Site icon Vistara News

Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

wayanad landslide mandya family

ಚಾಮರಾಜನಗರ: ಭಯಾನಕ ವೈನಾಡ್‌ ಭೂಕುಸಿತ (Wayanad Landslide, Kerala Landslide) ದುರಂತದಲ್ಲಿ ಮಂಡ್ಯ ಮೂಲದ ಇಡೀ ಕುಟುಂಬವೇ (Mandya Family swept) ಕೊಚ್ಚಿಹೋಗಿದೆ. 9 ಜನರ ಕುಟುಂಬ ಸಂಪೂರ್ಣ ನಾಶವಾಗಿದ್ದು, ಮೂವರ ಶವ ಪತ್ತೆಯಾಗಿದೆ. ಇನ್ನೂ ಆರು ಮಂದಿಯ ದೇಹಗಳು ಪತ್ತೆಯಾಗಬೇಕಿವೆ.

ಸೋಮವಾರ ನಡೆದ ಭಾರೀ ಭೂಕುಸಿತದಲ್ಲಿ ಮಂಡ್ಯ ಮೂಲದ ಕುಟುಂಬದ 9 ಜನ ಕಾಣೆಯಾಗಿದ್ದಾರೆ. ಈ ಪೈಕಿ ಮೂವರ ಶವಗಳನ್ನು ರಕ್ಷಣಾ ತಂಡಗಳು ಹೊರ ತೆಗೆದಿವೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಈ ಕುಟುಂಬ ಇಲ್ಲಿನ ಟೀ ಎಸ್ಟೇಟ್‌ನಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಸಾವಿತ್ರಿ, ಅವರ ಮೊಮ್ಮಗ ಅಚ್ಚು, ಸವಿತಾ ಎಂಬವರ ಪುತ್ರ ಶ್ರೀಕುಟ್ಟಿ ಸಾವಿಗೀಡಾಗಿರುವುದು ಖಚಿತವಾಗಿದೆ. ಇನ್ನುಳಿದ ಆರು ಜನರಿಗಾಗಿ ಹುಡುಕಾಟ ಮುಂದುವರಿದಿದೆ. ಇವರು ಕೇರಳಕ್ಕೆ ಬಂದು ನೆಲೆಸಿ 30 ವರ್ಷಗಳು ಆಗಿವೆ.

ಒಂದು ಮೆಸೇಜ್‌ನಿಂದ ಉಳಿಯಿತು ಜೀವ! ಪಾರಾದ ಕನ್ನಡಿಗ ಕಾರು ಚಾಲಕ

ಬೆಂಗಳೂರು: ಒಂದು ಅಲರ್ಟ್‌ ಮೆಸೇಜ್‌ ಪರಿಣಾಮ ಕನ್ನಡಿಗ ಕಾರು ಚಾಲಕನೊಬ್ಬ ವೈನಾಡಿನ ರುದ್ರಭಯಾನಕ ಭೂಕುಸಿತದ ನಡುವೆ ಜೀವ ಉಳಿಸಿಕೊಂಡಿದ್ದಾರೆ. ಸಾವಿನೂರಿಂದ ಈತ ಬಚಾವ್ ಆಗಿ ಬಂದದ್ದೇ ರೋಚಕ. ಮಿಡ್‌ನೈಟ್ ಬಂದ ಅದೊಂದು ಮೆಸೇಜ್ ಯುವಕನ ಪ್ರಾಣ ಉಳಿಸಿದ ಕತೆ ಇಲ್ಲಿದೆ.

ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿರುವ ಹಾವೇರಿ ಮೂಲದ ಮಂಜುನಾಥ್‌, ಇಬ್ಬರು ಯುವಕರು ಹಾಗೂ ಯುವತಿಯರನ್ನು ಬಾಡಿಗೆ ಕರೆದುಕೊಂಡು ವೈನಾಡ್‌ಗೆ ಹೋಗಿದ್ದರು. ದಂಪತಿಗಳು ಉತ್ತರ ಭಾರತ ಮೂಲದವರು. ಎರಡೂ ಜೋಡಿ ವಯನಾಡ್‌ನ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು.

