ಮೈಸೂರು: ಮಂಗಳೂರು ಬಾಂಬ್ ಸ್ಫೋಟದ ಎಫೆಕ್ಟ್ (ಮಂಗಳೂರು ಸ್ಫೋಟ) ಮೈಸೂರಿಗೆ ಬಲವಾಗಿ ತಟ್ಟಿದೆ. ಅದರಲ್ಲೂ ಬಾಡಿಗೆಗೆ ಮನೆ ನೀಡೋರಿಗೆ ಇದರಿಂದ ಹಲವು ಸವಾಲುಗಳು ಎದುರಾಗಲಿವೆ. ಯಾಕೆಂದರೆ, ಇನ್ನು ಮೈಸೂರು ನಗರದಲ್ಲಿ ಯಾರೇ ಆದರೂ ಮನೆಯನ್ನು ಬಾಡಿಗೆಗೆ ಕೊಡುವುದಿದ್ದರೆ ಪೊಲೀಸ್ ಠಾಣೆಯಿಂದ ಕ್ಲಿಯರೆನ್ಸ್ ಸರ್ಟಿಫಿಕೆಟ್ ಪಡೆಯುವುದು ಕಡ್ಡಾಯ ಮಾಡಲಿದೆ.
ಮಂಗಳೂರು ಸ್ಫೋಟದ ರೂವಾರಿ ಮೊಹಮ್ಮದ್ ಶಾರಿಕ್ ಮೈಸೂರಿನಲ್ಲಿ ಸುಳ್ಳು ದಾಖಲೆ ನೀಡಿ, ನಕಲಿ ಐಡೆಂಟಿಟಿ ಬಳಿಕ ಮನೆ ಮಾಡಿದ್ದರ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೊಸ ಬಾಡಿಗೆ ಮನೆ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ.
ನೂತನ ಬಾಡಿಗೆ ನೀತಿಯಡಿ ಮನೆ ಮಾಲೀಕರು ಬಾಡಿಗೆಗೆ ಮನೆ ಕೊಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಶಂಕಿತ ಉಗ್ರ ಶಾರಿಕ್ ನಕಲಿ ದಾಖಲೆ ನೀಡಿ ಬಾಡಿಗೆ ಮನೆ ಪಡೆದ ಹಿನ್ನೆಲೆಯಲ್ಲಿ ಎಚ್ಚೆತ್ತ ಮೈಸೂರು ಪೊಲೀಸರು ಈ ನಿಯಮ ಜಾರಿ ಮಾಡಿದ್ದಾರೆ.
ಬಾಡಿಗೆ ಮನೆ ನೀಡುವವರು 100 ರೂ. ಪಾವತಿಸಿ ಅರ್ಜಿ ಪಡೆದು ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು. ಅವಿವಾಹಿತರಿಗೆ, ಕುಟುಂಬಗಳಿಗೆ, ಪಿಜಿ ನಡೆಸುವವರಿಗೆ ಪ್ರತ್ಯೇಕ ಅರ್ಜಿಗಳಿವೆ. ಬಾಡಿಗೆಗೆ ಬರುವವರ ಸಮಸ್ತ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಮತ್ತು ಅದನ್ನು ಪೊಲೀಸ್ ಠಾಣೆಗೆ ನೀಡಲು ಅವಕಾಶವಾಗುವಂತೆ ಅರ್ಜಿ ನಮೂನೆಯನ್ನು ರೂಪಿಸಲಾಗಿದೆ. ಕೆಲವೊಂದು ದಾಖಲೆಗಳನ್ನು ಕೂಡಾ ಕೊಡಬೇಕಾಗುತ್ತದೆ.
ಈಗಾಗಲೇ ಬಾಡಿಗೆ ಇರುವವರ ಮಾಹಿತಿಯನ್ನು ಕೂಡಾ ಠಾಣೆಗೆ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಎಲ್ಲಾ ಠಾಣೆಗಳಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಗರ ಪೊಲೀಸ್ ಆಯುಕ್ತ ರಮೇಶ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್ ಕುಕ್ಕರ್ ಬಾಂಬ್ ಹಿಡಿದು ಫೋಟೊ ತೆಗೆಸಿಕೊಂಡಿದ್ದೇಕೆ? ಅವನ ಟಾರ್ಗೆಟ್ ಐಸಿಸ್!