ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರ ಜತೆಗೆ ಮೂವತ್ತು ವರ್ಷ ಸಂಸಾರ ಮಾಡಿದವಳಿಗೆ ಅವರು ಏನು ಎಂಬುದು ಚೆನ್ನಾಗಿ ಗೊತ್ತು ಎಂದು ಪ್ರಶ್ನೆಯೊಂದಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಉತ್ತರ ನೀಡಿದ್ದಾರೆ. ಬಿಜೆಪಿಗೆ ಬೆಂಬಲ ನೀಡುತ್ತಿರುವ ಕುರಿತು ಮಂಡ್ಯದಲ್ಲಿ ವಿಶೇಷ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈ ಹಿಂದೆ ಅಂಬರೀಶ್ ಕಾಂಗ್ರೆಸ್‌ನಲ್ಲಿದ್ದರು. ಈಗ ತಾವು ಬಿಜೆಪಿ ಸೇರುತ್ತಿರುವುದು ಅವರ ತತ್ವಕ್ಕೆ ವಿರುದ್ಧವಾದದ್ದಲ್ಲವೇ ಎಂಬ ಪ್ರಶ್ನೆಗೆ ಸುಮಲತಾ ಉತ್ತರ ನೀಡಿದರು.
ನಾನು ಮೂವತ್ತು ವರ್ಷ ಅಂಬರೀಶ್ ಅವರೊಂದಿಗೆ ಸಂಸಾರ ಮಾಡಿದ್ದೇನೆ, ಅವರು ಏನು ಎನ್ನುವುದು ನನಗೆ ಗೊತ್ತು. ಅವರು ಎಂದಿಗೂ ಆ ಪಕ್ಷ, ಈ ಪಕ್ಷ ಎಂದು ಸೀಮಿತವಾಗಿಲ್ಲ. ಯಾವ ಪಕ್ಷದವರನ್ನೂ ಧ್ವೇಷ ಮಾಡಿದವರೂ ಅಲ್ಲ. ಅಂಬರೀಶ್ ಅವರು ವಾಜಪೇಯಿ ಅವರ ಬಹುದೊಡ್ಡ ಅಭಿಮಾನಿ ಆಗಿದ್ದರು, ಅವರ ಭಾಷಣ ಎಲ್ಲೇ ಇದ್ದರೂ ಕೇಳುತ್ತಿದ್ದರು ಎಂದರು.
ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಈಗ ಬಿಜೆಪಿ ಸೇರುವುದು ಕಾಂಗ್ರೆಸ್‌ಗೆ ಅನ್ಯಾಯ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಅಂಬರೀಶ್ ಅವರನ್ನು ಒಂದು ಮಾತೂ ಹೇಳದೆ ಸಚಿವ ಸ್ಥಾನದಿಂದ ಕಿತ್ತೆಸೆದಾಗಲೇ ಕಾಂಗ್ರೆಸ್‌ಗೆ ಅನ್ಯಾಯವಾಯಿತು. ಅಂತಹ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಸೆಯ ಮೇರೆಗೇ ಪಕ್ಷೇತರಳಾಗಿ ಸ್ಪರ್ಧೆ ಮಾಡಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ರಾಜಕಾರಣಿಗಳು ನನ್ನ ಪರವಾಗಿ ನಿಂತಿಲ್ಲ. ಆದರೆ ಕಾಂಗ್ರೆಸ್‌ನ ಮಂಡ್ಯ ಕಾರ್ಯಕರ್ತರು ನಿಂತಿದ್ದಾರೆ. ಅವರ ಬಳಿಗೆ ಹೋಗಿ ನಾನು ಮನವಿ ಮಾಡುತ್ತೇನೆ ಎಂದರು.
ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ, ತಾಂತ್ರಿಕವಾಗಿ ಪಕ್ಷೇತರರಾದವರು ಆರು ತಿಂಗಳೊಳಗೆ ಪಕ್ಷವನ್ನು ಸೇರಿಕೊಳ್ಳಬೇಕು. ತಾಂತ್ರಿಕವಾಗಿ ಅದು ಸಾಧ್ಯವಿಲ್ಲ. ಆದರೆ ಬಿಜೆಪಿ ಪಕ್ಷದ ಜತೆಗೆ ಇರುತ್ತೇನೆ ಎಂದರು.
ಬೆಂಗಳೂರಿನಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆಗಳ ಕುರಿತು ಪ್ರತಿಕ್ರಿಯಿಸಿ, ನಾನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್. ರಾಜಕಾರಣ ಬಿಟ್ಟರೂ ಮಂಡ್ಯ ಬಿಡುವುದಿಲ್ಲ. ಪ್ರಾಣ ಬಿಡುತ್ತೇನೆಯೇ ಹೊರತು, ಮಂಡ್ಯ ಬಿಡುವುದಿಲ್ಲ. ಮಂಡ್ಯದೊಂದಿಗೆ ಕೇವಲ ರಾಜಕಾರಣದ ಸಂಬಂಧ ಇಲ್ಲ. ಇದು ಕೆಲವರಿಗೆ ಅರ್ಥ ಆಗುತ್ತದೆ, ಕೆಲವರಿಗೆ ಆಗುವುದಿಲ್ಲ ಎಂದರು.
ಇದನ್ನೂ ಓದಿ: Sumalatha Ambareesh PC: ನಾನು ರಾಜಕೀಯದಲ್ಲಿ ಇರುವವರೆಗೂ ಅಭಿಷೇಕ್ ರಾಜಕೀಯ ಮಾಡಲ್ಲ: ಸುಮಲತಾ ಅಂಬರೀಶ್ ಘೋಷಣೆ
ಬಿಜೆಪಿ ಸೇರ್ಪಡೆಯಾಗಲು ಯಾವ ಬೇಡಿಕೆಗಳನ್ನು ಇಟ್ಟಿದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿ, ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುವ ಸಾಧ್ಯತೆಯಿರುವುದರಿಂದ ಟ್ರಾಮಾ ಸೆಂಟರ್ ಆಗಬೇಕು. ಮಳವಳ್ಳಿಯಲ್ಲಿ ಮಹಿಳಾ ಸಿಆರ್‌ಪಿಎಸ್ ತರಬೇತಿ ಶಾಲೆಯನ್ನು ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ. ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕು, ಮೈಶುಗರ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ಆರಂಭಿಸಬೇಕು, ಅರ್ಧ ರಿಂಗ್ ರಸ್ತೆ ನಿರ್ಮಿಸಬೇಕು ಎಂದು ನಿತಿನ್ ಗಡ್ಕರಿ ಅವರಲ್ಲಿ ಕೇಳಿದ್ದೇವೆ. ರೈತರ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಬೇಕು ಹಾಗೂ ಬೆಲ್ಲ ಉತ್ಪಾದಕರಿಗೆ ಜಿಎಸ್‌ಟಿ ಹಾಕಬಾರದು ಎಂದು ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದೇವೆ. ಇದೆಲ್ಲದಕ್ಕೂ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.
ಇದೆಲ್ಲ ಕೆಲಸದ ಜತೆಗೆ ಮುಂದೆಯೂ ಇನ್ನಷ್ಟು ಸವಾಲುಗಳು ಬರುತ್ತವೆ. ಅದಕ್ಕಾಗಿ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಆದ್ಧರಿಂದ ಬಿಜೆಪಿಗೆ ಬೆಂಬಲಿಸುತ್ತಿದ್ದೇನೆ ಎಂದರು. ರಾಜ್ಯ ರಾಜಕಾರಣಕ್ಕೆ ಬರುತ್ತೀರ ಎಂಬ ಕುರಿತು ಪ್ರತಿಕ್ರಿಯಿಸಿ, ಇದು ನನ್ನೊಬ್ಬಳ ನಿರ್ಧಾರ ಅಲ್ಲ. ನನ್ನ ಅವಧಿ ಮುಗಿಯುವವರೆಗೂ ಸ್ವತಂತ್ರ ಸಂಸದೆ ಎಂದ ಸುಮಲತಾ, ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಇನ್ನೂ ಬಿಜೆಪಿಯಲ್ಲಿ ಮಾತುಕತೆ ನಡೆದಿಲ್ಲ ಎಂದರು.