ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆ ರಾಜಕೀಯ ಕಣ ರಂಗೇರುತ್ತಿದೆ. ಈಗ ಎಲ್ಲರ ದೃಷ್ಟಿ ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha constituency) ಮೇಲೆ ನೆಟ್ಟಿದೆ. ಈಗಾಗಲೇ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ತಾವು ಮಂಡ್ಯದಲ್ಲೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದು, ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಅಲ್ಲದೆ, ಈ ಸಂಬಂಧ ಅವರು ಒತ್ತಡದ ರಾಜಕೀಯಕ್ಕೂ ಮುಂದಾಗಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಕೇಂದ್ರ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನೂ ಭೇಟಿ ಮಾಡಿ ತಾವು ಮಂಡ್ಯದ ಪ್ರಬಲ ಆಕಾಂಕ್ಷಿ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಆದರೆ, ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಇರುವುದರಿಂದ ಈ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಇದೇ ಈಗ ಎಲ್ಲ ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ನವ ದೆಹಲಿ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಮಾತನಾಡಿ, ಗೃಹ ಸಚಿವರಾದ ಅಮಿತ್ ಶಾ (Amit Shah) ಅವರು ನಾಳೆ (ಫೆ. 10) ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲವೂ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಜೆಡಿಎಸ್ ಸಹ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ತಾವೂ ಮಂಡ್ಯಕ್ಕಾಗಿ ಬೇಡಿಕೆ ಇಟ್ಟಿರುವುದಾಗಿ ಜಿ.ಟಿ. ದೇವೇಗೌಡ ಹೇಳಿದ್ದಾರೆ. ಇನ್ನು ಸುಮಲತಾ ಅಂಬರೀಷ್ ಅವರು ಕಾಂಗ್ರೆಸ್‌ಗೆ ಹೋದರೆ ಅಚ್ಚರಿ ಪಡಬೇಕಿಲ್ಲ ಎಂದೂ ಹೇಳಿರುವುದು ಸಂಚಲವನ್ನು ಸೃಷ್ಟಿಸಿದೆ.
ಈ ಬಗ್ಗೆ ನವ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿ.ವೈ. ವಿಜಯೇಂದ್ರ, ಮಂಡ್ಯ ಕ್ಷೇತ್ರದ ವಿಚಾರವಾಗಿ ಯಾವುದೇ ಚರ್ಚೆ ಆಗಿಲ್ಲ. ನಾಳೆ ರಾತ್ರಿ ಗೃಹ ಸಚಿವ ಅಮಿತ್ ಶಾ ಅವರು ಮೈಸೂರಿಗೆ ಬರಲಿದ್ದಾರೆ. ನಾಡಿದ್ದು ಮೈಸೂರಿನಲ್ಲಿ ನಮ್ಮ ಕೋರ್ ಕಮಿಟಿ ಸಭೆ ನಿಶ್ಚಯವಾಗಿದೆ. ಆ ಸಭೆಯಲ್ಲಿ ಎಲ್ಲವೂ ಚರ್ಚೆ ಆಗಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಅಂದೇ ನಿರ್ಧಾರವಾಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ನಾವು ಮಾಡಿದ್ದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳವನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡಲಿ: ಬೊಮ್ಮಾಯಿ
ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಸುಮಲತಾ
ಶತಾಯಗತಾಯ ಬಿಜೆಪಿಯಿಂದ ಮಂಡ್ಯ ಟಿಕೆಟ್ ಅನ್ನು ಪಡೆಯಬೇಕೆಂಬ ನಿಟ್ಟಿನಲ್ಲಿ ಅವಿರತ ಪ್ರಯತ್ನ ಪಡುತ್ತಿರುವ ಸಂಸದೆ ಸುಮಲತಾ ಅಂಬರೀಷ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಭೇಟಿ ಬಳಿಕ ತಮ್ಮ ಸೋಷಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಮಾತುಕತೆ ಬಗ್ಗೆ ಬರೆದುಕೊಂಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು, ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ನನಗೆ ಸಮಯ ನೀಡಿದ್ದಕ್ಕಾಗಿ, ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ @PMOIndia ಸನ್ಮಾನ್ಯ ಶ್ರೀ ನರೇಂದ್ರ ಮೋದಿರವರಿಗೆ ನನ್ನ ಧನ್ಯವಾದಗಳು. @narendramodi ಶ್ರೀ ನರೇಂದ್ರ ಮೋದಿರವರು ವಿಶ್ವದ ಮಹಾನ್… pic.twitter.com/60y9sX7H53
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) February 9, 2024
ಸುಮಲತಾ ಪೋಸ್ಟ್‌ನಲ್ಲೇನಿದೆ?
“ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು, ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ನನಗೆ ಸಮಯ ನೀಡಿದ್ದಕ್ಕಾಗಿ, ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನನ್ನ ಧನ್ಯವಾದಗಳು.
ನರೇಂದ್ರ ಮೋದಿರವರು ವಿಶ್ವದ ಮಹಾನ್ ನಾಯಕರಾಗಿದ್ದು, ಭಾರತದಂತಹ ಬೃಹತ್ ದೇಶವನ್ನು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಾ, ಭಾರತವನ್ನು ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರಿಸಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ದೇಶದ ಅಭಿವೃದ್ಧಿ ಹಾಗೂ ದೇಶದ ಭವಿಷ್ಯದ ಬಗ್ಗೆ ನಿಮಗಿರುವ ದೂರದೃಷ್ಟಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಭಾರತ ದೇಶವು ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಪ್ರಧಾನ ಮಂತ್ರಿಗಳ ಸಮರ್ಥ ನಾಯಕತ್ವವೇ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರಣದಿಂದಲೇ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ.
ಇದನ್ನೂ ಓದಿ: Congress Karnataka: ಕಾಂಗ್ರೆಸ್‌ನಲ್ಲಿ ಹೆಚ್ಚಿದ ಬಣ ರಾಜಕೀಯ; ಲೋಕಸಭೆ ಎಲೆಕ್ಷನ್‌ವರೆಗೂ ಇಲ್ಲ ನಿಗಮ-ಮಂಡಳಿ ನೇಮಕ?
ಮಾರ್ಗದರ್ಶನಕ್ಕೆ ನಾನು ಆಭಾರಿ
ತಮ್ಮನ್ನು ಭೇಟಿ ಮಾಡಿದ ಸಂಧರ್ಭದಲ್ಲಿ, ತಾವು ನೀಡಿದ ಪ್ರೋತ್ಸಾಹದಾಯಕ ಮಾತುಗಳು, ನಮ್ರತೆ, ಮತ್ತು ಗೌರವಕ್ಕೆ ನಾನು ಕೃತಜ್ಞಳಾಗಿದ್ದೇನೆ. ತಮ್ಮನ್ನು ಭೇಟಿ ಮಾಡಿದ ಆ ಕ್ಷಣಗಳು ನನ್ನನ್ನು ಸಾರ್ವಜನಿಕರ ಸೇವೆಯಲ್ಲಿ ಇನ್ನಷ್ಟು ಉತ್ಸಾಹದಿಂದ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಿದ್ದು, ನಿಮ್ಮ ಸಹಕಾರ ಮತ್ತು ಮಾರ್ಗದರ್ಶನಕ್ಕೆ ನಾನು ಹೃದಯಪೂರ್ವಕವಾಗಿ ಆಭಾರಿಯಾಗಿದ್ದೇನೆ.
ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿರುವ ನಿಮಗೆ, ನಮ್ಮ ದೇಶದ ಭವಿಷ್ಯದ ಬಗ್ಗೆ ಇರುವ ಪರಿಕಲ್ಪನೆ ಹಾಗೂ ದೂರದೃಷ್ಟಿಯು ನಮ್ಮ ದೇಶದ ಎಲ್ಲ ಭವಿಷ್ಯದ ಮಹತ್ವಾಕಾಂಕ್ಷಿ ನಾಯಕರಿಗೆ ಮಾದರಿಯಾಗಿದೆ. ಪ್ರಧಾನ ಮಂತ್ರಿಗಳಾಗಿ ಅಚಲವಾದ ಧೃಢತೆಯಿಂದ ಅದ್ಭುತವಾದ ನಾಯಕತ್ವದ ಗುಣಗಳೊಂದಿಗೆ ತಾವು ಸಲ್ಲಿಸಿದ ಅತ್ಯುತ್ತಮ ಸೇವೆ ಮತ್ತು ದೇಶಕ್ಕೆ ನೀಡಿದ ಆಡಳಿತವು ಭಾರತ ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ.
