ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಬೆಳಗಾವಿ ಜೈಲಿನಲ್ಲಿ ತರಬೇತಿ ನೀಡಿದವನು ಅಂತಾರಾಷ್ಟ್ರೀಯ ಕುಖ್ಯಾತ ಲಷ್ಕರೆ ತಯ್ಬಾದ ಉಗ್ರನಾಗಿದ್ದ ಎಂಬದು ಬಹಿರಂಗವಾಗಿದೆ. ಮಹಾರಾಷ್ಟ್ರ ಪೊಲೀಸರ ತನಿಖೆ ವೇಳೆ ಈ ಕುರಿತ ಸ್ಫೋಟಕ ಮಾಹಿತಿಗಳು ಹೊರಕ್ಕೆ ಬಂದಿವೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ಉಗ್ರ ಶಾರೀಕ್‌ಗೆ ಲಷ್ಕರೆ ತಯ್ಬಾದ ಸದಸ್ಯ ಉಗ್ರ ಅಪ್ಸರ್ ಪಾಷ ತರಬೇತಿ ನೀಡಿದ್ದ. ಈತ 2005ರಲ್ಲಿ ಬೆಂಗಳೂರಿನ ಐಐಎಸ್ಸಿ ಮೇಲಿನ ಭಯೋತ್ಪಾದಕ ದಾಳಿಯ ಆರೋಪಿಯಾಗಿದ್ದಾನೆ. 2012ರಲ್ಲಿ ಜಮ್ಮುಕಾಶ್ಮೀರದಲ್ಲಿ ಉಗ್ರರಿಗೆ ತರಬೇತಿ ನೀಡಿದ ಕೇಸ್‌ನಲ್ಲೂ ಇವನು ಆರೋಪಿ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಬಂಧಿತನಾಗಿ ಮಹಾರಾಷ್ಟ್ರ ಪೊಲೀಸರ ವಶದಲ್ಲಿದ್ದಾನೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವೇಳೆ ಈತ ಇಸ್ಲಾಮಿಕ್ ಸ್ಟೇಟ್ ಮೂಲಭೂತವಾದದ ಬೋಧನೆ ಮಾಡುತ್ತಿದ್ದ. ಜೈಲಿನಲ್ಲೇ ಮೂಲಭೂತವಾದ ಬೋಧನೆ ಹಾಗೂ ಬಾಂಬ್ ಸ್ಫೋಟಕ ತಯಾರಿಸುವ ಬಗ್ಗೆ ತರಬೇತಿ ನೀಡುತ್ತಿದ್ದ. ಹಾಗೆಯೇ ಬೆಳಗಾವಿ ಜೈಲಿನಲ್ಲಿ ಉಗ್ರ ಶಾರೀಕ್‌ಗೆ ತರಬೇತಿ ನೀಡಿದ್ದ. ಮಹಾರಾಷ್ಟ್ರ ಪೊಲೀಸರ ತನಿಖೆ ವೇಳೆ ಇದು ಬೆಳಕಿಗೆ ಬಂದಿದೆ. ಸದ್ಯ ತನಿಖೆ ನಡೆಸಿ ಕೇಂದ್ರ ತನಿಖಾ ಸಂಸ್ಥೆಗಳಿಗೆ ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ನವಂಬರ್‌ನಲ್ಲಿ ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟವಾಗಿತ್ತು. ಸದ್ಯ ಉಗ್ರ ಶಾರೀಕ್ ಎನ್‌ಐಎ ವಶದಲ್ಲಿದ್ದಾನೆ.
ಇದನ್ನೂ ಓದಿ: ಮಂಗಳೂರು ಸ್ಫೋಟ | 15 ಕುಕ್ಕರ್ ಬಾಂಬ್‌ಗೆ ರೆಡಿ ಮಾಡಿದ್ದ ಶಾರಿಕ್: ಮಾಜ್, ಯಾಸಿನ್ ಕೂಡಾ ಸದ್ಯವೇ ಎನ್‌ಎಐ ಕಸ್ಟಡಿಗೆ