ಮಂಡ್ಯ: ರಾಜ್ಯಸಭಾ ಚುನಾವಣೆಯ ವಿಜಯೋತ್ಸವ ಸಂದರ್ಭದಲ್ಲಿ ವಿಧಾನ ಸೌಧದಲ್ಲೇ (Vidhana Soudha) ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಘೋಷಣೆ ಕೂಗಿದ (Sedition Case) ಮೂವರು ದುಷ್ಕರ್ಮಿಗಳನ್ನು ಬಂಧಿಸಿದ ಬೆನ್ನಿಗೇ ಇತ್ತ ಮಂಡ್ಯದಲ್ಲಿ (Mandya News) ಎರಡು ವರ್ಷದ ಹಿಂದಿನ ಪ್ರಕರಣಕ್ಕೆ ಜೀವ ಬಂದಿದ್ದು, ಬಿಜೆಪಿ ಕಾರ್ಯಕರ್ತರೊಬ್ಬರನ್ನು ಬಂಧಿಸಲಾಗಿದೆ (BJP Activist Arrested). ಅವರು ಮುರ್ದಾಬಾದ್ ಬದಲು ತಪ್ಪಿ ಜಿಂದಾಬಾದ್ ಎಂದು ಹೇಳಿದ್ದಾರೆ.
ಎರಡು ವರ್ಷದ ಹಿಂದೆ ಮಂಡ್ಯದ ಸಂಜಯ ವೃತ್ತದಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಮಂಡ್ಯ ತಾಲೂಕಿನ ಡನಾಯಕನಪುರ ರವಿ ಎಂಬವರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು. ಬೆಂಗಳೂರಿನ ಪ್ರಕರಣ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಮಂಡ್ಯದ ಘಟನೆಯೂ ಮೇಲೆದ್ದು ಬಂದಿತ್ತು. ರವಿ ಅವರು ಅಚಾತುರ್ಯದಿಂದ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಗಿ ಹೇಳಿದ್ದರೂ ಏನು ಮಾಡಿದರೂ ಅದು ತಪ್ಪೇ ಎಂದು ಇನ್ನೊಂದು ವಾದ ಕೇಳಿಬಂದಿತ್ತು.
2022ರ ಡಿಸೆಂಬರ್ 18ರಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೇಳಿಬಂದಿತ್ತು. ರವಿ ಎಂಬವರು ಪಾಕಿಸ್ತಾನ್ ಮುರ್ದಾಬಾದ್ ಎಂದು ಹೇಳುವ ಬದಲು ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು.
ಬೆಂಗಳೂರು ವಿಧಾನಸೌಧ ಪ್ರಕರಣ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರಕರಣವನ್ನು ಎತ್ತಿ ತೋರಿಸಲು, ಟ್ರೋಲ್ ಮಾಡಲು ಆರಂಭಿಸಿದ್ದರು.
ಇದನ್ನೂ ಓದಿ : Sedition Case: ಪಾಕ್ ಪರ ಘೋಷಣೆ ಕೂಗಿದವರಿಗೆ 3 ದಿನ ಪೊಲೀಸ್ ಕಸ್ಟಡಿ: ಕೋರ್ಟ್ ಆದೇಶ
ಸೋಮವಾರ ರಾತ್ರಿ ಎಫ್‌ಐಆರ್ ದಾಖಲು
ಮಂಡ್ಯದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಸೋಮವಾರ ರಾತ್ರಿ ಕನ್ನಂಬಾಡಿ ಕುಮಾರ್ ಎಂಬವರು ದೂರು ದಾಖಲಿಸಿದರು. ಇದರ ಆಧಾರದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದರು. ಮಂಡ್ಯದ ಪಶ್ಚಿಮ ಠಾಣೆ ಪೊಲೀಸರು ಉಪ್ಪರಕನಹಳ್ಳಿ ಆರಾಧ್ಯ, ಡಣಾಕನಪುರ ರವಿ ಮತ್ತು ಇತರರ ವಿರುದ್ಧ ಎಫ್ ಐ ಆರ್ ದಾಖಲು ಮಾಡಿಕೊಂಡಿದ್ದು ಬಳಿಕ ರಾತ್ರಿಯೇ ರವಿ ಅವರನ್ನು ಬಂಧಿಸಿದ್ದಾರೆ.
ಘೋಷಣೆ ಬಳಿಕ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದ ಬಿಜೆಪಿ ಕಾರ್ಯಕರ್ತ
ನಿಜವೆಂದರೆ, ಅಂದು ಆ ಘಟನೆ ನಡೆದ ಕೂಡಲೇ ರವಿ ಅವರು ಏನಾಯಿತು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದರು ಮತ್ತು ಕ್ಷಮೆ ಕೂಡಾ ಯಾಚಿಸಿದ್ದರು. ಡಣಾಯಕನಪುರದ ರವಿ ಅವರು, ನಾನೊಬ್ಬ ರೈತನಾಗಿದ್ದು ಹಿಂದಿ ಭಾಷೆ ಅರ್ಥ ಆಗದೆ ಜಿಂದಾ ಬಾದ್ ಮುರದಾ ಬಾದ್ ಗೆ ವ್ಯತ್ಯಾಸ ಗೊತ್ತಾಗದೆ ಹಾಗೆ ಕೂಗಿದ್ದೀನಿ ಎಂದು ಹೇಳಿದ್ದರು. ಅಂದೇ ರವಿ ಅವರು ಜಿಂದಾಬಾದ್ ಘೋಷಣೆ ಕೂಗಿದ ಕೂಡಲೇ ಸಹವರ್ತಿಗಳು ಬಾಯಿ ಮುಚ್ಚಿಸಿದ್ದರು.
ಹಾಗಾಗಿ ಅಂದು ಆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ವಿರುದ್ಧ ಈ ಪ್ರಕರಣದ ಪ್ರಯೋಗ ಮಾಡಿದ್ದಾರೆ.