ಮುಂದಿನ ಅವಧಿಯಲ್ಲಿಯೂ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ
17ನೇ ಲೋಕಸಭೆಯ ಕೊನೆಯ ಅಧಿವೇಶನವು ಮುಕ್ತಾಯದ ಹಂತದಲ್ಲಿದ್ದು, ನಿಮ್ಮ ಅಧಿಕಾರಾವಧಿಯಲ್ಲಿ ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿರುವುದು ನಿಜಕ್ಕೂ ನನ್ನ ಸೌಭಾಗ್ಯವಾಗಿದೆ. ಈ ಬಾರಿಯ ತಮ್ಮ ಭೇಟಿ ಸಂಧರ್ಭದಲ್ಲಿ “ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸೋಣ” ಎಂಬ ನಿಮ್ಮ ಮಾತುಗಳು ನನಗೆ ಸ್ಫೂರ್ತಿದಾಯಕವಾಗಿದ್ದು, ವಿಶ್ವದ ಹೆಮ್ಮೆಯ ನಾಯಕರಾದ ತಮ್ಮ ಅಮೂಲ್ಯ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡಲು ಮತ್ತು ಭಾರತವನ್ನು ಮುಂದುವರೆದ ದೇಶಗಳ ಸಾಲಿನಲ್ಲಿ ನೋಡಲು ನಾನು ಉತ್ಸುಕಳಾಗಿದ್ದೇನೆ.
ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಆಸಕ್ತಿ ವಹಿಸಿ, ಉತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುದಾನವನ್ನು ಒದಗಿಸಿದ್ದಕ್ಕಾಗಿ ನನ್ನ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾಭಿಮಾನಿ ಮತದಾರರು, ಕಾರ್ಯಕರ್ತರು, ನನ್ನ ಬೆಂಬಲಿಗರು ಮತ್ತು ಸಮಸ್ತ ಸಾರ್ವಜನಿಕರ ಪರವಾಗಿ, ಭಾರತ ದೇಶದ ಪ್ರಧಾನ ಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದಿನ ಅವಧಿಯಲ್ಲಿಯೂ ಸಹ, ನಮ್ಮ ರಾಜ್ಯ ಮತ್ತು ರಾಷ್ಟ್ರದ ಸೇವೆಯಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಸುಮಲತಾ ಬರೆದುಕೊಂಡಿದ್ದಾರೆ. ಇದಲ್ಲದೆ, ಸುಮಲತಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಸುಮಲತಾ ಕಾಂಗ್ರೆಸ್‌ಗೆ ಹೋದ್ರೆ ಅಚ್ಚರಿ ಪಡಬೇಕಿಲ್ಲ: ಜಿಟಿಡಿ
ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡ, ರಾಜ್ಯಾದ್ಯಂತ 28 ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ಜತೆ ಸೇರಿ ಕಾರ್ಯತಂತ್ರ ಮಾಡುತ್ತಿದ್ದೇವೆ. ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆರು ಕ್ಷೇತ್ರಗಳನ್ನು ಕೇಳುವಂತೆ ಹೇಳಿದ್ದೇವೆ. ಹಾಸನ, ತುಮಕೂರು, ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು ಉತ್ತರದಿಂದ ಜೆಡಿಎಸ್‌ಗೆ ಟಿಕೆಟ್ ಕೇಳಲು ಹೇಳಿದ್ದೇವೆ. ಸುಮಲತಾ ಅಂಬರೀಷ್ ಅವರು ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಸ್ವಾಗತ ಮಾಡುತ್ತೇವೆ. ಆದರೆ, ಸುಮಲತಾ ಅವರು ಕಾಂಗ್ರೆಸ್‌ಗೆ ಹೋದರೆ ಅಚ್ಚರಿ ಪಡಬೇಕಿಲ್ಲ. ಮಾಜಿ ಸಚಿವ ನಾರಾಯಣಗೌಡ ಅವರ ಜತೆ ಸೇರಿ ಸುಮಲತಾ ಕಾಂಗ್ರೆಸ್ ಹೋಗಬಹುದು. ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಗೆ ನಿಲ್ಲುವ ತೀರ್ಮಾನ ಮಾಡಿಲ್ಲ. ಕುಮಾರಸ್ವಾಮಿ ಸ್ಪರ್ಧಿಸದೇ ಇದ್ದರೆ ಗೌಡರ ಕುಟುಂಬದಿಂದ ಒಬ್ಬರೇ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಸುಮಲತಾ ಹೇಳಿಕೆ ಹಿಂದೆ ಇರೋ ಪ್ಲಾನ್ ಏನು?
