Site icon Vistara News

ಮಂಗಳೂರು ಸ್ಫೋಟ | ಶಾರಿಕ್‌ನ ಹಿಂದಿದ್ದಾನೆ ಮತ್ತೊಬ್ಬ ಮೇನ್‌ ಹ್ಯಾಂಡ್ಲರ್‌ ತೀರ್ಥಹಳ್ಳಿಯ ಅಬ್ದುಲ್ ‌ಮತೀನ್ ತಾಹಾ

matheen ahmed

ಮಂಗಳೂರು: ಇಲ್ಲಿನ ನಾಗುರಿಯಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ (ಮಂಗಳೂರು ಸ್ಫೋಟ) ಗಾಯಗೊಂಡವನು ತೀರ್ಥಹಳ್ಳಿಯ ಸೊಪ್ಪಿನಗುಡ್ಡೆಯ ಶಾರಿಕ್‌ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಆತನಿಗೆ ವಿದೇಶಿ ಟೆರರ್‌ ಸಂಘಟನೆ ಜತೆ ಸಂಬಂಧ ಇರುವುದನ್ನು ಬೆಟ್ಟು ಮಾಡಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಈ ಕೃತ್ಯದ ಹಿಂದೆ ಮೇನ್‌ ಹ್ಯಾಂಡ್ಲರ್‌ ಆಗಿ ಕೆಲಸ ಮಾಡುತ್ತಿರುವುದು ತೀರ್ಥಹಳ್ಳಿ ಮೂಲದವನೇ ಆಗಿರುವ, ಈಗ ತಲೆ ಮರೆಸಿಕೊಂಡಿರುವ ಅಬ್ದುಲ್‌ ಮತೀನ್‌ ತಾಹಾ ಎಂದು ಹೇಳಿದ್ದಾರೆ. ಆತ ಕಳೆದ ಹಲವು ವರ್ಷಗಳಿಂದ ಕಾಣೆಯಾಗಿದ್ದು, ಆತನ ಜತೆಗೆ ಶಾರಿಕ್‌ಗೆ ಸಂಬಂಧವಿದೆ. ಆತನ ಸೂಚನೆಯ ಮೇರೆಗೆ ಶಾರಿಕ್‌ ಕೆಲಸ ಮಾಡುತ್ತಿದ್ದಾನೆ ಎನ್ನುವುದು ಪೊಲೀಸರ ಹೇಳಿಕೆ.

ಅಬ್ದುಲ್‌ ಮತೀನ್‌ನ ಪತ್ತೆಗಾಗಿ ಪೊಲೀಸರು ಮತ್ತು ಎನ್‌ಐಎ ತೀವ್ರ ಪ್ರಯತ್ನಗಳನ್ನು ನಡೆಸುತ್ತಿದೆ. ಅವನು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಪೂರಕವಾದ ಮಾಹಿತಿಯನ್ನು ಕೊಡುವವರಿಗೆ ಎರಡು ಲಕ್ಷ ರೂ. ನೀಡುವುದಾಗಿ ಎನ್‌ಐಎ ಘೋಷಣೆ ಮಾಡಿದೆ ಎಂದು ಎಡಿಜಿಪಿ ತಿಳಿಸಿದರು.

ಮಂಗಳೂರು ಸ್ಫೋಟದ ಬಗ್ಗೆ ಎಡಿಜಿಪಿ ಅಲೋಕ್‌ ಕುಮಾರ್‌ ನೀಡಿದ ಮಾಹಿತಿಯ ಸಾರ ಇಲ್ಲಿದೆ.
ಮಂಗಳೂರಿನ ನಾಗುರಿಯಲ್ಲಿ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಪರಿಶೀಲಿಸಿದಾಗ ಆತನಲ್ಲಿ ಒಂದು ಆಧಾರ್‌ ಕಾರ್ಡ್‌ ಸಿಕ್ಕಿತ್ತು. ಅದರಲ್ಲಿ ಹುಬ್ಬಳ್ಳಿಯ ಪ್ರೇಮ್ ರಾಜ್ ವಿಳಾಸ ಇತ್ತು. ಇದನ್ನು ಪರಿಶೀಲಿಸಿದಾಗ ಆ ನಿರ್ದಿಷ್ಟ ವ್ಯಕ್ತಿ ತುಮಕೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಗ್ಯಾಂಗ್‌ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ಹುಬ್ಬಳ್ಳಿಯವರಾದ ಇವರು ಎರಡು ಬಾರಿ ಆಧಾರ್‌ ಕಾರ್ಡ್‌ ಕಳೆದುಕೊಂಡಿದ್ದರು. ಹೀಗಾಗಿ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಸಾಮಾನ್ಯ ತನಿಖೆಯಲ್ಲೇ ಸ್ಪಷ್ಟವಾಯಿತು ಎಂದು ಎಡಿಜಿಪಿ ತಿಳಿಸಿದರು.