ಮಂಜುನಾಥ್ ರೆಸಾರ್ಟ್‌ನಿಂದ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿ, ಅದೇ ಕಾರಿನಲ್ಲಿ ರಾತ್ರಿ ನಿದ್ದೆಗೆ ಜಾರಿದ್ದರು. ಮಧ್ಯರಾತ್ರಿ ಒಂದು ಗಂಟೆ 15 ನಿಮಿಷಕ್ಕೆ ಭೂ ಕುಸಿತವಾಗಿದೆ. ಇದರಿಂದ ರೆಸಾರ್ಟ್‌ನಲ್ಲಿದ್ದ ಹಲವರು ಮಣ್ಣುಪಾಲಾಗಿದ್ದಾರೆ. ಆದರೆ ಚಾಲಕ ಇದ್ಯಾವುದರ ಪರಿವೆಯೇ ಇಲ್ಲದೆ ನಿದ್ದೆಗೆ ಜಾರಿದ್ದರು. ಭೂಕುಸಿತದ ಬಳಿಕ ನದಿ ಪಾತ್ರ ವಿಶಾಲವಾಗಿದ್ದು, 15 ಅಡಿ ಅಗಲದ ನದಿ 150 ಅಡಿಗಳಷ್ಟು ಅಗಲವಾಗಿ ಮಣ್ಣು ಕಲ್ಲು ಮರಗಳನ್ನು ತುಂಬಿಕೊಂಡು ಅಬ್ಬರಿಸಿ ಹರಿದಿದೆ. ಮಂಜುನಾಥ್‌ ಕಾರಿಗೂ ಜಲದಿಗ್ಬಂಧನವಾಗಿದೆ.

ನೀರಿನ ಹೊಡೆತಕ್ಕೆ ಕಾರು ಉಲ್ಟಾ ಮುಖ ಮಾಡಿದೆ. ಈ ವೇಳೆ ಚಾಲಕ ತರಾತುರಿಯಲ್ಲಿ ಕಾರ್ ಚಲಾಯಿಸಲು ಮುಂದಾಗಿದ್ದ. ಕಾರು ಆನ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಕಾರಿನ‌‌ ಮಾಲಕ ಸಚಿನ್‌ಗೆ ಅಲರ್ಟ್‌ ಮೆಸೇಜ್ ಹೋಗಿದೆ. ಸಚಿನ್‌ ಮೊಬೈಲ್‌ನಲ್ಲಿ ಕಾರಿನ ಆಕ್ಸೆಸ್ ಹೊಂದಿದ್ದರು. ಜಿಪಿಎಸ್ ಆನ್ ಆಗುತ್ತಿದ್ದಂತೆ ಆಟೋಮ್ಯಾಟಿಕ್ ಮೆಸೇಜ್ ಬಂದಿತ್ತು. ಹೊತ್ತಲ್ಲದ ಹೊತ್ತಿನಲ್ಲಿ ಗಾಡಿ ಆನ್ ಆದ ಮೆಸೇಜ್ ನೋಡಿ ಮಾಲೀಕ ಚಕಿತರಾಗಿ, ಕೂಡಲೇ ಈ ವಿಚಾರವಾಗಿ ಚಾಲಕನಿಗೆ ಕಾಲ್ ಮಾಡಿದ್ದಾರೆ.

ಈ ವೇಳೆ ಪ್ರವಾಹದ ಬಗ್ಗೆ ಚಾಲಕ ಮಂಜುನಾಥ್‌ ವಿವರಿಸಿದ್ದರು. ಮಂಜುನಾಥ್‌ಗೆ ಧೈರ್ಯ ತುಂಬಿದ್ದ ಮಾಲೀಕ ಸಚಿನ್, ಅದೇ ಜಾಗದಲ್ಲಿದ್ದ ತನ್ನ ಪರಿಚಯಸ್ಥರಿಗೆ ಮಾಹಿತಿ ನೀಡಿದ್ದರು. ಇದರಿಂದ ಚಾಲಕನ ಸಹಾಯಕ್ಕೆ ಜನ ಬಂದಿದ್ದಾರೆ. ನಂತರ ಜಿಪಿಎಸ್ ಟ್ರ್ಯಾಕ್ ಮಾಡಿ ಚಾಲಕನನ್ನು ಕೆಸರು ನೀರಿನ ಮಧ್ಯದಿಂದ ರಕ್ಷಣೆ ಮಾಡಲಾಗಿದೆ. ಬದುಕುಳಿದು ಬಂದಿರುವ ಮಂಜುನಾಥ್‌, ತಮ್ಮನ್ನು ಕಾಪಾಡಿದವರಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: Wayanad Landslide: ಭಯಾನಕ ಸಾವಿನಿಂದ ರಕ್ಷಿಸಿತು ಸಾಕಿದ ಹಸು! ಕನ್ನಡಿಗ ಕುಟುಂಬದ ಅನುಭವ

Exit mobile version