Site icon Vistara News

ರಾಜಕಾರಣ ಬದಿಗಿಟ್ಟು ತಾವೇ ಕನಕ ಭವನ ಉದ್ಘಾಟಿಸಿಕೊಂಡ ಗ್ರಾಮಸ್ಥರು!

ಕನಕ ಭವನ

ಮತ್ತೀಕೆರೆ ಜಯರಾಮ್, ಮಂಡ್ಯ
ಜಿಲ್ಲೆಯ ನಾಗಮಂಗಲ ಕ್ಷೇತ್ರವೆಂದರೆ ಅಲ್ಲಿ ಪ್ರತಿಯೊಂದು ವಿಚಾರಕ್ಕೂ ರಾಜಕಾರಣ ಬೆರೆತೇ ಇರುತ್ತದೆ. ಇಲ್ಲೊಂದು ಗ್ರಾಮದಲ್ಲಿ ನಿರ್ಮಿಸಿದ್ದ ಕನಕ ಭವನದ ಉದ್ಘಾಟನೆಗೂ ರಾಜಕೀಯ ಗ್ರಹಣ ಬೀರಿತ್ತು. ಕಡೆಗೆ, ರಾಜಕೀಯ ಭಿನ್ನಾಭಿಪ್ರಾಯದ ಗೊಡವೆಯೇ ಬೇಡವೆಂದು ನಿರ್ಧರಿಸಿದ ಗ್ರಾಮಸ್ಥರು ಸ್ವತಃ ತಾವೇ ಕನಕ ಭವನವನ್ನು ಉದ್ಘಾಟನೆ ಮಾಡಿದ್ದಾರೆ.   

ಇದು ನಡೆದಿರುವುದು ನಾಗಮಂಗಲ ತಾಲೂಕಿನ ಕೊಂಬಲುಕೊಪ್ಪಲು ಗ್ರಾಮದಲ್ಲಿ. ಅಲ್ಲಿನ ಅರುವಮ್ಮ ದೇಗುಲ ಆವರಣದಲ್ಲಿ ಬೆಂಗಳೂರಿಗೆ ಹೋಗಿ ನೆಲೆಸಿರುವ ಕುರುಬ ಸಮುದಾಯದವರು, ಗ್ರಾಮಸ್ಥರು ಮತ್ತು ಕನಕ ಸೇವಾ ಟ್ರಸ್ಟ್ ಸಮಿತಿಯಿಂದ 65 ಲಕ್ಷ ರೂ. ವೆಚ್ಚದಲ್ಲಿ ಕನಕ ಸಮುದಾಯ ಭವನವೊಂದನ್ನು ನಿರ್ಮಾಣ ಮಾಡಿಕೊಂಡಿದ್ದರು.

ಭವನದ ನಿರ್ಮಾಣಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದಿಂದ 25 ಲಕ್ಷ ರೂ., ಮಾಜಿ ಸಚಿವ ಎನ್.ಚಲುವರಾಯಸ್ವಾಮಿ 5 ಲಕ್ಷ ರೂ. ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದ ಎನ್.ಅಪ್ಪಾಜಿಗೌಡ 2.5 ಲಕ್ಷ ರೂ. ನೀಡಿದ್ದರು. ಸುಮಾರು 30 ಲಕ್ಷ ರೂ.ಗಳನ್ನು ಟ್ರಸ್ಟ್ ವತಿಯಿಂದ ಹಾಕಲಾಗಿತ್ತು. ಅಂತೂ ಇಂತು ಸುಸಜ್ಜಿತ ಭವನದ ನಿರ್ಮಾಣ ಪೂರ್ಣಗೊಂಡು, ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.  

ಭವನದ ಉದ್ಘಾಟನೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸುವ ಸಿದ್ದರಾಮಯ್ಯ, ಚಲುವರಾಯಸ್ವಾಮಿ ಅವರನ್ನು ಸ್ವಾಗತಿಸುವ ಫ್ಲೆಕ್ಸ್‌ಗಳು ಕೊಂಬಲುಕೊಪ್ಪಲು ಮತ್ತು ಅದರಾಚೆಗೂ ರಾರಾಜಿಸುತ್ತಿದ್ದವು. ಸಿದ್ದರಾಮಯ್ಯ ಕಾರ್ಯ ನಿಮಿತ್ತ ದೆಹಲಿಗೆ ತೆರಳಿದ್ದರ ಪರಿಣಾಮ ಭವನದ ಉದ್ಘಾಟನೆ ಕಾರ್ಯಕ್ರಮವನ್ನೇ ರದ್ದುಪಡಿಸಲಾಯಿತು.