ಶಾರಿಕ್‌ ಮೇಲೆ ಸಂಶಯ ಮೊದಲಿಂದಲೂ ಇತ್ತು
ಮಂಗಳೂರಿನ ಸ್ಫೋಟ ಸಂಭವಿಸಿ, ಆರೋಪಿಯನ್ನು ನೋಡಿದ ಕೂಡಲೇ ಪೊಲೀಸ್‌ ಇಲಾಖೆಗೆ ನಾಪತ್ತೆಯಾಗಿದ್ದ ತೀರ್ಥಹಳ್ಳಿಯ ಶಾರಿಕ್‌ ಮೇಲೆ ಸಂಶಯ ಬಂದಿತ್ತು. ಶಾರಿಕ್‌ ಈ ಹಿಂದೆ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಯಾಗಿದ್ದ. ೨೦೨೨ರ ಆಗಸ್ಟ್‌ ೧೫ರಂದು ಶಿವಮೊಗ್ಗದಲ್ಲಿ ಪ್ರೇಮ್‌ ಸಿಂಗ್‌ ಎಂಬವರ ಮೇಲೆ ಚೂರಿ ಇರಿತದ ಘಟನೆ ನಡೆದು ಜಬಿಯುಲ್ಲಾ ಎಂಬಾತ ಅರೆಸ್ಟ್‌ ಆಗಿತ್ತು.

ಜಬಿಯುಲ್ಲಾನಿಗೆ ಶಾರಿಕ್‌ನ ಕೆಲವು ವಿಚಾರಗಳು ತಿಳಿದಿದ್ದ ಹಿನ್ನೆಲೆಯಲ್ಲಿ ಆತ ಬಾಯಿ ಬಿಡಬಹುದು ಎಂಬ ಭಯದಲ್ಲಿ ಆಗಸ್ಟ್‌ ೨೩ರಂದು ಅಲ್ಲಿಂದ ಪರಾರಿಯಾಗಿದ್ದ. ಈ ನಡುವೆ ಜಬಿಯುಲ್ಲಾ ಬಾಯಿ ಬಿಟ್ಟಿದ್ದು ಕೂಡಾ. ಇದರ ಆಧಾರದಲ್ಲಿ ಶಿವಮೊಗ್ಗದ ಮೊಹ್ಸಿನ್‌ ಹಾಗೂ ಮಂಗಳೂರಿನ ಮಾಜ್‌ ಮುನೀರ್‌ನ ಬಂಧನವಾಗಿತ್ತು. ಅವರು ಶಾರಿಕ್‌ ಜತೆ ಸೇರಿ ಟ್ರಯಲ್‌ ಬ್ಲಾಸ್ಟ್‌ ಮಾಡಿದ್ದು ಬೆಳಕಿಗೆ ಬಂದಿತ್ತು.

ಆಗಸ್ಟ್‌ ೨೩ರಂದು ಪರಾರಿಯಾಗಿದ್ದ ಶಾರಿಕ್‌ ಕೊಯಮತ್ತೂರು, ತಮಿಳುನಾಡು, ಕೇರಳ ಎಲ್ಲಾ ಸುತ್ತಾಡಿ ಮೈಸೂರು ಬಂದಿದ್ದ ಎಂದು ಅಲೋಕ್‌ ಕುಮಾರ್‌ ತಿಳಿಸಿದ್ದರು. ಹುಬ್ಬಳ್ಳಿಗೂ ಹೋಗಿದ್ದ ಆತ ಅಲ್ಲಿ ಪ್ರೇಮ್‌ ರಾಜ್‌ನ ಆಧಾರ್‌ ಕಾರ್ಡ್‌ ಕದ್ದಿದ್ದ.

ಮೈಸೂರಿಗೆ ಹೋಗಿದ್ದ ಆತ ಅಲ್ಲಿ ಮೋಹನ್‌ ಕುಮಾರ್‌ ಅವರ ಮನೆಯಲ್ಲಿ ಬಾಡಿಗೆ ರೂಂ ಪಡೆದುಕೊಂಡು ಮೊಬೈಲ್ ತಯಾರಿ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡ್ತಿದ್ದ. ಇದೀಗ ಮನೆಯವರನ್ನು ಗುರುತಿಸಿ ಮಾಹಿತಿ ಪಡೆದಿದ್ದೇವೆ. ಅವರು ಈತನೇ ಶಾರಿಕ್‌ ಎಂದು ಗುರುತಿಸಿದ್ದಾರೆ. ಇತ್ತ ಶಾರಿಕ್‌ನ ಅವರ ಮಲತಾಯಿ ಶಬನಾ, ಸಹೋದರಿ ಆಫಿಯಾ, ತಾಯಿ ತಂಗಿ ಯಾಸ್ಮೀನ್ ಕೂಡಾ ಈತ ಶಾರಿಕ್‌ ಎಂದು ಗುರುತಿಸಿದ್ದಾರೆ.

