Site icon Vistara News

Wife kills husband : ತಾರಕಕ್ಕೇರಿದ ಜಗಳ: ಮಗನ ಜತೆ ಸೇರಿ ಗಂಡನನ್ನೇ ಕೊಂದ ಹೆಂಡತಿ

Mandya murder family photo

ಮಂಡ್ಯ: ಗಂಡನಿಂದ ಹೆಂಡತಿಯ ಕೊಲೆ ಎಂಬ ಸುದ್ದಿಯನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ, ಫಾರ್‌ ಎ ಚೇಂಜ್‌ ಇಲ್ಲಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ (Wife Kills Husband), ಅದೂ ಕೂಡಾ ತನ್ನ ಮಗನನ್ನು ಕರೆಸಿಕೊಂಡು. ಗಂಡ-ಹೆಂಡತಿ (Tussle between Husband and wife) ನಡುವೆ ಬಹುಕಾಲದಿಂದ ನಡೆಯುತ್ತಿದ್ದ ಜಗಳ ಈಗ ಅತಿರೇಕದ ಹಂತ ತಲುಪಿ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ.

ಈ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆ (Mandya News) ಮದ್ದೂರು ತಾಲ್ಲೂಕಿನ ಚಾಪುರದೊಡ್ಡಿ ಗ್ರಾಮದಲ್ಲಿ. ಇಲ್ಲಿನ ಉಮೇಶ್‌ ಎಂಬ 45 ವರ್ಷದ ವ್ಯಕ್ತಿಯೇ ಕೊಲೆಯಾದವನು. ಕೊಲೆಗಾರರು ಆತನ ಪತ್ನಿ ಸವಿತಾ ಮತ್ತು ಅವಳ ಮಗ ಶಶಾಂಕ್‌.

ಉಮೇಶ್‌ ಮತ್ತು ಸವಿತಾಗೆ ಸುಮಾರು 20 ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ ಅವರಿಬ್ಬರ ನಡುವಿನ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ನಿತ್ಯ ಜಗಳದ ಬದುಕು ನರಕದಂತಿತ್ತು. ಹೀಗಾಗಿ ಮೂರು ತಿಂಗಳ ಹಿಂದೆ ಸವಿತಾ ತನ್ನ ಗಂಡನನ್ನು ತೊರೆದು ಆಗಷ್ಟೇ ಉದ್ಯೋಗ ಹಿಡಿದಿದ್ದ ಮಗನ ಜತೆ ಬೆಂಗಳೂರಿಗೆ ಹೋಗಿ ನೆಲೆಸಿದ್ದರು.

ಗುರುವಾರ ಪಿತೃಪಕ್ಷದ ಕಾರಣಕ್ಕಾಗಿ ಹಿರಿಯರಿಗೆ ಎಡೆ ಇಡಲೆಂದು ಸವಿತಾ ಬೆಂಗಳೂರಿನಿಂದ ಚಾಪುರದೊಡ್ಡಿ ಗ್ರಾಮಕ್ಕೆ ಬಂದಿದ್ದಳು. ಆಕೆ ಬಂದಿದ್ದು ಗಂಡನ ಮನೆಗೆ. ಗಂಡನ ಜತೆ ವೈಮನಸ್ಸಿದ್ದರೂ ಮನೆಯವರ ಜತೆ ಸಾಧಾರಣ ಉತ್ತಮ ಎಂಬ ಬಾಂಧವ್ಯವೇ ಇತ್ತು ಸವಿತಾಗೆ. ಹೀಗಾಗಿ ಹಿರಿಯರ ಕಾರ್ಯಕ್ಕೆಂದು ಆಕೆ ಬಂದಿದ್ದಳು.

ಆದರೆ, ಉಮೇಶ ಆಕೆಯನ್ನು ಮನೆ ಪ್ರವೇಶ ಮಾಡಲು ಬಿಟ್ಟಿರಲಿಲ್ಲ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಯಾವ ಕಾರಣಕ್ಕೂ ಮನೆಯೊಳಗೆ ಪ್ರವೇಶ ಮಾಡಬಾರದು ಎಂದು ಹೇಳಿದ ಉಮೇಶ ಆಕೆಯ ಬಗ್ಗೆ ಹಲವು ಆಪಾದನೆಗಳನ್ನು ಮಾಡಿದ್ದ.

ಇದರಿಂದ ಆಕ್ರೋಶಿತಳಾದ ಸವಿತಾ ಮಗ ಶಶಾಂಕನಿಗೆ ಫೋನ್‌ ಮಾಡಿ ಕೂಡಲೇ ಬರುವಂತೆ ಸೂಚಿಸಿದಳು. ಮಗ ಬೆಂಗಳೂರಿನಿಂದ ಬರುವವರೆಗೂ ಮನೆಯ ಆಸುಪಾಸಿನಲ್ಲೇ ಇದ್ದಳು. ಶಶಾಂಕ್‌ ಬಂದ ಕೂಡಲೇ ಇಬ್ಬರೂ ಸೇರಿ ಉಮೇಶನನ್ನು ಪ್ರಶ್ನೆ ಮಾಡಿದ್ದಾರೆ. ಯಾಕೆ ಮನೆಯೊಳಗೆ ಬಿಡುತ್ತಿಲ್ಲ ಎಂದು ಕೇಳಿದ್ದಾರೆ.

ಆದರೆ, ಉಮೇಶ ಯಾವುದಕ್ಕೂ ಸ್ಪಂದಿಸದೆ ಇದ್ದಾಗ ಮತ್ತು ಆರೋಪಗಳನ್ನೇ ಮಾಡಲು ತೊಡಗಿದಾಗ ಸಿಟ್ಟುಗೊಂಡ ತಾಯಿ ಮತ್ತು ಮಗ ಸೇರಿ ರೀಪು ಪಟ್ಟಿಯಿಂದ ಉಮೇಶ್‌ ಮೇಲೆ ಹಲ್ಲೆ ಮಾಡಿದರು. ಹೊಡೆತಗಳು ಎಲ್ಲೆಂದರಲ್ಲಿ ಬಿದ್ದು ತಲೆಗೂ ಗಾಯವಾಯಿತು. ಉಮೇಶ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: Murder Case: ಮಹಿಳೆಯ ಕೊಲೆ ಮಾಡಿ ಕಾಣೆಯಾದ ಕಥೆ ಕಟ್ಟಿದವರು 3 ವರ್ಷದ ಬಳಿಕ ಅಂದರ್‌

ಆದರೆ, ಜಗಳ, ಮತ್ತು ಸಿಟ್ಟಿನ ಕೈಗೆ ಕೊಟ್ಟ ಬುದ್ಧಿಯಿಂದಾಗಿ ಸಾವು ಸಂಭವಿಸಿದ್ದನ್ನು ತಿಳಿದು ವಾಸ್ತವಕ್ಕೆ ಬಂದ ಸವಿತಾ ಮತ್ತು ಶಶಾಂಕ್‌ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸಾವು ಸಂಭವಿಸಿದ್ದರಿಂದ ಭಯಗೊಂಡ ಮನೆಯವರು ಪೊಲೀಸರಿಗೆ ದೂರು ನೀಡಿದರು.

ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಪೊಲೀಸರು ಕೊಲೆ ಮಾಡಿದ ತಾಯಿ ಮತ್ತು ಮಗನಿಗಾಗಿ ಹುಡುಕುತ್ತಿದ್ದಾರೆ.

Exit mobile version