ಕುಗ್ರಾಮ ಕೊಂಬಲುಕೊಪ್ಪಲುವಿನಲ್ಲಿ ಕುರುಬ ಸಮುದಾಯದ 40 ಕುಟುಂಬಗಳಿವೆ. ಪುಟ್ಟ ಗ್ರಾಮಕ್ಕೆ ಅಭಿವೃದ್ಧಿ  ಎಂಬುದೇ ಮರೀಚಿಕೆ. ಇಷ್ಟಾದರೂ ರಾಜಕೀಯ ಜಟಾಪಟಿಯೇನೂ ಕಮ್ಮಿಯಿಲ್ಲ. ಯಾವಾಗ ಕನಕ ಭವನದ ಉದ್ಘಾಟನೆಗೆ ಸಿದ್ದರಾಮಯ್ಯ, ಚಲುವರಾಯಸ್ವಾಮಿ ಅವರನ್ನಷ್ಟೇ ಆಹ್ವಾನಿಸಲಾಗಿತ್ತೋ ಅದಕ್ಕೆ ಪ್ರತಿಯಾಗಿ ಗ್ರಾಮದಲ್ಲಿರುವ ಜೆಡಿಎಸ್ ಕಾರ್ಯಕರ್ತರು ಊರಿಗೆ ಅಭಿವೃದ್ಧಿ ಕೆಲಸ ಸಂಬಂಧ ಶಾಸಕ ಕೆ.ಸುರೇಶಗೌಡ ಅವರ ಭೇಟಿ ಕಾರ್ಯಕ್ರಮವನ್ನೂ ನಿಗದಿಪಡಿಸಿಕೊಂಡು ಬಂದರು.

ಕನಕ ಭವನದ ಉದ್ಘಾಟನೆ ಸಂಬಂಧ ಹಾಕಿದ್ದಕ್ಕಿಂತಲೂ ಒಂದು ಪಟ್ಟು ಹೆಚ್ಚು ಎನ್ನುವಂತೆಯೇ ಗ್ರಾಮದ ಅಭಿವೃದ್ಧಿಗೆ ಚಾಲನೆ ನೀಡಲು ಆಗಮಿಸುತ್ತಿರುವ ಶಾಸಕ ಸುರೇಶಗೌಡ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಚಾಚಿದರು. ಕನಕ ಭವನದ ಉದ್ಘಾಟನೆಯನ್ನು ಕೇವಲ ಕಾಂಗ್ರೆಸ್ ಕಾರ್ಯಕ್ರಮ ಎನ್ನುವಂತೆಯೇ ಬಿಂಬಿಸುವಲ್ಲೂ ಜೆಡಿಎಸ್ ಪಾಳಯ ಯಶಸ್ವಿಯಾಯಿತು.

ಗ್ರಾಮಕ್ಕೆ ಭೇಟಿ ವೇಳೆ ಶಾಸಕ ಸುರೇಶಗೌಡ ಅವರೂ ಕನಕ ಭವನ ವಿಚಾರದಲ್ಲಿ ರಾಜಕೀಯ ಬೆರೆಸಿಯೇಬಿಟ್ಟರು. ಕನಕ ಭವನದ ನಿರ್ಮಾಣಕ್ಕೆ ಸರ್ಕಾರದ ಅನುದಾನ ಬಳಕೆಯಾಗಿದೆ. ಸರ್ಕಾರದ ನಿಧಿ ಬಳಸಿ, ನಿರ್ಮಾಣಗೊಂಡ ಭವನವನ್ನು ಉದ್ಘಾಟಿಸುವುದು ಕ್ಷೇತ್ರದ ಶಾಸಕರ ಕೆಲಸವೆನ್ನುವ ಶಿಷ್ಟಾಚಾರದ ಅಂಶವನ್ನು ಮುಂದಿಟ್ಟಿದ್ದರು.

ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕನಕ ಸೇವಾ ಟ್ರಸ್ಟ್ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ತಮಗೆ ರಾಜಕೀಯ ಗೊಡವೆಯೇ ಬೇಡವೆನ್ನುವ ನಿರ್ಧಾರಕ್ಕೆ ಬಂದು, ಸ್ವತಃ ತಾವೇ ಹೋಮ, ಹವನ ಮತ್ತು ಪೂಜೆ ನೆರವೇರಿಸಿಕೊಂಡು ಕನಕ ಭವನದ ಉದ್ಘಾಟನೆ ನೆರವೇರಿಸಿಕೊಂಡಿದ್ದಾರೆ. ಇದು ಜಿದ್ದಾಜಿದ್ದಿಗೆ ಬಿದ್ದಿದ್ದ ಉಭಯ ಪಕ್ಷದವರಿಗೂ ಮೂಗು ಮುರಿದಂತಾಗಿದೆ.

ಇದನ್ನೂ ಓದಿ | ಭದ್ರಕೋಟೆಯೇ ಛಿದ್ರವಾಗುವ ಭೀತಿಯಲ್ಲಿ ಜೆಡಿಎಸ್‌: ಮಂಡ್ಯದಲ್ಲಿ ಬಲ ಕಳೆದುಕೊಳ್ಳುತ್ತಿರುವುದೇಕೆ?

Exit mobile version