Site icon Vistara News

ನಾಗಮಂಗಲದಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಸ್ವಂತ ಮನೆ ಕಟ್ಟಿಸುತ್ತಿರುವ ಶಿವರಾಮೇಗೌಡ

ಮಂಡ್ಯ: ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿಕೊಂಡು, ನಾಗಮಂಗಲದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಶಾಸಕ ಎಲ್‌.ಆರ್‌. ಶಿವರಾಮೇಗೌಡ ತಯಾರಿ ಆರಂಭಿಸಿದ್ದಾರೆ. ಜೆಡಿಎಸ್ ನಿಂದ ಉಚ್ಚಾಟನೆಯಾದ ಬಳಿಕ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.

ಈ ಮೂಲಕ ದಳಪತಿಗಳ ಜತೆಗೆ ಕಾಂಗ್ರೆಸ್ ವಿರುದ್ಧವೂ ತೊಡೆ ತಟ್ಟಿದ್ದಾರೆ. ತಾನು ಕ್ಷೇತ್ರದಲ್ಲೇ ಇರುತ್ತೇನೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ತೀರುವೆ ಎಂಬ ಅಚಲ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಚುನಾವಣೆ ಸ್ಪರ್ಧೆ ಬಗ್ಗೆ ಮತದಾರರಿಗೆ ಖಚಿತತೆ ನೀಡುವ ಜತೆಗೆ ವಿಶ್ವಾಸ ಗಿಟ್ಟಿಸಲು ಸ್ವಕ್ಷೇತ್ರ ನಾಗಮಂಗಲದ ಕೇಂದ್ರ ಸ್ಥಾನದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇಷ್ಟಲ್ಲದೆ, ನಿತ್ಯವೂ ಮದುವೆ, ತಿಥಿ, ಸಾವು ಮತ್ತು ಖಾಸಗಿ ಕಾರ್ಯಕ್ರಮಗಳೊಂದಿಗೆ ಕ್ಷೇತ್ರ ಪ್ರವಾಸ ನಡೆಸುತ್ತಿದ್ದಾರೆ.

ಹಳ್ಳಿ ಹಳ್ಳಿಯಲ್ಲೂ ಬೆಂಬಲಿಗರ ಪಡೆ ಕಟ್ಟುಲು ಪ್ಲಾನ್!
ರಾಜಕೀಯವೇ ಉಸಿರು, ಊಟ, ಹಾಸು, ಹೊದಿಕೆ ಎಂಬಂತಿದೆ ಸಕ್ಕರೆನಾಡು ಮಂಡ್ಯದ ರಾಜಕಾರಣ. ಸದಾ ಜಿದ್ದಾಜಿದ್ದಿನ ಹೋರಾಟ ಇದ್ದದ್ದೇ. ಆಗಾಗ್ಗೆ ತಿರುವು ಪಡೆದ ನಿದರ್ಶನಗಳೂ ಸಾಕಷ್ಟಿವೆ. ಶಿವರಾಮೇಗೌಡ ನಾಗಮಂಗಲದಿಂದ ಎರಡು ಬಾರಿ ಶಾಸಕರಾಗಿದ್ದೂ ಪಕ್ಷೇತರರಾಗಿಯೇ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರೂ ಪಕ್ಷದಲ್ಲೂ ಅಡ್ಡಾಡಿದ್ದಾರೆ. ಜೆಡಿಎಸ್ ನಿಂದ ಲೋಕಸಭೆ ಉಪ ಚುನಾವಣೆಯಲ್ಲಿ ಗೆದ್ದು, ಅಲ್ಪ ಕಾಲ ಸಂಸದರೂ ಆಗಿದ್ದರು. ಆ ಚುನಾವಣೆ ಮೂಲಕ ಸತತ ಸೋಲಿನ ಸರಪಳಿ ಕಳಚಿಕೊಂಡರು. ಕೆಲ ದಿನಗಳ ಹಿಂದೆ ಎಲ್.ಆರ್. ಶಿವರಾಮೇಗೌಡ ಅವರು ಜೆಡಿಎಸ್ ಕಾರ್ಯಕರ್ತೆಯೊಂದಿಗೆ ಮಾತನಾಡಿದ್ದರು ಎನ್ನಲಾದ ಪೋನ್ ಸಂಭಾಷಣೆ ಆಡಿಯೋ ಸಖತ್ ವೈರಲ್ ಆಗಿತ್ತು.

ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡರ ಬಗ್ಗೆ ಅವಹೇಳನಕಾರಿ ಪದಗಳ ಬಳಸಿದ್ದರು. ಇದೇ ಕಾರಣಕ್ಕಾಗಿ ಜೆಡಿಎಸ್ ಪಕ್ಷದಿಂದಲೇ ಉಚ್ಚಾಟನೆಗೆ ಒಳಗಾಗಿದ್ದರು. ಇದೀಗ ದಳ ನಾಯಕರ ತೀರ್ಮಾನಕ್ಕೆ ರೆಬೆಲ್‌ ಆಗಿರುವ ಶಿವರಾಮೇಗೌಡ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೇ ನಾಗಮಂಗಲದಲ್ಲೆ ಮನೆ ಕಟ್ಟಲು ಭೂಮಿ ಪೂಜೆ ನಡೆಸಿ ಇನ್ನುಮುಂದೆ ಕ್ಷೇತ್ರದಲ್ಲೇ ನೆಲೆಯೂರುತ್ತೇನೆ ಎನ್ನುವ ಸಂದೇಶ ರವಾನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಿವರಾಮೇಗೌಡ, ನನ್ನ ಮೇಲೆ ಹುನ್ನಾರ ನಡೆಸಿ, ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸಿದ್ದರು. ಅಂತ ಜೆಡಿಎಸ್‌ನ ನಾಗಮಂಗಲ ಶಾಸಕ ಕೆ. ಸುರೇಶ್ ಗೌಡ ವಿರುದ್ದ ಕಿಡಿಕಾರಿದ್ದಾರೆ. ಕಾಂಗ್ರೆಸ್‌ನ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಕೂಡ ನನ್ನ ವಿರೋಧಿಯೇ. ಇಬ್ಬರೂ ನನ್ನ ರಾಜಕೀಯ ಬದ್ಧ ವೈರಿಗಳು. ಇಬ್ಬರನ್ನೂ ಏಕಕಾಲದಲ್ಲಿ ಸೋಲಿಸಲು ಚಾನ್ಸ್ ಸಿಕ್ಕಿದೆ. ಸೋಲಿಸಿಯೇ ಸೋಲಿಸುತ್ತೇನೆ ಎಂದು ಗುಟುರು ಹಾಕಿದ್ದಾರೆ. ಪ್ರತಿ ಹಳ್ಳಿಯಲ್ಲೂ ನನ್ನದೊಂದು ಗುಂಪು ಮಾಡುತ್ತೇನೆ ಎನ್ನುವ ಮೂಲಕ ಕೈ ಪಾಳೆಯ ಹಾಗೂ ದಳಪತಿಗಳಿಗೆ ಏಕ ಕಾಲದಲ್ಲಿ ಟಕ್ಕರ್ ಕೊಡುವ ಸಂದೇಶವನ್ನು ರವಾನಿಸಿದ್ದಾರೆ.

ಇದನ್ನು ಓದಿ | ಹೈಕೋರ್ಟ್‌ ತೀರ್ಪು ಉಲ್ಲಂಘಿಸುವವರಿಗೆ ಸಂವಿಧಾನದ ಮೇಲಿನ ಬದ್ಧತೆ ಪ್ರಶ್ನಾರ್ಹ: ಸಚಿವ ಪೂಜಾರಿ ಹೇಳಿಕೆ

Exit mobile version