ಮಂಡ್ಯ: ಚುನಾವಣೆಗೆ ಮೊದಲು ಮೇಕೆ ದಾಟು ಯೋಜನೆಗೆ (Mekedatu project) ಬಗ್ಗೆ ನಮ್ಮ ನೀರು ನಮ್ಮ ಹಕ್ಕು (Namma Neeru Namma Hakku) ಎಂದು ಹೋರಾಟ ಮಾಡಿದವರು ಈಗೆಲ್ಲಿದ್ದಾರೆ ಎಂದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ಉದ್ದೇಶಿಸಿ ನೇರವಾಗಿ ಪ್ರಶ್ನೆ ಕೇಳಿದ್ದಾರೆ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ (BY Vijayendra).
ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ್ (Dr. CN Ashwath Narayana) ಅವರ ಜತೆ ಮಾಧ್ಯಮ ಗೋಷ್ಠಿ ನಡೆಸಿದ ಬಿ ವೈ ವಿಜಯೇಂದ್ರ ಅವರು, ರಾಜ್ಯದಲ್ಲಿ ಹಲವು ರೀತಿಯ ಅಪಪ್ರಚಾರ ಮಾಡಿ ಕಾಂಗ್ರೆಸ್ ನವರು ನಾಲ್ಕು ತಿಂಗಳ ಹಿಂದೆ ಅಧಿಕಾರಕ್ಕೆ ಬಂದರು. ಸರ್ಕಾರದ ಬಗೆಗೆ ನಾವೂ ನಿರೀಕ್ಷೆ ಇಟ್ಟುಕೊಂಡಿದ್ದೆವು. ನೀರಾವರಿ ಬಗೆಗೆ ಡಿಕೆಶಿ ಅವರು ಪಾದಯಾತ್ರೆ ಕೂಡ ಮಾಡಿದ್ದರು. ಮೇಕೆದಾಟು ಯೋಜನೆ ಬಗೆಗೆ ನಮ್ಮನೀರು ನಮ್ಮ ಹಕ್ಕು ಎಂಬ ಹೋರಾಟ ಮಾಡಿದ್ದರು. ರಾಜ್ಯದ ಜನರಿಗೆ ಒಳಿತನ್ನು ಮಾಡ್ತಾರೆ ಎಂದು ನಾವು, ಜನರು ಅಂದುಕೊಂಡಿದ್ದರು. ಆದರೆ ಈಗ ಅವರ ನಿಜವಾದ ಬಣ್ಣ ಬಯಲಾಗಿದೆ ಎಂದು ಹೇಳಿದರು.
ʻʻನಮ್ಮ ನೀರು ನಮ್ಮ ಹಕ್ಕು ಎಂಬ ಹೋರಾಟ ಈಗ ಎಲ್ಲೋಯ್ತು? ಅಧಿಕಾರದ ಅಮಲಿನಲ್ಲಿ ರೈತರ ಬಗೆಗಿನ ಕಾಳಜಿ ಮರೆತು ಹೋಗಿದೆಯಾ? ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ನಿಮ್ಮ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆʼʼ ಎಂದು ಹೇಳಿದರು.
ಇಂಡಿಯಾ ಕೂಟದ ಸಂತೋಷಕ್ಕಾಗಿನ ನಿಮ್ಮ ಕೆಲಸ ಅಕ್ಷಮ್ಯ
ʻʻʻಇಂಡಿಯ ಕೂಟವನ್ನು ಸಂತೋಷ ಪಡಿಸುವುದಕ್ಕೋಸ್ಕರವಾಗಿ ನಾಡಿನ ರೈತರ ಆಸಕ್ತಿ ಮರೆತು ತಮಿಳುನಾಡಿಗೆ ಸಹಕಾರ ನೀಡುವ ಕೆಲಸ ಮಾಡುತ್ತಿರುವ ನಿಮ್ಮ ಕೆಲಸ ಅಕ್ಷಮ್ಯ ಅಪರಾಧ. ರಾಜ್ಯದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಸರ್ಕಾರ ರೈತರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಸರ್ಕಾರದ ಯಾವ ನಡವಳಿಕೆಯೂ ನಾವು ರೈತರ ಪರ ಇದ್ದೀವಿ ಎಂಬುದನ್ನು ಯಾವತ್ತೂ ತೋರಿಸಿಕೊಳ್ಳಲಿಲ್ಲʼʼ ಎಂದು ವಿಜಯೇಂದ್ರ ಹೇಳಿದರು.
ʻʻಚುನಾವಣೆಗೆ ಮೊದಲು ಇದ್ದ ನಿಮ್ಮ ಆಸಕ್ತಿ ಈಗ ಎಲ್ಲೋಗಿದೆ. ಸಿಎಂ, ಡಿಸಿಎಂ ಮತ್ತು ಮಂತ್ರಿಗಳು ಅಧಿಕಾರದ ಅಮಲಿನಲ್ಲಿದ್ದಾರೆ. ಮಳೆ ಅಭಾವ ಉಂಟಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ.