ಮಡಿಕೇರಿ ಮಾರ್ಗವಾಗಿ ಬಂದಿದ್ದ
ಶಂಕಿತ ಉಗ್ರ ಶಾಕಿರ್‌ ಮಂಗಳೂರಿಗೆ ಬಂದಿರುವ ಉದ್ದೇಶ ಸ್ಪಷ್ಟವಿಲ್ಲ. ಆದರೆ, ಆತ ಮೈಸೂರಿನಿಂದ ಹೊರಟು ಮಡಿಕೇರಿ ಮಾರ್ಗವಾಗಿ ಬಸ್‌ನಲ್ಲಿ ಮಂಗಳೂರಿಗೆ ಬಂದಿದ್ದಾನೆ. ಅಲ್ಲಿ ನಾಗುರಿಯಲ್ಲಿ ಇಳಿದು ರಿಕ್ಷಾ ಮೂಲಕ ತಾನು ಮೊದಲು ನಿಗದಿ ಮಾಡಿದ್ದ ಸ್ಥಳಕ್ಕೆ ಹೊರಟಿದ್ದಾನೆ. ಅವನು ಎಲ್ಲಿಗೆ ಹೋಗುತ್ತಿದ್ದ ಎನ್ನುವುದು ಸ್ಪಷ್ಟವಾಗಿಲ್ಲ. ಅವನು ಗುಣಮುಖವಾದ ಬಳಿಕ ವಿಚಾರಣೆಯಲ್ಲಿ ಗೊತ್ತಾಗಲಿದೆ ಎಂದಿದ್ದಾರೆ ಎಡಿಜಿಪಿ ಅಲೋಕ್‌ ಕುಮಾರ್‌.

ವಾರದ ಹಿಂದೆ ಮಂಗಳೂರಿಗೆ ಬಂದು ಹೋಗಿದ್ದ
ಶಾಕಿರ್‌ ಈ ಹಿಂದೆ ಮಂಗಳೂರಿನಲ್ಲಿ ಹಲವು ಖತರ್‌ನಾಕ್‌ ಕೃತ್ಯಗಳನ್ನು ನಡೆಸಿದ್ದ. ಈ ಬಾರಿಯೂ ಒಂದು ವಾರದ ಹಿಂದೆ ಒಮ್ಮೆ ಮಂಗಳೂರಿಗೆ ಬಂದು ಸುತ್ತಾಡಿ ಹೋಗಿದ್ದ ಎಂದು ಅಲೋಕ್‌ ಕುಮಾರ್‌ ತಿಳಿಸಿದರು.

ದೊಡ್ಡ ಅನಾಹುತ ತಪ್ಪಿದೆ
ʻʻಇಷ್ಟಾದರೂ ಈಗ ಒಂದು ದೊಡ್ಡ ಅನಾಹುತ ತಪ್ಪಿದೆ ಅನ್ನೋ ನೆಮ್ಮದಿ ಇದೆ. ಬಾಂಬ್ ಬ್ಲಾಸ್ಟ್ ಆಗಿದ್ದರೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗ್ತಾ ಇತ್ತು. ಸಾವು ಸೋವು ಸಂಭವಿಸುತ್ತಿತ್ತು. ಆ ವಿಚಾರದಲ್ಲಿ ದೇವರಿಗೆ ಧನ್ಯವಾದ ಸಲ್ಲಿಸಲೇ ಬೇಕುʼʼ ಎಂದು ಹೇಳಿದರು ಎಡಿಜಿಪಿ ಅಲೋಕ್‌ ಕುಮಾರ್‌. ಮಂಗಳೂರಿಗೆ ತಂದಿದ್ದ ಬಾಂಬನ್ನು ಸರಿಯಾಗಿ ಜೋಡಿಸಿರಲಿಲ್ಲ. ಹೀಗಾಗಿ ಲೋ ಇಂಟೆನ್ಸಿಟಿ ಬಾಂಬ್ ಇದಾಗಿತ್ತು ಎಂದಿದ್ದಾರೆ ಅವರು.

ಚಾಲಕ ಪುರುಷೋತ್ತಮ್‌ಗೆ ಪರಿಹಾರ
ಈ ನಡುವೆ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಸರಕಾರದ ವತಿಯಿಂದ ಪರಿಹಾರ ಕೊಡಿಸಲು ಯತ್ನಿಸುತ್ತೇವೆ. ಅವರ ಸಂಬಂಧಿಕರ ಸಮಸ್ಯೆಗೂ ನಾವು ಸ್ಪಂದನೆ ಕೊಡುತ್ತೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್‌ಗೆ ಐಸಿಸ್‌ ಸಂಪರ್ಕ ಸಾಬೀತು: ಐಸಿಸ್‌ ದಿರಸು ಹಾಕಿ ಕುಕ್ಕರ್‌ ಹಿಡಿದುಕೊಂಡ ಫೋಟೊ ಔಟ್‌

Exit mobile version