ಈ ಹಿಂದೆ ಸುಮಲತಾ ಅಂಬರೀಷ್ ಹೇಳಿಕೆಯೊಂದನ್ನು ನೀಡಿದ್ದು, ಜೆಡಿಎಸ್ ಪಾಳೆಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಮಂಡ್ಯದಲ್ಲಿ ಬಿಜೆಪಿಗೆ ಕ್ಷೇತ್ರವನ್ನು ಬಿಟ್ಟು ಕೊಡಬೇಕು ಎಂದು ಸುಮಲತಾ ಹೇಳಿದ್ದರು. ಸುಮಲತಾ ಹೇಳಿಕೆ ಕೊಟ್ಟ ಬಳಿಕ ಮಾಜಿ ಸಚಿವ ನಾರಾಯಣ ಗೌಡರೂ ಅದನ್ನೇ ಪ್ರತಿಪಾದಿಸಿದ್ದರು. ಜೆಡಿಎಸ್‌ಗೆ ಬೇಕಿದ್ದರೆ ಬೇರೆ ಕ್ಷೇತ್ರ ಕೊಟ್ಟುಕೊಳ್ಳಲಿ ಎಂದು ಹೇಳಿದ್ದರು. ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರ ಹೇಳಿಕೆಯಿಂದ ಮೈತ್ರಿ ನಾಯಕರಿಗೆ ಟೆನ್ಶನ್ ಶುರುವಾಗಿದೆ. ಹೀಗಾಗಿ ಈ ಗೊಂದಲದ ಬಗ್ಗೆ ಈ ವಾರವೇ ತೆರೆ ಎಳೆಯಲು ಬಿಜೆಪಿ ಹೈಕಮಾಂಡ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ: Country made bomb: ಬಹಿರ್ದೆಸೆಗೆ ಹೋದವ ಹೊಳೆಯುವ ವಸ್ತು ಕಂಡು ಒತ್ತಿದ; ಸ್ಫೋಟಕ್ಕೆ ಕೈ ಬೆರಳು ಛಿದ್ರ!
ಸುಮಲತಾ ಅಂಬರೀಷ್‌ಗೆ ಮಂಡ್ಯ ಸಿಗೋದು ಕಷ್ಟ. ಅದು ಬಿಜೆಪಿಗಿಂತಲೂ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರವಾಗಿದೆ. ಆದರೆ, ಸುಮಲತಾ ಅವರು ಮಂಡ್ಯ ಬಿಟ್ಟು ಬೇರೆ ಕಡೆ ರಾಜಕೀಯ ಮಾಡುವುದು ಕಷ್ಟವಾಗುತ್ತದೆ. ಕಾರಣ, ಅವರ ಪುತ್ರ ಅಭಿಷೇಕ್ ಅಂಬರೀಶ್ ರಾಜಕೀಯ ಭವಿಷ್ಯಕ್ಕಾಗಿ ಮಂಡ್ಯ ಅನಿವಾರ್ಯವಾಗಿದೆ. ಹೀಗಾಗಿ ಪ್ರೆಶರ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ನಾಯಕರು ಪರಿಗಣಿಸಿ ರಾಜ್ಯಸಭೆ ಇಲ್ಲವೇ ಪರಿಷತ್ ಸದಸ್ಯರನ್ನಾಗಿ ತಮ್ಮನ್ನು ಆಯ್ಕೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಸುಮಲತಾ ಇದ್ದಾರೆ. ಹೀಗಾಗಿ ಮಗನ ಭವಿಷ್ಯಕ್ಕಾಗಿ ಸುಮಲತಾ ಮಂಡ್ಯವನ್ನು ಬಿಡಲು ಒಪ್ಪುತ್ತಿಲ್ಲ ಎನ್ನಲಾಗಿದೆ.