ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನದ ವಿಚಾರದಲ್ಲಿ ಇಬ್ಬರು ಮಾಜಿ ಸಿಎಂಗಳ ನಡುವೆ ಜಟಾಪಟಿ ನಡೆದಿದೆ. ಕುಮಾರಸ್ವಾಮಿ ಕೊಟ್ಟ ಕುದುರೆಯನ್ನು ಏರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರೆ, ಧರ್ಮಸ್ಥಳದ ಸಿದ್ಧವನದಲ್ಲಿ ಕುಳಿತು ಸರ್ಕಾವನ್ನು ಬೀಳಿಸಿದ್ದು ಸಿದ್ದರಾಮಯ್ಯ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಆಯೋಜಿಸಿದ್ದ ಜನಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್‌ನ ನಂಬಬೇಡಿ, ಇಲ್ಲಿ ನಮಗೆ ಮತ್ತು ಜೆಡಿಎಸ್‌ಗೆ ಹೋರಾಟ ಇದೆ. ನಾವು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೆವು, ಅವರಿಂದ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲು ಆಗದೆ ಹೋಗಿದ್ದಕ್ಕೆ 17 ಜನ ಬಿಜೆಪಿಗೆ ಹೋದರು. ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಬೀಳಲು ನಾನು ಕಾರಣ ಎಂದು ಹೇಳುತ್ತಿದ್ದಾರೆ, ನಮ್ಮ ಶಾಸಕರನ್ನು ನಾನು ಕಳಿಸಿದ್ದಾದರೆ, ಜೆಡಿಎಸ್ ಶಾಸಕರನ್ನು ಕಳಿಸಿದ್ದು ಯಾರಪ್ಪ? ನೀವೆ ಕಳಿಸಿದ್ರಾ? ನೀವು ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಂಡು ಅಧಿಕಾರ ಮಾಡಲು ಆಗುತ್ತಾ? ಜನರು, ಮಂತ್ರಿಗಳು, ಅಧಿಕಾರಿಗಳು, ಶಾಸಕರನ್ನು ಭೇಟಿ ಮಾಡಿದರೆ ಮಾತ್ರ ಒಳ್ಳೆ ಅಧಿಕಾರ ನೀಡಲು ಸಾಧ್ಯವಾಗುತ್ತದೆ. ಗಾಜಿನ ಮನೆಯಲ್ಲಿ ಕೂತು ಅಧಿಕಾರ ನಡೆಸಲು ಹೊರಟದ್ದೆ ಕುಮಾರಸ್ವಾಮಿ ತಪ್ಪು.
ನಮ್ಮ ಪಕ್ಷದಿಂದ 80 ಶಾಸಕರು ಆಯ್ಕೆಯಾಗಿದ್ದರೂ, 37 ಜನ ಶಾಸಕರು ಇದ್ದ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು, ಇದಕ್ಕೆ ಕಾರಣ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬುದು. ಆದರೆ ಕುಮಾರಸ್ವಾಮಿ ಕೈಲಿ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮಪ್ರಭುಗಳ ಮಾತುಗಳು ಅವರಿಗೆ ಹೊಂದಿಕೆಯಾಗುತ್ತದೆ ಎಂದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನಾನು ಸಿಎಂ ಇದ್ದಾಗ ಕಾಂಗ್ರೆಸ್ ನವರು ಅನ್ ಕಂಡಿಷನ್ ಸಪೋರ್ಟ್ ಎಲ್ಲಿ ಕೊಟ್ಟಿದ್ದರು? ಮುಖ್ಯಮಂತ್ರಿಯನ್ನು ಗುಲಾಮರನ್ನಾಗಿ ಮಾಡಿದ್ದರು. ಈಗ ಕೊಟ್ಟ ಕುದುರೆಯ ಬಗ್ಗೆ ಮಾತನಾಡುತ್ತಿದ್ದಾರೆ. ಸಿಎಂ ಮಾಡಿ ಸ್ಲೋ ಪಾಯಿಸನ್ ಕೊಟ್ಟಿದ್ದರು.ಈಗ ಪಂಚರತ್ನ ಅಂತ ವ್ಯಂಗ್ಯ ವಾಡುತ್ತಿದ್ದಾರೆ. ಒಂದು ಚಡ್ಡಿ ತಗೊಂಡ್ರೆ ಎರಡು ಚಡ್ಡಿ ಫ್ರಿ ಅಂತಾರಲ್ಲೆ ಹಂಗೆ ಈಗ ಉಚಿತ ಹೇಳುತ್ತಿದ್ದಾರೆ ಸಿದ್ದರಾಮಯ್ಯ ಪಂಚರತ್ನ ಕಾರ್ಯಕ್ರಮ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದಕ್ಕೆ ತದ್ವಿರುದ್ದ ಆಗುತ್ತೆ. ಕುಮಾರಸ್ವಾಮಿ ಅವರಪ್ಪನ ಆಣೆ ಸಿಎಂ ಆಗಲ್ಲ ಅಂದಿದ್ರು ನಾನು ಆದೆ, ಬಿಎಸ್ ವೈ ಆದರು. ಈಗ ಕಾಂಗ್ರೆಸ್ ಗೆಲ್ಲುತ್ತೆ ಅಂತಿದ್ದಾರೆ ಅದು ಸುಳ್ಳಾಗುತ್ತೆ ಎಂದರು.
