ಮಂಡ್ಯ: ಚುನಾವಣೆ ಸಮಯದಲ್ಲಿ ಅಭಿವೃದ್ಧಿ ವಿಚಾರ ಚರ್ಚೆ ಮಡದೆ ಟಿಪ್ಪು ವಿಚಾರವನ್ನಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮೊದಲು ಹೊಲ ಉಳುವ ಬೋರೇಗೌಡನನ್ನು ನೋಡಬೇಕು ಎಂದು ಹೇಳಿದ್ದಾರೆ.
ಮಂಡ್ಯದ ವಿ.ಸಿ. ಫಾರಂ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿಯವರಿಗೆ ಮಾಡೋಕೆ ಕೆಲಸ ಇಲ್ಲ. ಅವರು ಉರಿಗೌಡ ನಂಜೇಗೌಡರ ಪ್ರತಿಮೆ ಇಲ್ಲದಿದ್ರೆ ದೇವಸ್ಥಾನವನ್ನೇ ಕಟ್ಟಲು ಹೇಳಿ. ಅಭಿವೃದ್ದಿ ವಿಚಾರ ಚರ್ಚೆ ಮಾಡಲು ಅವರಿಗೆ ಸಮಯ ಇಲ್ಲ. ಅದೆಲ್ಲಾ ವರ್ಕೌಟ್ ಆಗಲ್ಲ. ಜನ ಅದನ್ನ ನೋಡಿ ಓಟ್ ಹಾಕಲ್ಲ. ಈಗ ಬದುಕಿರೋರ ಬಗೆಗೆ ಮಾತನಾಡದೆ ನೂರಾರು ವರ್ಷದ ಕತೆ ಹೇಳಿದ್ರೆ ಜನ ಕೇಳ್ತಾರಾ? ಎಂದರು.
ಆಲಿಕಲ್ಲು ಮಳೆ ಬಿದ್ದು ಜನ ಸಾಯ್ತಿದ್ದಾರೆ. ಅದನ್ನೆಲ್ಲಾ ಬಿಟ್ಟು ಕೆಲಸಕ್ಕೆ ಬಾರದ್ದನ್ನ ಇಟ್ಟುಕೊಂಡು ಕೂತಿದ್ದಾರೆ. ಯಾವನಾದ್ರು ಸಿನಿಮಾ ಮಾಡಲಿ ಏನಾದ್ರು ಇರಲಿ ನನಗೇನು? ಸಿನಿಮಾ ತೆಗೆಯುವುದೆಲ್ಲಾ ಒರಿಜನಲ್ಲಾ?
ಆ ಪುಸ್ತಕದಲ್ಲೇನಿದೆ? ಟಿಪ್ಪು ವಿರುದ್ದ ಅವರು ಹೋರಾಟ ಮಾಡಿದ್ರು ಸೆಟೆದು ನಿಂತಿದ್ರು ಎಂದಿದೆ. ಟಿಪ್ಪು ಕುತ್ತಿಗೆ ಕೂಯ್ದರು ಅಂತಿದಿಯಾ? ತಲೆ ತಗೆದ್ರು ಅಂತ ಇದೆಯ? ಅಷ್ಟಕ್ಕೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ಹೊಲ ಉಳುತ್ತಾನಲ್ಲ ಬೋರೇಗೌಡ, ಅವರನ್ನ ನೋಡ್ರಿ. ಆ ಮೇಲೆ ಉರಿಗೌಡ ನಂಜೇಗೌಡರ್ರನ್ನ ನೋಡುವಿರಂತೆ ಎಂದು ಹೇಳಿದರು.
ಜೆಡಿಎಸ್ ಪಕ್ಷ ಒಂದು ಪುಟಗೋಸಿ ಪಕ್ಷ ಎಂಬ ನರೇಂದ್ರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ನಂತ್ರ ಯಾವುದು ಪುಟಗೋಸಿ ಪಕ್ಷನೊ ಏನು ಅನ್ನೋದನ್ನ ಜನ ತೋರಿಸ್ತಾರೆ. ರಾಷ್ಟ್ರೀಯ ಪಕ್ಷವಾದ ಅವರ ಸಿಎಲ್‌ಪಿ ನಾಯಕನಿಗೆ ಇನ್ನೂ ಕ್ಷೇತ್ರ ಫೈನಲ್ ಮಾಡಿಕೊಳ್ಳಲಾಗಿಲ್ಲ. ಎಲ್ಲಿ ನಿಲ್ಲಿಸಬೇಕೆಂಬುದು ಅವರಿಗಿನ್ನ ಕ್ಲಿಯರ್ ಆಗಿಲ್ಲ, ನನ್ನ ಪಕ್ಷದ ಬಗೆಗೆ ಮಾತಾಡ್ತಾರಾ? ಯಾವ ಪಕ್ಷದವರು ಯಾವಾಗಾದ್ರೂ ಸೀಟ್ ಅನೌನ್ಸ್ ಮಾಡ್ಕೊಳ್ಳಿ ಬಿಡಿ. ಬೇರೆ ಪಕ್ಷದವರನ್ನ ಸೆಳೆಯಲು ನಮ್ಮದೇನು ಆಯಸ್ಕಾಂತನಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Karnataka Elections : ಸುವರ್ಣ ಮಂಡ್ಯ ಪುಸ್ತಕದಲ್ಲಿದೆ ಉರಿಗೌಡ- ನಂಜೇಗೌಡರ ಹೋರಾಟದ ಉಲ್ಲೇಖ!