್ಮಿಕ ಪರಿಷತ್ತು ಸದಸ್ಯ ನವೀನ್ ಅವರು ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಈ ಕುರಿತು ವರದಿ ನೀಡುವಂತೆ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ, ಪಾಂಡವಪುರ ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದ್ದರು. ಆ ಬಳಿಕ ದೇವಾಲಯ ಅರ್ಚಕರು, ಸ್ಥಾನಿಕರು, ಪರಿಚಾರಕರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಸಲಾಂ ಹೆಸರು ಬದಲಾಯಿಸಿ ಸಂಧ್ಯಾರತಿ ಎಂದು ಕರೆಯುವಂತೆ ಸಭೆಯಲ್ಲಿ ಸರ್ವರೂ ಅಭಿಪ್ರಾಯಪಟ್ಟಿದ್ದರು.
ನಂತರ ದೇವಾಲಯ ಸಿಬ್ಬಂದಿಗಳೂ ಅಧಿಕಾರಿಗಳ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಳಿಕ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಆಧರಿಸಿ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿ, ʼದೀವಟಿಗೆ ಸಲಾಂ ಆರತಿ ಬದಲಿಸಿ ಸಂಧ್ಯಾರತಿ ಎಂದು ಬಳಸುವಂತೆʼ ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಮುಜರಾಯಿ ಇಲಾಖೆಯು ಅಧಿಕೃತ ಆದೇಶ ನೀಡಬೇಕಿದೆ.
ಇದನ್ನೂ ಓದಿ: ಕೋಲಾರ, ಮಂಡ್ಯ ಭಾಗದಿಂದ ಬಿಜೆಪಿ ಹೆಚ್ಚು ಜನ ಬರುತ್ತಿದ್ದಾರೆ: ಅಚ್ಚರಿ ಮೂಡಿಸಿದ CM ಬೊಮ್ಮಾಯಿ