ಇದನ್ನೂ ಓದಿ : Karnataka Election: 20-22 ಸೀಟು ಗೆಲ್ಲುವ ಜೆಡಿಎಸ್‌ಗೆ ಅಧಿಕಾರ ಕೊಡಬೇಡಿ; ನಮ್ಮನ್ನು ಗೆಲ್ಲಿಸಿ: ಸಿದ್ದರಾಮಯ್ಯ
ಸಿಎಂ ಇದ್ದಾಗ ಹೊಟೆಲ್ ನಲ್ಲಿ ಎಚ್ ಡಿಕೆ ಅಧಿಕಾರ ನಡೆಸಿದರು ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿ, 78 ಸೀಟ್ ಇದ್ದವರು ಅವರು ಸರ್ಕಾರಿ ಬಂಗ್ಲೆ ಬಿಟ್ಟುಕೊಡಲಿಲ್ಲ. ನಾನೇನು ರಸ್ತೆಯಲ್ಲಿ ಅಧಿಕಾರ ನಡೆಸಲಾ? ಅಮಿತ್ ಶಾ ,ಸುರ್ಜಾವಾಲ, ರಾಹುಲ್ ಗಾಂಧಿ ಎಲ್ಲಿ ಉಳಿದುಕೊಳ್ಳುತ್ತಾರೆ? ಹೊಟೆಲ್ ನಲ್ಲಿ ಉಳಿದಿದ್ದೇ ತಪ್ಪಾ?, ನಾನೇನು ಅಲ್ಲಿ ಚಕ್ಕಂದಾ ಆಡಲು ಹೋಗಿದ್ನಾ? ಸೂಟಕೇಸ್ ತರಲು ಇಂಡಸ್ಟ್ರಲಿಸ್ಟಗಳನ್ನು ಕರೆಸಿದ್ದೆನ? 109 ಕೋಟಿ ರೂ.ಗೆ ಅರ್ಜಿ ಇಡುಕೊಂಡು ಬಂದ್ರಲ್ಲಾ, ಬಡಜನ ಆಸ್ಪತ್ರೆಗೆ ಅವರಿಗೆ ಕೊಡದಿದ್ರೆ ಆಗುತಿತ್ತಾ? 19 ಸಾವಿರ ಕೋಟಿ ರೂ. ಇವರ ಮನಗೆ ಹೋಗಿ ಕೊಟ್ಟಿದ್ದೇನೆ. 15 ಜನ ಹೋದ್ರಲ್ಲಾ ಒಬ್ಬೊಬ್ಬರಿಗೆ 500 ಕೋಟಿ ರೂ. ಹಣ ಅಭಿವೃದ್ಧಿಗೆ ಕೊಟ್ಟಿದ್ದೇವೆ. ಸಿದ್ದುವನದಲ್ಲಿ ಕುಳಿತುಕೊಂಡು ಸಿದ್ದು ಔಷಧಿಯನ್ನು ಅರೆದರಲ್ಲಾ? ಸರ್ಕಾರ ಬೀಳಿಸ್ತಿನಿ ಅಂತ ಔಷಧಿ ಅರೆದರಲ್ಲಾ ಅಂತ ಆಕ್ರೋಶ ವ್ಯಕ್ತಪಡಿಸಿದರು.