Site icon Vistara News

Mangalore Blast | 2 ಬಾರಿ ಆಧಾರ್‌ ಕಾರ್ಡ್‌ ಕಳೆದುಕೊಂಡಿದ್ದ ಪ್ರೇಮ್‌ ರಾಜ್‌; ತನ್ನ ಪಾತ್ರವಿಲ್ಲವೆಂದು ತುಮಕೂರು ಎಸ್ಪಿಗೆ ಹೇಳಿಕೆ

Mangalore blast Terror link attack auto blast Aadhar card

ತುಮಕೂರು: ಮಂಗಳೂರಿನ ಹೊರ ವಲಯದ ನಾಗುರಿಯಲ್ಲಿ ಶನಿವಾರ (ನ. ೧೯) ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ‌ (Mangalore Blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಯಾಳು ವ್ಯಕ್ತಿಯಲ್ಲಿ ಬಳಿ ಪತ್ತೆಯಾಗಿದ್ದ ಆಧಾರ್‌ ಕಾರ್ಡ್‌ ನಕಲಿ ಎಂದು ತಿಳಿದುಬಂದ ಬೆನ್ನಲ್ಲೇ ಅಸಲಿ ವ್ಯಕ್ತಿಯ ವಿಚಾರಣೆ ಪ್ರಾರಂಭವಾಗಿದೆ. ಅಸಲಿ ಪ್ರೇಮ್‌ ರಾಜ್‌ ಹುಟಗಿ ಎಂಬುವವರು ಈಗ ತುಮಕೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ತಮ್ಮ ಆಧಾರ್‌ ಕಾರ್ಡ್‌ ಕಳೆದುಹೋಗಿದ್ದರ ಬಗ್ಗೆ ವಿವರಣೆ ನೀಡಿದ್ದಾರೆ.

ಹುಬ್ಬಳ್ಳಿಯ ಮೂಲದ ಪ್ರೇಮರಾಜ್‌ ಹುಟಗಿ ತುಮಕೂರಿನಲ್ಲಿ ರೈಲ್ವೆ ಟ್ರ್ಯಾಕ್ ಮೈನ್ ಟೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರೇಮರಾಜ್‌ ಸದ್ಯ ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಎರಡು ಬಾರಿ ಕಳೆದಿತ್ತು ಆಧಾರ್‌ ಕಾರ್ಡ್‌
ಧಾರವಾಡದಿಂದ ಬೆಳಗಾವಿಗೆ ಬಸ್‌ನಲ್ಲಿ ಬರುವಾಗ ಆಧಾರ್ ಕಾರ್ಡ್ ಕಳೆದುಕೊಂಡಿದ್ದಾಗಿ ಪ್ರೇಮರಾಜ್ ಹುಟಗಿ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಅರ್ಜಿ ಹಾಕಿ ಆಧಾರ್‌ ಕಾರ್ಡ್‌ ಅನ್ನು ಪಡೆದುಕೊಂಡಿದ್ದರು. ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಬರುವಾಗ ಮತ್ತೊಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ | Mangalore Blast | ಮಂಗಳೂರು ಆಟೋ ಸ್ಫೋಟ ಉಗ್ರಕೃತ್ಯ, ಇದರ ಹಿಂದೆ ದೊಡ್ಡ ಜಾಲವೇ ಇದೆ: ಸಿಎಂ ಬಸವರಾಜ ಬೊಮ್ಮಾಯಿ

ಕರೆ ಮಾಡಿದ್ದರು ಎಡಿಜಿಪಿ ಅಲೋಕ್ ಕುಮಾರ್
ಶನಿವಾರ ರಾತ್ರಿ ಪ್ರೇಮರಾಜ್‌ಗೆ ಕರೆ ಮಾಡಿದ್ದ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು, ಕೂಡಲೇ ತುಮಕೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಿದ್ದರು. ಅದರಂತೆ ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರನ್ನು ಪ್ರೇಮರಾಜ್ ಹುಟಗಿ ಸಂಪರ್ಕ ಮಾಡಿದ್ದಾರೆ.

ನನ್ನ ಹೆಸರಲ್ಲಿ ಈ ರೀತಿಯಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿರುವ ಪ್ರೇಮರಾಜ್ ಹುಟಗಿ, ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನಿನ್ನೆ ನಮ್ಮ‌ ಮನೆಗೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆನ್ನಲಾಗಿದೆ.

ಈ ಬಗ್ಗೆ “ವಿಸ್ತಾರ ನ್ಯೂಸ್” ಜತೆ ಮಾತನಾಡಿದ ಪ್ರೇಮರಾಜ್ ಹುಟಗಿ, ನನಗೆ ಶನಿವಾರ ರಾತ್ರಿ ಎಡಿಜಿಪಿ ಅಲೋಕ್ ಕುಮಾರ್ ಅವರಿಂದ ದೂರವಾಣಿ ಕರೆ ಬಂದಿತ್ತು. ಘಟನೆ ಬಗ್ಗೆ ವಿವರಣೆಯನ್ನು ಪಡೆದುಕೊಂಡರು. ಕೂಡಲೇ ಎಸ್‌ಪಿ ಅವರನ್ನು ಭೇಟಿ ಮಾಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ಮಾಡಿ ಮಾಹಿತಿ ನೀಡಿದ್ದೇನೆ. ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ | Mangalore Blast | ಮೈಸೂರಿನಲ್ಲಿ ಮನೆ ಮಾಡಿದ್ದ ಶಂಕಿತ; ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ

Exit mobile version