ಮಂಡ್ಯ: ನಾನು ಯಾವುದೇ ಕಾಮಗಾರಿಯಲ್ಲಿ ಕಮಿಷನ್ ಪಡೆದಿಲ್ಲ. ಇದು ನಿಜವೇ ಆದಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಆಣೆ-ಪ್ರಮಾಣ ಮಾಡಲಿ. ಇದಕ್ಕೆ ನಾನೂ ಸಿದ್ಧ ಎಂದು ಜೆಡಿಎಸ್ ಶಾಸಕರಿಗೆ ಸುಮಲತಾ ಸವಾಲು ಹಾಕಿದ್ದಾರೆ..
ಜಿಲ್ಲೆಯ ಬೂದನೂರು ಕೆರೆ ಏರಿ ಒಡೆದು ಹೆದ್ದಾರಿ ಜಲಾವೃತವಾಗಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಾಗ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಾರೆ ಎಂಬ ಜೆಡಿಎಸ್ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಅಹಂಕಾರ ತುಂಬಿದ ಕಡೆ ವಿವೇಚನೆ ಕಡಿಮೆ ಇರುತ್ತದೆ. ಶಾಸಕರ ಮಾತಿನಲ್ಲಿ ವಿವೇಚನೆ ಇಲ್ಲ, ಅದು ಎದ್ದು ಕಾಣುತ್ತಿದೆ. ಜನ ವೋಟು ಹಾಕಿರುವುದು ಸಂಸದರನ್ನು ಟೀಕೆ ಮಾಡುವುದಕ್ಕಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ವಾಗ್ದಾಳಿ ನಡೆಸಿ, ಜಿಲ್ಲೆಯ 6 ಜೆಡಿಎಸ್ ಶಾಸಕರೂ ಒಟ್ಟಿಗೆ ಬಂದು ಆಣೆ ಪ್ರಮಾಣ ಮಾಡಲಿ ಎಂದರು.
ಇದನ್ನೂ ಓದಿ | State politics | ವಾರಾಂತ್ಯದಲ್ಲಿ ಸಿಎಂ ಬೊಮ್ಮಾಯಿ ದಿಲ್ಲಿಗೆ: ಚುನಾವಣೆ ಬಗ್ಗೆ ಚರ್ಚೆ, ಸಂಪುಟ ವಿಸ್ತರಣೆಯೂ ಫಿಕ್ಸ್
ಅವರ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುವುದು ಅವರಿಗೆ ಗೊತ್ತಾಗುತ್ತಿಲ್ಲ. ನಾಲ್ಕು ವರ್ಷದಿಂದ ಎಂಎಲ್‌ಎ ಆಗಿದ್ದರೂ ಅಕ್ರಮ ಗಣಿಗಾರಿಕೆ ಹೆಚ್ಚಾಗಿ ನಡೆಯುತ್ತಿದೆ. ಈ ಬಗ್ಗೆ ಪಾಪ ಅವರ ಗಮನಕ್ಕೆ ಬಂದಿಲ್ಲ. ದಿನದ 24 ಗಂಟೆ ಓಡಾಡುತ್ತೇನೆ ಎನ್ನುತ್ತಾರೆ. ಆದರೆ ಕ್ಷೇತ್ರದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಗೊತ್ತಿಲ್ಲ. ಡಿಬಿಎಲ್ ಕಂಪನಿಯಿಂದ ಕ್ವಾರೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಅದನ್ನು ಕಂಡುಹಿಡಿದು 60 ಕೋಟಿ ರೂಪಾಯಿ ರಾಜಧನ ಕಟ್ಟಿಸಿದ್ದು ನಾನು. ನಾನು ತಪ್ಪು ಮಾಡಿದ್ದರೆ ಜನರು ಕೇಳುತ್ತಾರೆ, ಅವರ ಕೆಲಸ ಅವರು ಮಾಡಲಿ ಎಂದು ಕಿಡಿಕಾರಿದರು.
ಅಧಿಕಾರಿಗಳಿಗೆ ಎಂಪಿ ಅಂದ್ರೆ ಲೆಕ್ಕಕ್ಕಿಲ್ಲ
ಭಾರಿ ಮಳೆಗೆ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತವಾಗಿ ಅವಾಂತರ ಸೃಷ್ಟಿಯಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಪತ್ರ ಬರೆದರೆ ಸ್ಪಂದನೆಯೇ ಸಿಗುವುದಿಲ್ಲ. ಎಂಪಿ ಎಂದರೆ ಅಧಿಕಾರಿಗಳಿಗೆ ಲೆಕ್ಕಕ್ಕೇ ಇಲ್ಲದಂತಾಗಿದೆ ಎಂದು ಸಂಸದೆ ಸುಮಲತಾ ಆಕ್ರೋಶ ಹೊರಹಾಕಿದರು.
ಕಾಟಾಚಾರಕ್ಕೆ ಅಧಿಕಾರಿಗಳು ಬರುತ್ತಾರೆ, ಕಾಮಗಾರಿಗಳ ಬಗ್ಗೆ ಕೇಳಿದರೆ ಮಂಜೂರಾತಿಗೆ ಕಳುಹಿಸಿದ್ದೇವೆ ಎನ್ನುತ್ತಾರೆ. ಇದರಿಂದ ರೈತರು ಬೇಸತ್ತು ಹೋಗಿದ್ದಾರೆ. ಸಾವಿರಾರು ಕೋಟಿ ರೂ.ಗಳ ಹೆದ್ದಾರಿ ಕಾಮಗಾರಿಗೇ ಈ ಗತಿಯಾಗಿದೆ. ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ಜನರಿಗೆ ತೊಂದರೆಯಾಗಿದೆ. ಬೆಂಗಳೂರು ಹಾಗೂ ಮೈಸೂರು ಜನರಿಗೆ ಮಾತ್ರ ಹೆದ್ದಾರಿ ಬೇಕಾ, ಉಳಿದವರು ತೊಂದರೆ ಅನುಭವಿಸಬೇಕಾ ಎಂದು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕಿಡಿಕಾರಿದರು.
ಇದನ್ನೂ ಓದಿ | Bharat Jodo | ಗಡಿನಾಡಿನಲ್ಲಿ ಮೂರು ದಿನ ವಾಸ್ತವ್ಯ ಹೂಡಿದ ರಾಹುಲ್ ಗಾಂಧಿ, ಬಲಗೊಂಡಿತೇ ಬಳ್ಳಾರಿ ಕೈಪಡೆ?