ಶಿವಕುಮಾರ್ ಎಷ್ಟು ಬಾರಿ ದೆಹಲಿಗೆ ಹೋದ್ರೂ ಏನೂ ಪ್ರಯೋಜನವಾಗಲಿಲ್ಲʼʼ ಎಂದು ಹೇಳಿದ ಬಿವೈ ವಿಜಯೇಂದ್ರ, ರೈತ ಹಿತರಕ್ಷಣಾ ಸಮಿತಿಯ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುತ್ತಿದೆ. ಇದರಲ್ಲಿ ರಾಜಕೀಯ ಬೆರೆಸುವ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷವಾಗಿ ನಾವು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆʼʼ ಎಂದು ಬಿವೈ ವಿಜಯೇಂದ್ರ ಹೇಳಿದರು.
ʻʻಒಕ್ಕೂಟದ ವ್ಯವಸ್ಥೆ ಬಗೆಗೆ ಇವರಿಂದ ಪಾಠ ಕಲಿಯಬೇಕಾದ ಅಗತ್ಯ ನಮ್ಮ ಪಕ್ಷಕ್ಕಿಲ್ಲ. ಇವರ ತಪ್ಪನ್ನು ಮುಚ್ಟಿಟ್ಟುಕೊಳ್ಳಲು ಪ್ರಧಾನ ಮಂತ್ರಿ ವಿಚಾರ ತರ್ತಿದ್ದಾರೆ. ಕೊಳ್ಳೆ ಹೊಡೆದು ಹೋದ ಮೇಲೆ ಕೋಟೆ ಬಾಗಿಲು ಹಾಕಿದ್ರು ಎಂಬಂತೆ ರಾಜ್ಯ ಸರ್ಕಾರ ನಡೆದುಕೊಂಡಿದೆʼʼ ಎಂದು ಹೇಳಿದರು ಬಿವೈ ವಿಜಯೇಂದ್ರ.
ಇದನ್ನೂ ಓದಿ : Cauvery water dispute : ಮಳೆ ಬಾರದೇ ಇದ್ದರೆ ಸರ್ಕಾರದಿಂದ ಮೋಡ ಬಿತ್ತನೆ!
ಸರ್ಕಾರ ಬೀಳಿಸುವ ಶಕ್ತಿ ಚಡ್ಡಿ ಹೋರಾಟಕ್ಕಿದೆ ಎಂದ ಅಶ್ವತ್ಥನಾರಾಯಣ
ʻʻಪಟ್ಟೆ ಪಟ್ಟೆ ಚಡ್ಡಿ ಧರಿಸಿ ಬೀದಿಗಿಳಿದು ಹೋರಾಟ ಮಾಡುವ ಮೂಲಕ ನಮ್ಮ ಪಕ್ಷದ ಕಾರ್ಯಕರ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ಇವತ್ತಿನ ಹೋರಾಟ ರೈತರಿಗೆ ಬೆಂಬಲ, ಸಮಿತಿಯ ಹೋರಾಟಕ್ಕೆ ಬೆಂಬಲ, ಸರ್ಕಾರದ ವಿರುದ್ಧ ಹೋರಾಟʼʼ ಎಂದು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ʻʻಸಿಎಂ, ಡಿಸಿಎಂ ಇಬ್ಬರೂ ನೀರನ್ನ ಬಿಡಲ್ಲ ಎಂದು ಹೇಳಿದ್ದರು. ಆದರೆ ಅವರು ಕೇಳುವ ಮೊದಲೇ ನೀರನ್ನ ಬಿಡ್ತಾನೇ ಇದ್ದಾರೆ. ಅವರಿಗೆ ಎರಡನೇ ಬೆಳೆಗೆ ನೀರು. ನಮಗೆ ಒಂದು ಬೆಳೆಗೂ ನೀರಿಲ್ಲ. ನೀವು ಯಾವ ರೀತಿ ವಾದ ಮಾಡ್ತಿದ್ದೀರಿ. ನಿಮಗೆ ಜವಾಬ್ದಾರಿ ಇದೆಯಾ? ನೀರು ಬಿಡುವುದನ್ನ ನಿಲ್ಲಿಸಿ ಅಥವಾ ಅಧಿಕಾರ ಬಿಟ್ಟು ಹೊರಡಿʼʼ ಎಂದು ಅಶ್ವತ್ಥನಾರಾಯಣ ಹೇಳಿದರು.
ನೀರು ಕೊಡಿ ಅಂದರೆ ಮದ್ಯ ಕುಡೀರಿ ಅಂತಿದ್ದಾರೆ
ʻʻನಮಗೆ ಕಾವೇರಿ ನೀರು ಕೊಡ್ರಿ ಎಂದ್ರೆ ಹಳ್ಳಿ ಹಳ್ಳಿಯಲ್ಲೂ ಜನರನ್ನು ಮದ್ಯ ಕುಡಿಸಲು ಮುಂದಾಗಿದ್ದಾರೆ. ಇದು ವಿಸ್ಕಿ, ರಮ್, ಬ್ರಾಂದಿ ಕೊಡೋ ಸರ್ಕಾರವಾಗಿದೆ. ರೈತರಿಗೆ ನೀರೇ ಸಿಗದ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆʼʼ ಎಂದು ಹೇಳಿದ ಅಶ್ವತ್ಥನಾರಾಯಣ ಅವರು ರೈತರಿಗೆ ಎಕರೆಗೆ ನಷ್ಟ ಪರಿಹಾರ ಎಂಬಂತೆ 25 ಸಾವಿರ ರೂ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದರು.